ಸೊಲ್ಲಾಪುರ: ಗಡಿನಾಡು ಕನ್ನಡ ಜಾಗೃತಿ ಸಾಂಸ್ಕೃತಿಕ ಉತ್ಸವ

0
41

ಸೊಲ್ಲಾಪುರ: ಶಿವಯೋಗಿ ಸಿದ್ಧರಾಮ ನೆಲೆಸಿದ ಸೊಲ್ಲಾಪುರ ಜಿಲ್ಲೆ ಇಂದಿಗೂ ಕಲ್ಯಾಣದಷ್ಟೆ ಪವಿತ್ರ ಮತ್ತು ಅಪ್ಪಟ ಕನ್ನಡಿಗರ ನಾಡು. ಇಲ್ಲಿ ಇಂದಿಗೂ ಕನ್ನಡ ಭಾಷೆ ಪ್ರತಿಯೊಬ್ಬರ ಹೃದಯ ಭಾಷೆಯಾಗಿದೆ. ಇಲ್ಲಿನ ಕನ್ನಡಿಗರು ಕನ್ನಡ ನಾಡಿನ ಆಡಳಿತದಿಂದ ದೂರವಿದ್ದರೂ ಹೃದಯದಿಂದ ಕನ್ನಡಿಗರೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ|| ಸಿ. ಸೋಮಶೇಖರ ಹೇಳಿದರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು, ಆದರ್ಶ ಕನ್ನಡ ಬಳಗ ಮಹಾರಾಷ್ಟ್ರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು, ಮಹಾರಾಷ್ಟ್ರ ಘಟಕ ಇವುಗಳ ಸಹಯೋಗದಲ್ಲಿ ಅಕ್ಕಲಕೋಟ ನಗರದ ಪ್ರಿಯದರ್ಶನಿ ಮಂಗಲ ಕಾರ್ಯಲದಲ್ಲಿ ಆಯೋಜಿಸಿದ ‘ಗಡಿನಾಡು ಕನ್ನಡ ಜಾಗೃತಿ ಸಾಂಸ್ಕೃತಿಕ ಉತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಪ್ರಾಧಿಕಾರದ ಅಧ್ಯಕ್ಷ ಡಾ|| ಸಿ. ಸೋಮಶೇಖರ ಮಾತನಾಡಿದ ಅವರು, ಸೊಲ್ಲಾಪುರದ ಡಾ|| ಜಯದೇವಿತಾಯಿ ಲಿಗಾಡೆಯವರ ಕಾರ್ಯ ಅಮರ. ಅವರ ಕಾರ್ಯ ಮನೆ ಮನೆಗೆ ಮುಟ್ಟಬೇಕಿದೆ.  ಅವರ ನೆನಪಿಗಾಗಿ ಅಕ್ಕಲಕೊಟೆಯಲ್ಲಿ ಡಾ|| ಜಯದೇವಿತಾಯಿ ಲಿಗಾಡೆಯವರ ಹೆಸರಲ್ಲಿ ಕನ್ನಡ ಭವನ ಘೋಷಣೆ ಮತ್ತು ಡಾ|| ಜಯದೇವಿತಾಯಿ ಲಿಗಾಡೆಯವರ ಹೆಸರಲ್ಲಿ ‘ಗಡಿ ಕನ್ನಡ ಚೇತನ’ ಪ್ರಶಸ್ತಿ ಪ್ರಾರಂಭಿಸಲಾಗಿದೆ. ಒಂದು ಕಾಲದಲ್ಲಿ ಕನ್ನಡ ನಾಡು ಗೋದಾವರಿಯಿಂದ ಕಾವೇರಿಯವರೆಗೆ ಹಬ್ಬಿತ್ತು ಎಂದು ಹೇಳುವರು. ಆದರೆ ಸೊಲ್ಲಾಪುರ ಕನ್ನಡಿಗರ ಕನ್ನಡ ಪ್ರೇಮ ನೋಡಿದರೆ ಅದು ಇಂದಿಗೂ ಸತ್ಯವೆಂದು ಹೇಳಬಹುದು. ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಈ ವರೆಗೆ ಮಹಾರಾಷ್ಟ್ರ ಗಡಿ ಭಾಗಕ್ಕೆ ಬಹಳಷ್ಟು ಸಹಕಾರ ನೀಡಿದೆ. ಭವಿಷ್ಯದಲ್ಲಿ ಈ ಭಾಗದಲ್ಲಿ ಕನ್ನಡ ಉಳಿವಿಗಾಗಿ ಇನ್ನಷ್ಟೂ ಕ್ರಿಯಾಯೋಜನೆ ಹಮ್ಮಿಕೊಳ್ಳುತ್ತೇವೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಕ್ಕಲಕೋಟ ಶಾಸಕ ಸಚಿನ್ ಕಲ್ಯಾಣಶೆಟ್ಟಿ ಅವರು, ನಾವು ಹುಟ್ಟಿದ್ದು ಮಹಾರಾಷ್ಟçದಲ್ಲಿ, ಕಲಿತಿದ್ದು ಮರಾಠಿಯಲ್ಲಿ ಆದರೆ ನಮ್ಮ ಮಾತೃ ಭಾಷೆ ಮಾತ್ರ ಕನ್ನಡ. ನಾನು ನನ್ನ ಮತಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕನ್ನಡವನ್ನೆ ಮಾತನಾಡುತ್ತೇನೆ. ಅಕ್ಕಲಕೋಟೆಯಲ್ಲಿ ಕನ್ನಡ ಭವನ ಘೋಷಣೆಯಾಗಿದ್ದು ತುಂಬಾ ಸಂತೋಷವಾಗಿದೆ. ಅದಕ್ಕಾಗಿ ನಾನು ಕೂಡಲೇ ಸ್ಥಳದ ವ್ಯವಸ್ಥೆ ಮಾಡುತ್ತೇನೆ. ಇಲ್ಲಿನ ಕನ್ನಡಿಗರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡುತ್ತೇನೆ. ಇಲ್ಲಿಯವರಿಗೆ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಗಡಿನಾಡಿನಲ್ಲಿ ಕನ್ನಡ ಉನ್ನತಿಗಿಗಾಗಿ ಬಹಳಷ್ಟು ಸಹಾಯ ಮಾಡಿದೆ. ಈ ಮುಂದೆಯು ಇಲ್ಲಿನ ಕನ್ನಡಿಗರ ಬೆನ್ನಲುಬಾಗಿ ನಿಂತು ಆತ್ಮಬಲ ನೀಡಲಿ ಎಂದರು.

ಉತ್ಸವದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದ ಪೂಜ್ಯ ಶ್ರೀ ಕಬೀರ ಮಹಾಸ್ವಾಮೀಜಿ ಅವರು, ನಾವು ಎಲ್ಲೇ ಇದ್ದರು ನಮ್ಮ ಮಾತೃ ಭಾಷೆಯನ್ನು ಮರೆಯಬಾರದು. ತಮ್ಮ ಮಕ್ಕಳಿಗೆ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವುದರಿಂದ ಮಕ್ಕಳ ವಿದ್ಯಾಭ್ಯಾಸ ಗುಣಮಟ್ಟದಾಗಿರುತ್ತದೆ. ಅಲ್ಲದೆ ಮಕ್ಕಳ ಕಲಿಕೆಗೆ ಸುಲಭವಾಗುತ್ತದೆ ಎಂದ ಅವರು, ಅಕ್ಕಲಕೋಟೆಯಲ್ಲಿ ಶೇಕಡಾ ೯೦ ರಷ್ಟು ಕನ್ನಡಿಗರಿದ್ದಾರೆ. ಇವರ ಕನ್ನಡಾಭಿಮಾನವನ್ನು ನಾವೇಲ್ಲರೂ ಮೆಚ್ಚುವಂತದ್ದು ಎಂದರು.

ಗಡಿನಾಡಿನಲ್ಲಿ ಕನ್ನಡಕ್ಕಾಗಿ ಅನುಪಮ ಸೇವೆ ಸಲ್ಲಿಸಿರುವ ಶರಣ, ಸಂತ, ಶಿಕ್ಷಣ, ಸಾಹಿತ್ಯ, ಸಮಾಜಸೇವೆ, ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ೧೧ ಜನ ಸಾಧಕರಿಗೆ ‘ಗಡಿನಾಡು ಕನ್ನಡಿಗ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೊತೆಗೆ ಡಾ|| ಗುರುಸಿದ್ಧಯ್ಯಾ ಸ್ವಾಮಿಯವರು ಬರೆದ ‘ಸೀಮಾತಿತ’ ಮತ್ತು ಯುವ ಸಾಹಿತಿ ಗಿರೀಶ್ ಜಕಾಪುರೆಯವರು ಬರೆದ ‘ಖಾಮೋಷಿ’ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಕಬೀರ ಮಹಾಸ್ವಾಮೀಜಿ, ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮೀಜಿ, ಪೂಜ್ಯ ಶರಣಿ ಮಹಾನಂದಾತಾಯಿ ಹಿರೇಮಠ, ಪ್ರಾಧಿಕಾರದ ಅಧ್ಯಕ್ಷ ಡಾ|| ಸಿ.ಸೋಮಶೇಖರ, ಶಾಸಕ ಸಚಿನ ಕಲ್ಯಾಣಶೆಟ್ಟಿ,  ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳಿಯ ಪ್ರಮುಖ ಕಾರ್ಯಕಾರಿ ವಿಶ್ವಸ್ತ ಅಮೋಲರಾಜೆ ಭೋಸಲೆ, ಯುವನಾಯಕ ಪ್ರಥಮೇಶ ಮ್ಹೇತ್ರೆ, ಹಿರಿಯ ಸಾಹಿತಿ ಡಾ|| ಮಧುಮಾಲ ಲಿಗಾಡೆ, ಶ್ರೀಮತಿ ಸರ್ವಮಂಗಲಾ ಸೋಮಶೇಖರ, ಜಿಲ್ಲಾ ಪ್ರಾಥಮಿಕ ಶಿಕ್ಷಣಾಧಿಕಾರಿ ಕಿರಣ ಲೋಹಾರ, ಕಸಾಪ ಕಲಬುರಗಿ ಜಿಲ್ಲಾಧ್ಯಕ್ಷ ವಿಜಯಕುಮಾರ ತೆಗಲತಿಪ್ಪಿ, ಕಸಾಪ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸೋಮಶೇಖರ ಜಮಶೆಟ್ಟಿ, ಶಿಕ್ಷಣ ವಿಸ್ತಾರ ಅಧಿಕಾರ ರತಿಲಾಲ ಭೂಸೆ, ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಜಾನ ಶೇಖ ಸೇರಿದಂತೆ ಹಲವಾರು ಗಣ್ಯರು ವೇದಿಕೆಯಲ್ಲಿದ್ದರು.

ಮೊದಲಿಗೆ ಮಲ್ಲಿಕಾರ್ಜುನ ಮಂದಿರದಿಂದ ವಿವಿಧ ಕಲಾ ತಂಡಗಳೊಂದಿಗೆ ಭುವನೇಶ್ವರಿ ದೇವಿ ಮೇರವಣಿಗೆಯನ್ನು ನಾಗಣಸೂರಿನ ಡಾ|| ಅಭಿನವ ಬಸವಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ, ನಗರಾಧ್ಯಕ್ಷೆ ಶೋಭಾ ಖೇಡಗಿಯವರ ಅಧ್ಯಕ್ಷತೆಯಲ್ಲಿ ಹಾಗೂ ನಗರಸೇವಕ ಮಹೇಶ ಹಿಂಡೋಳೆ ಮೆರವಣಿಗೆ ರಥೋತ್ಸವಕ್ಕೆ ಚಾಲನೆ ನೀಡಿದರು. ತೆರೆದ ವಾಹನದಲ್ಲಿ ಪ್ರಾಧಿಕಾರದ ಅಧ್ಯಕ್ಷ ಡಾ|| ಸಿ. ಸೋಮಶೇಖರ ಅವರನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ಕನ್ನಡ ಹೋರಾಟಗಾರ ರಾಜಶೇಖರ ಉಮರಾಣಿಕರ ಅವರು ಶ್ರೀ ಧಾನೇಶ್ವರಿ ಅನ್ನ ದಾಸೋಹ ಮನೆ ಉದ್ಘಾಟಿಸಿದರು.

ಮಧ್ಯಾಹ್ನ ೧:೩೦ ಗಂಟೆಗೆ ಜರುಗಿದ ವಿಚಾರಗೋಷ್ಠಿಗೆ ಶ್ರೀ ವಟವೃಕ್ಷ ಸ್ವಾಮಿ ಮಹಾರಾಜ ದೇವಸ್ಥಾನ ಅಧ್ಯಕ್ಷ ಮಹೇಶ ಇಂಗಳೆಯವರು ಚಾಲನೆ ನೀಡಿದರು. ಈ ವೇಳೆಗೆ ಮಹಾರಾಷ್ಟ್ರದ ಅಭಿವೃದ್ಧಿ : ಕನ್ನಡ-ಕನ್ನಡಿಗರ ಪಾತ್ರ ಕುರಿತು ಉಪನ್ಯಾಸಕರಾದ ಆರ್.ಆರ್.ಮಸಳಿಯವರು ಮತ್ತು  ಗಡಿನಾಡಿನಲ್ಲಿ ಕನ್ನಡ : ಪ್ರಚಲಿತ ವಿದ್ಯಮಾನಗಳು ಕುರಿತು ಉಪನ್ಯಾಸಕರಾದ ಬಿ.ಎ.ಜಮಾದಾರ ಅವರು ವಿಷಯ ಮಂಡನೆ ಮಾಡಿದರು. ಚಿದಾನಂದ ಮಠಪತಿ ನಿರೂಪಿಸಿದರು.

ಮಹಾರಾಷ್ಟ್ರ ದ ಗಡಿಕನ್ನಡಿಗರ ಸ್ಥಿತಿಗತಿ ಕುರಿತು ಡಾ. ಸಿ. ಸೋಮಶೇಖರ್ ಅಧ್ಯಕ್ಷತೆಯಲ್ಲಿ ಸಂವಾದ ಗೋಷ್ಠಿ ನಡೆಯಿತು. ಸಂಜೆ ಸೊಲ್ಲಾಪುರದ ಪೂಜ್ಯ ಶರಣಬಸವಲಿಂಗ ಶಿವಯೋಗಿಗಳು ಸಾನಿಧ್ಯದಲ್ಲಿ ಮತ್ತು ಡಾ.ಸಿ ಸೋಮಶೇಖರ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರುಗಿತು. ಸೊಲ್ಲಾಪುರದ ಹಿರಿಯ ಸಾಹಿತಿಗಳಾದ ಮಧುಮಾಲ ಲಿಗಾಡೆಯವರು ಸಮಾರೋಪ ನುಡಿಗಳನ್ನಾಡಿದರು. ಶಿವಸೇನೆಯ ನಾಯಕ ಸಂಜಯ ದೇಶಮುಖ, ಆಪ್ತ ಕಾರ್ಯದರ್ಶಿ ಸೋಮಶೇಖರ್ ಗಾಂಜಿ, ಧರೆಪ್ಪಾ ತೋಳನೂರೆ, ರಾಜಕುಮಾರ ಲಕಾಬಶೆಟ್ಟಿ, ಕಾಂತು ಧನಶೆಟ್ಟಿ ಉಪಸ್ಥಿತರಿದ್ದರು. ಇದೆ ಸಮಯಕ್ಕೆ ಕೊರೋನಾ ಕಾಲದಲ್ಲಿ ಕನ್ನಡ ಮಕ್ಕಳ ಸಲುವಾಗಿ ಇ-ಲರ್ನಿಂಗ್ ಸಾಹಿತ್ಯಗಳ ನಿರ್ಮಾಣ ಮಾಡಿದ ೩೦ ಜನ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮ ಯಶಸ್ವಿಗಾಗಿ ಕಾರ್ಯಕ್ರಮ ನಿರ್ವಾಹಕ ಗೋನಾ ಸ್ವಾಮಿ, ಶಿಕ್ಷಕ ನೇತಾರ ರಾಜಶೇಖರ ಉಮರಾಣಿಕರ, ಬಸವರಾಜ ಧನಶೆಟ್ಟಿ, ಶರಣಪ್ಪ ಫುಲಾರಿ, ಮಹೇಶ ಮೇತ್ರಿ, ಗುರುಬಸು ವಗ್ಗೋಲಿ, ಚಿದಾನಂದ ಮಠಪತಿ, ಗಿರೀಶ ಜಕಾಪುರೆ, ಪ್ರಕಾಶ ಪ್ರಧಾನ, ರಾಜಕುಮಾರ ಅಮೋಗಿ, ಬಸವರಾಜ ಗುರವ, ದಿನೇಶ್ ಚವ್ಹಾಣ, ಶರಣು ಕೋಳಿ, ಕಲ್ಮೇಶ ಅಡಳಟ್ಟಿ, ಯಲ್ಲಪ್ಪ ಇಟೆನವರ, ರಾಜಕುಮಾರ ಗೊಬ್ಬೂರ, ವಾಸುದೇವ ದೇಸಾಯಿ ಸೇರಿದಂತೆ ಮೊದಲಾದವರು ಶ್ರಮಿಸಿದರು. ಕನ್ನಡ ಚಲನಚಿತ್ರ ನಟಿ ಶರಣ್ಯಾ ಭವನಾ ನಿರೂಪಿಸಿದರು. ವಿದ್ಯಾಧರ ಗುರವ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here