ಲಾಭದತ್ತ ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮ: ತಾರಾ, ಅನೂರಾಧ

0
210
  • ನಾಳೆ (ಜೂನ್‌ 25, 2022) ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ ನಲ್ಲಿ ನಿಗಮದ ಸುವರ್ಣ ಮಹೋತ್ಸವ
  • ಕಳೆದ ಒಂದುವರೆ ವರ್ಷದಲ್ಲಿ ಸುಮಾರು 40 ಕೋಟಿ ರೂಪಾಯಿಗಳಷ್ಟು ನಿಶ್ಚಿತ ಠೇವಣಿ

ಬೆಂಗಳೂರು ಜೂನ್‌ 24: ಕೋವಿಡ್‌ ಸಾಂಕ್ರಾಮಿಕದ ಹಾಗೂ ನೀಲಗಿರಿ ಬೆಳೆಯ ನಿಷೇಧದ ನಡುವೆಯೂ ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮ ಲಾಭದತ್ತ ಸಾಗುತ್ತಿದ್ದು, ಇದಕ್ಕೆ ಇನ್ನಷ್ಟು ವೇಗ ನೀಡುವ ನಿಟ್ಟಿನಲ್ಲಿ ಹಲವಾರು ನೂತನ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶ್ರೀಮತಿ ತಾರಾಅನೂರಾಧ ತಿಳಿಸಿದರು.

ಇಂದು ಬೆಂಗಳೂರಿನಲ್ಲಿರುವ ನಿಗಮದ ಪ್ರಧಾನ ಕಚೇರಿ ವನವಿಕಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

Contact Your\'s Advertisement; 9902492681

2021 ರ ಜನವರಿಯಲ್ಲಿ ನಾನು ನಿಗಮದ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಸಂಧರ್ಭದಲ್ಲಿ ಹಲವಾರು ಕಾರಣಗಳಿಂದ ನಿಗಮ ನಷ್ಟದತ್ತ ಸಾಗುತ್ತಿತ್ತು. 2017 ರಲ್ಲಿ ನೀಲಗಿರಿ ನಿಷೇಧದ ನಂತರ ನಿಗಮ ಆರ್ಥಿಕ ಪರಿಸ್ಥಿತಿ ಕ್ಷೀಣಿಸುತ್ತಾ ಬಂದಿತು. ಬ್ಯಾಂಕುಗಳಲ್ಲಿದ್ದ ಠೇವಣಿಯನ್ನು ಹಿಂಪಡೆದು ನಿಗಮವನ್ನು ನಿರ್ವಹಿಸಬೇಕಾಗಿದ್ದ ಪರಿಸ್ಥಿತಿ ಬಂದೊದಗಿತ್ತು. ನಿಶ್ವಿತ ಠೇವಣಿಯು 67.35 ಕೋಟಿ ರೂಪಾಯಿಗಳಿಗೆ ಇಳಿದಿತ್ತು. ಇಂತಹ ಸಂಕಷ್ಟದ ಸಮಯವನ್ನು ಸವಾಲಾಗಿ ತಗೆದುಕೊಂಡು ಹಲವಾರು ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಲಾಯಿತು.

ನಿಮಗದ ಅಧೀನದಲ್ಲಿರುವ ಕಾರ್ಯಕ್ಷೇತ್ರಗಳಿಗೆ ಭೇಟಿ ನೀಡಿದ ನಂತರ ಕಾರ್ಯಕ್ಷಮತೆಯಲ್ಲಿ ಹಲವಾರು ಬದಲಾವಣೆಗಳನ್ನು ಅನುಷ್ಠಾನಗೊಳಿಸಲಾಯಿತು. ಇದರಿಂದಾಗಿ ನಿಗಮ ಲಾಭದತ್ತ ದಾಪುಗಾಲು ಹಾಕುತ್ತಿದೆ. ಸರಕಾರದ ಯಾವುದೇ ಅನುದಾನವಿಲ್ಲದೆ, ಒಂದುವರೆ ವರ್ಷದಲ್ಲಿ ನಿಶ್ಚಿತ ಠೇವಣಿ 100 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಈ ನಿಶ್ಚಿತ ಠೇವಣಿಯನ್ನು ಹಿಂದಕ್ಕೆ ತಗೆದುಕೊಳ್ಳಬಾರದು ಎನ್ನುವ ನಿರ್ಧಾರವನ್ನು ಮಂಡಳಿಯಲ್ಲಿ ತಗೆದುಕೊಂಡಿದ್ದೇವೆ ಎಂದು ಹೇಳಿದರು.

ಸರಕಾರವು ನೀಲಗಿರಿ ಬೆಳೆಸುವುದನ್ನು ನಿಷೇಧಿಸಿದ ನಂತರ ನಿಗಮದ ವತಿಯಿಂದ ಕ್ಯಾಸುರಿನ, ಹೆಬ್ಬೇವು ಮತ್ತು ಸುಬಾಬುಲ್‌ಗಳಂತಹ ಪರ್ಯಾಯ ಜಾತಿಯ ಮರಗಳನ್ನು ಬೆಳೆಸುವ ಕ್ರಮಗಳನ್ನು ಕೈಗೊಳ್ಳಲು ವ್ಯವಸ್ಥೆ ಮಾಡಲಾಗಿದೆ. ನಿಗಮದ ಅಡಿಯಲ್ಲಿ 40 ಸಾವಿರ ಹೆಕ್ಟೇರ್‌ ಅರಣ್ಯ ಭೂಮಿಯಿದ್ದು, ಇನ್ನೂ 10 ಸಾವಿರ ಹೆಕ್ಟೇರ್‌ ಭೂಮಿಯನ್ನು ಅರಣ್ಯ ಇಲಾಖೆಯಿಂದ ಪಡೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಅರಣ್ಯ ಹೆಚ್ಚಿಸುವ ಹಾಗೂ ಒತ್ತುವರಿಯನ್ನು ತಡೆಯುವ ನಿಟ್ಟಿನಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತಿದೆ.

ಅರಣ್ಯದ ಅಂಚಿನ ಭೂಮಿಯಲ್ಲಿ ಮರಗಳನ್ನು ನೆಡುವುದು ಹಾಗೂ ಅವುಗಳಿಂದ ಬರುವ ಉತ್ಪನ್ನಗಳ ಮೂಲಕ ಆರ್ಥಿಕ ಚಟುವಟಿಕೆಯನ್ನು ನಡೆಸುವುದು ನಮ್ಮ ಪ್ರಮುಖ ಕಾರ್ಯಚಟುವಟಿಕೆಯಾಗಿದೆ. ಕಳೆದ ಹಲವಾರು ವರ್ಷಗಳಿಂದ ನಿಗಮದ ಕಾರ್ಯಚಟುವಟಿಕೆಗಳಲ್ಲಿ ಇದ್ದಂತಹ ಲೋಪದೋಷಗಳನ್ನು ನಿವಾರಿಸಿದ್ದೇವೆ. ಹೊಸ ರೀತಿಯ ಟಾರ್ಗೆಟ್‌ ಬೇಸ್ಡ್‌ ಅಪ್ರೋಚ್‌ ಮೂಲಕ ನಿರಂತರವಾಗಿ ಗುರಿಯನ್ನು ತಲುಪುತ್ತಿದ್ದೇವೆ ಎಂದರು ಹೇಳಿದರು.

ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮಕ್ಕೆ ಸೇರಿದ ಅರಣ್ಯ ಪ್ರದೇಶ ಒತ್ತುವರಿ ಆಗದಂತೆ ರಕ್ಷಿಸುವುದು ಮತ್ತು ಒತ್ತುವರಿ ತಡೆಗಟ್ಟುವುದರ ಕುರಿತು ಹಲವಾರು ಸಭೆಗಳನ್ನು ನಡೆಸಿದ್ದು, ಈ ಬಗ್ಗೆ ಸರಕಾರಕ್ಕೆ ವರದಿಯನ್ನು ಸಲ್ಲಿಸಿದ್ದೇವೆ. ಇದೇ ವೇಳೆ ನೀಲಗಿರಿ ನಿಷೇಧದ ಬಗ್ಗೆ ಮರು ಪರಿಶೀಲನೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ನೂತನ ಯೋಜನೆಗಳ ಅನುಷ್ಠಾನಕ್ಕೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

1971 ರಲ್ಲಿ ಪ್ರಾರಂಭವಾದ ಅರಣ್ಯ ಅಭಿವೃದ್ದಿ ನಿಗಮವು ತನ್ನ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ. ಈ ನಿಟ್ಟಿನಲ್ಲಿ ಜೂನ್‌ 25 ರಂದು ವಿಧಾನಸೌಧದ ಬ್ಯಾಂಕ್ವೇಟ್‌ ಹಾಲ್‌ ನಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ. ಮಧ್ಯಾಹ್ನದ ಕಾರ್ಯಕ್ರಮದಲ್ಲಿ ಗೌರವಾನ್ವಿತ ರಾಜ್ಯಪಾಲರು ಪಾಲ್ಗೊಳ್ಳಲಿದ್ದಾರೆ. ಕಳೆದ 50 ವರ್ಷಗಳಲ್ಲಿ ನಿಗಮ ನಡೆದುಬಂದ ಹಾದಿಯ ಬಗ್ಗೆ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ನಿಗಮದ ಅಧ್ಯಕ್ಷರಾದ ಶ್ರೀಮತಿ ತಾರಾಅನೂರಾಧ ತಿಳಿಸಿದರು.

ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ರಾಧಾದೇವಿ ಐ.ಎಫ್‌.ಎಸ್‌ ಮಾತನಾಡಿ, ಕಳೆದ ಕೆಲವು ತಿಂಗಳಿನಿಂದ ನಮ್ಮ ರಬ್ಬರ್‌ ಹಾಗೂ ಮೆದುಮರಗಳಿಗೆ ಒಳ್ಳೆಯ ದರ ಲಭಿಸುತ್ತಿದ್ದು ನಿಗಮ ಪ್ರತಿ ತಿಂಗಳು ಸುಮಾರು 2 ಕೋಟಿ ರೂಪಾಯಿಗಳಷ್ಟು ಲಾಭಗಳಿಸುತ್ತಿದೆ. ಈ ಮುಖೇನ ರಾಜ್ಯ ಸರಕಾರದಿಂದ ಯಾವುದೇ ಅನುದಾನ ಪಡೆಯದೇ, ಬಾಹ್ಯ ಆರ್ಥಿಕ ಬೆಂಬಲವೂ ಇಲ್ಲದೆ ಸತತವಾಗಿ ಲಾಭಗಳಿಸುವ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ. ನಿಗಮವು ಉತ್ಪಾದಿಸುವ ಮೆದುಮರ ಮತ್ತು ರಬ್ಬರ್‌ ಕಚ್ಚಾ ಸಾಮಗ್ರಿಗಳಿಂದ ಉತ್ಪನ್ನಗಳನ್ನು ತಯಾರಿಸುವ ಹೊಸ ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ಸಾಕ್ಷಚಿತ್ರದ ಟ್ರೈಲರ್‌ನ್ನು ಬಿಡುಗಡೆಗೊಳಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here