ವಾಡಿ: ಮದುವೆಗೆ ಬಂದು ಅಕ್ಷತೆ ಹಾಕುವ ಮೂಲಕ ಆಶೀರ್ವಧಿಸಿ ಶುಭಕೋರಿದ ಬೀಗರು, ನೆಂಟರು ಮತ್ತು ಸ್ನೇಹಿತರೆಲ್ಲರಿಗೂ ಮದುಮಗ ಸಾಹಿತ್ಯ ಕೃತಿ ಜತೆಗೆ ಸಸಿ ಕೊಟ್ಟು ಪರಿಸರ ಕಾಳಜಿ ಮೆರದ ಪ್ರಸಂಗ ಪಟ್ಟಣದಲ್ಲಿ ಕಂಡು ಬಂದಿತು.
ರವಿವಾರ ಪಟ್ಟಣದ ಶ್ರೀಮಲ್ಲಿಕಾರ್ಜುನ ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೋಲಿ ಸಮಾಜದ ಯುವ ಮುಖಂಡ, ಪರಿಸರ ಮತ್ತು ಸಾಹಿತ್ಯ ಪ್ರೇಮಿ ಮಡಿವಾಳ ಬಿದನೂರ ಅವರು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಸುಮಾರು ಎರಡು ನೂರಕ್ಕೂ ಹೆಚ್ಚು ಸಸಿಗಳನ್ನು ಮೊದಲೇ ತರಿಸಿಟ್ಟುಕೊಂಡಿದ್ದ ಮದುಮಗ ಮಡಿವಾಳ, ಅಕ್ಷತೆಯ ನಂತರ ವೇದಿಕೆ ಹತ್ತಿ ಶುಭ ಕೋರಲು ಬಳಿ ಬಂದ ಪ್ರತಿಯೊಬ್ಬರ ಕೈಗೆ ಒಂದೊಂದು ಪುಸ್ತಕ ಹಾಗೂ ಸಸಿ ಕೊಟ್ಟು ಗಮನ ಸೆಳೆದರು.
ಮುಂಗಾರು ಮಳೆಯ ಆರಂಭದಲ್ಲಿ ವಿತರಿಸಲಾದ ನೂರಾರು ಸಸಿಗಳಲ್ಲಿ ಕೆಲವೊಂದಿಷ್ಟಾದರೂ ಭೂಮಿಗೆ ಬೇರು ಬಿಟ್ಟು ಮರವಾಗಿ ನಿಂತರೆ ಪರಿಸರ ಉಳಿಸಿದಂತಾಗುತ್ತದೆ. ಪ್ರಗತಿಪರ ಬರಹಗಾರರ ಸಾಹಿತ್ಯ ಕೃತಿಗಳನ್ನು ಜನರಿಗೆ ವಿತರಿಸಿದರೆ ಅವು ಜ್ಞಾನ ಕೊಟ್ಟು ಮನೆ ಬೆಳಗುತ್ತವೆ. ಪುಸ್ತಕ ವ್ಯಾಪಾರಿಗೂ ಮತ್ತು ಸಾಹಿತ್ಯ ರಚನೆಕಾರರಿಗೂ ಸಹಕಾರ ನೀಡಿದಂತಾಗುತ್ತದೆ ಎಂಬ ಉದ್ದೇಶದಿಂದ ಈ ತಯಾರಿ ಮಾಡಲಾಯಿತು ಎಂದು ಮದುಮಗ ಮಡಿವಾಳ ಬಿದನೂರ ಹಾಗೂ ಮದುಮಗಳು ವಿಜಯಲಕ್ಷ್ಮೀ ಮಾಧ್ಯಮಗಳಿಗೆ ವಿವರಿಸಿದರು.