ಕಲಬುರಗಿ/ರಾವೂರ: ಸಂಸ್ಕೃತಿ ಪರಂಪರೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶಾಲೆಗಳು, ಶಿಕ್ಷಕರು ಹಾಗೂ ಪಾಲಕರ ಮೇಲೆ ಮಹತ್ತರ ಹೊಣೆಗಾರಿಕೆಯಿದ್ದು ಅದನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಬರಬೇಕು ಎಂದು ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಸಿದ್ಧಲಿಂಗ ಮಹಾಸ್ವಾಮಿಗಳು ನುಡಿದರು.
ಜೇವರ್ಗಿಯ ವಿಶ್ವಮಾನವ ಫೌಂಡೇಶನ್, ಕಲಬುರಗಿಯ ಭೀಮನಗೌಡ ಪರಗೊಂಡ ಗೆಳೆಯರ ಬಳಗ, ರಾವೂರಿನ ಸಿದ್ಧಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆ ಇವುಗಳ ಆಶ್ರಯದಲ್ಲಿ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಮತ್ತು ಮಾಜಿ ಸಚಿವ ಬಿ.ಎಂ. ಪಾಟೀಲ ಸ್ಮರಣಾರ್ಥ ಚಿತ್ತಾಪುರ ತಾಲ್ಲೂಕಿನ ರಾವೂರ ಸಿದ್ಧಲಿಂಗೇಶ್ವರ ಮಠದ ಆವರಣದಲ್ಲಿ ಇಂದು ಬೆಳಗ್ಗೆ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳು ಕುರಿತ ವಿಚಾರಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕಡ್ಡಾಯ ಶಿಕ್ಷಣ, ಶೋಷಣೆ, ಬಲತ್ಕಾರದ ವಿರುದ್ಧದ ಹಕ್ಕುಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಮಕ್ಕಳ ಹಕ್ಕುಗಳ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಪತ್ರಕರ್ತ-ಸಾಹಿತಿ ಶಿವರಂಜನ್ ಸತ್ಯಂಪೇಟೆ ಮಾತನಾಡಿ, ಮಕ್ಕಳ ಅಗತ್ಯ, ಬೇಕು-ಬೇಗಳಿಗೆ ಪಾಲಕರು ಶಿಕ್ಷಕರು ಸ್ಪಂದಿಸಬೇಕು. ಶಿಕ್ಷಣ ಸಂಸ್ಥೆಗಳು ವಿದ್ಯೆ ಕಲಿಸುವುದರ ಜೊತೆಗೆ ವಿನಯವನ್ನೂ ಕಲಿಸಬೇಕು. ನೈತಿಕ ಶಿಕ್ಷಣ ಕಣ್ಮರೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ಮಕ್ಕಳಿಗೆ ನೈತಿಕತೆಯ ಪಾಠ ಹೇಳಿಕೊಡಬೇಕು ಎಂದು ಹೇಳಿದರು.
ಮಕ್ಕಳ ಹಕ್ಕುಗಳ ಕುರಿತು ಅವರಲ್ಲಿ ಜಾಗೃತಿ ಮೂಡಿಸುವುದಲ್ಲದೆ ಅವರ ಅವಶ್ಯಕತೆಯಗಳನ್ನು ಪೂರೈಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಮಕ್ಕಳಿಗೆ ಕೇವಲ ಅಕ್ಷರದ ಶಿಕ್ಷಣ ಸಾಲದು. ಅವರಿಗೆ ಬದುಕುವ ಶಿಕ್ಷಣ ಸಹ ಒದಗಿಸಬೇಕು ಎಂದು ತಿಳಿಸಿದರು.
ಯುವ ಮುಖಂಡ ರಮೇಶ ಚವ್ಹಾಣ, ಶಿಕ್ಷಣ ಸಂಯೋಜಕ ಸಂತೋಷ ವೇದಿಕೆಯಲ್ಲಿದ್ದರು. ಸಂಸ್ಥೆಯ ಕಾರ್ಯದರ್ಶಿ ಡಾ. ಗುಂಡಣ್ಣ ಬಾಳಿ ಅಧ್ಯಕ್ಷತೆ ವಹಿಸಿದ್ದರು. ನಂತರ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ವಿಶ್ವಮಾನವ ಫೌಂಡೇಶನ್ ಅಧ್ಯಕ್ಷ ಭೀಮನಗೌಡ ಪರಗೊಂಡ ಪ್ರಾಸ್ತಾವಿಕ ಮಾತನಾಡಿದರು. ಸಿದ್ಧಲಿಂಗ ಜಿ. ಬಾಳಿ ನಿರೂಪಿಸಿದರು. ಪ್ರಾಚಾರ್ಯ ಕೆ.ಆರ್. ಬಡಿಗೇರ, ಪ್ರಾಥಮಿಕ, ಪ್ರೌಢಶಾಲೆಯ ಮುಖ್ಯೋಪಾದ್ಯಾಯರು ಹಾಜರಿದ್ದರು.