ಕೌಶಲ್ಯ ಮ್ಯಾನ್ ಪವರ್ ಏಜೆನ್ಸಿ ವಿರುದ್ಧ ಹೊರಗುತ್ತಿಗೆ ನೌಕರರ ಬೃಹತ್ ಧರಣಿ

0
115

ಕಲಬುರಗಿ: ಕೌಶಲ್ಯ ಮ್ಯಾನ್ ಪವರ್ ಏಜೆನ್ಸಿಯನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಗುರುವಾರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಮುಂದೆ ಬೃಹತ್ ಪ್ರತಿಭಟನಾ ಧರಣಿ ನಡೆಯಿತು.

ಸಂಘದ ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸುರೇಶ್ ದೊಡ್ಡಮನಿ, ಭಾಗಣ್ಣಾ ದೇವನೂರ್, ರೇಣುಕಾ ಸಂಗೋಳಗಿ, ಫಾತಿಮಾಬೇಗಂ ಫತ್ತೆಪಾಹಡ್, ಮಲ್ಲಮ್ಮ ಕೋಡ್ಲಿ, ಮೇಘರಾಜ್ ಕಠಾರಿ, ಪರಶುರಾಮ್ ಹಡಗಲಿ, ಮಾಪಣ್ಣಾ ಜಾನಕರ್, ಮಹಾಂತ್ ಅವರಳ್ಳಿ, ಶಾಂತಪ್ಪ ಮುನ್ನಳ್ಳಿ, ನಾಗರಾಜ್ ಕಾಳಗಿ, ಶಿವಕುಮಾರ್ ತಡಕಲ್ ಮುಂತಾದವರು ಪಾಲ್ಗೊಂಡಿದ್ದರು.

Contact Your\'s Advertisement; 9902492681

ಪ್ರತಿಭಟನೆಕಾರರು ನಂತರ ಇಲಾಖೆಯ ಜಂಟಿ ನಿರ್ದೇಶಕರಿಗೆ ಮನವಿ ಪತ್ರವನ್ನು ಸಲ್ಲಿಸಿ, ಕೌಶಲ್ಯ ಮ್ಯಾನ್ ಪವರ್ ಏಜೆನ್ಸಿ ನೌಕರರ ಹೆಸರಿನಲ್ಲಿ ಇಪಿಎಫ್, ಇಎಸ್‌ಐ ಹಣವನ್ನು ತುಂಬದೇ ಮೋಸ ಮಾಡಿದ್ದರಿಂದ ಏಜೆನ್ಸಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು. ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಬಾಕಿ ವೇತನ ಪಾವತಿಸುವಂತೆ, ನೌಕರರ ವೇತನದಲ್ಲಿ ಕಡಿತ ಮಾಡಿದ ಇಪಿಎಫ್, ಇಎಸ್‌ಐ ಹಣ ನೌಕರರ ಹೆಸರಿನಲ್ಲಿ ಜಮಾ ಮಾಡದೇ ಇರುವ ಹಣ ನೌಕರರಿಗೆ ಚೆಕ್ ಮೂಲಕ ಪಾವತಿಸುವಂತೆ ಅವರು ಆಗ್ರಹಿಸಿದರು.

ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯಗಳಲ್ಲಿ ಶಿಕ್ಷಕರ ಗುಂಪುಗಾರಿಕೆಯಿಂದ ಸುಳ್ಳು ಆರೋಪ ಹೊರಿಸಿ ನೌಕರರನ್ನು ಕೆಲಸದಿಂದ ತೆಗೆಯುತ್ತಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಎರಡು ವರ್ಷಗಳ ಹಿಂದೆ ಸುಳ್ಳು ಆರೋಪ ಹೊರಿಸಿ ಕೆಲಸದಿಂದ ವಜಾಗೊಳಿಸಿದ ನಾಲ್ವರನ್ನು ಮರು ಸೇವೆಗೆ ತೆಗೆದುಕೊಳ್ಳುವಂತೆ ಅವರು ಒತ್ತಾಯಿಸಿದರು.

ಬಿಸಿಎಂ, ನರ್ಸಿಂಗ್ ವಸತಿ ನಿಲಯಗಳಲ್ಲಿ ಮೂರು ತಿಂಗಳುಗಳ ಹಿಂದೆ ಅಪಘಾತದಲ್ಲಿ ಅಸುನೀಗಿದ ಸಾವಿತ್ರಿ ಪುತ್ರಿಗೆ ಕೆಲಸಕ್ಕೆ ತೆಗೆದುಕೊಳ್ಳುವಂತೆ, ಹೊರಗುತ್ತಿಗೆ ನೌಕರರಿಗೆ ಮ್ಯಾನ್ ಪವರ್ ಏಜೆನ್ಸಿಗಳು ಪ್ರತಿ ವರ್ಷ ತಾತ್ಕಾಲಿಕ ನೇಮಕಾತಿ ಆದೇಶಗಳನ್ನು ಕೊಡಲು ಕ್ರಮ ಕೈಗೊಳ್ಳುವಂತೆ, ಬೆಳಿಗ್ಗೆ ೬ ಗಂಟೆಯಿಂದ ರಾತ್ರಿ ೯ ಗಂಟೆಯವರೆಗೆ ಒಟ್ಟು ೧೫ ತಾಸುಗಳ ಹೊರಗುತ್ತಿಗೆ ನೌಕರರಿಗೆ ದುಡಿಸಿಕೊಳ್ಳುವ ಪದ್ದತಿ ಕೈಬಿಟ್ಟು ಕೇವಲ ೮ ತಾಸುಗಳವರೆಗೆ ಕೆಲಸ ಮಾಡಿಸಲು ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here