ಸೇಡಂ: ತಾಲೂಕಿನ ನೀಲಹಳ್ಳಿ ಗ್ರಾಮದ ಸರಕಾರಿ ಶಾಲೆಯ ವಿದ್ಯಾರ್ಥಿಗಳು ದಿನನಿತ್ಯ ಬಸ್ ಇಲ್ಲದೆ ಅನುಭವಿಸುತ್ತಿರುವ ಸಮಸ್ಯೆಯನ್ನು ಜೆಡಿಎಸ್ ಅಭ್ಯರ್ಥಿ ಬಾಲರಾಜ ಗುತ್ತೇದಾರ ಆಲಿಸಿದ್ದಾರೆ.
ಪ್ರತಿನಿತ್ಯ ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ತೊಟ್ನಳ್ಳಿ, ಬೀರನಹಳ್ಳಿ ಹಾಗೂ ಇತರೆಡೆಯಿಂದ ನೀಲಹಳ್ಳಿ ಶಾಲೆಗೆ ಆಗಮಿಸುತ್ತಾರೆ. ಶಾಲೆಯ ಸಮಯಕ್ಕೆ ಸರಿಯಾದ ಬಸ್ ಸೌಕರ್ಯವಿಲ್ಲದ ಪರಿಣಾಮ ವಿದ್ಯಾರ್ಥಿಗಳು ದಿನನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಸೇಡಂ ಕ್ಷೇತ್ರದ ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ ಅವರೇ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ.
ಇದನ್ನೂ :ಯುವಕರು ಬಿಜೆಪಿ ಕಾಂಗ್ರೆಸ್ ಬಿಟ್ಟು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ
ಆದರೆ ವರ್ಷಗಳೇ ಕಳೆದರೂ ಸಹ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಮಸ್ಯೆಯಿಂದ ಮುಕ್ತಿ ದೊರಕಿಲ್ಲ ಎಂದು ಬಾಲರಾಜ ಆಕ್ರೋಶ ಹೊರಹಾಕಿದ್ದಾರೆ.ಕಲ್ಯಾಣದ ಹೆಸರಲ್ಲಿ ಜನಕಲ್ಯಾಣವೂ ಆಗ್ತಿಲ್ಲ. ವಿದ್ಯಾರ್ಥಿಗಳ ಜೀವನ ಕಲ್ಯಾಣವಾಗ್ತಿಲ್ಲ. ಮತ್ತ್ಯಾವ ಕಲ್ಯಾಣ ಈ ಭಾಗದಲ್ಲಿ ನಡೆಯುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಅವರು ಗುಡುಗಿದ್ದಾರೆ.
ದಿನನಿತ್ಯ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲದ ಪರಿಣಾಮ ಜೋತು ಬಿದ್ದು ಮನೆಗೆ ಸೇರುವ ಅನಿವಾರ್ಯತೆ ಇದೆ. ನಮ್ಮ ಜೀವಕ್ಕೆ ಇಲ್ಲಿ ಬೆಲೆಯೇ ಇಲ್ಲದಂತಾಗಿದೆ. ಬಸ್ಸಿಲ್ಲದೆ ವಿದ್ಯಾಯಿಲ್ಲ. ವಿದ್ಯಾಯಿದ್ದರೂ ಜೀವಕ್ಕೆ ಭದ್ರತೆ ಇಲ್ಲ ಎಂದು ಇದೇ ವೇಳೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ.
ಇದನ್ನೂ :ರಾಜ್ಯಸಭೆ ಚುನಾವಣೆ: ಜೆಡಿಎಸ್ ಅಭ್ಯರ್ಥಿ ವಾಪಸ್ ಪ್ರಶ್ನೆಯೇ ಇಲ್ಲ: ಹೆಚ್.ಡಿ.ಕುಮಾರಸ್ವಾಮಿ
ಈ ವೇಳೆ ಬಾಲರಾಜ ಬ್ರಿಗೇಡ್ ಅಧ್ಯಕ್ಷ ಶಿವು ಅಪ್ಪಾಜಿ, ಪ್ರವೀಣ ಗುತ್ತೇದಾರ, ಷಡಕ್ಷರಿ ಸ್ವಾಮಿ ಇತರರು ಹಾಜರಿದ್ದರು.