ಅಂತಃಕರುಣಿ ಮನುಷ್ಯ ಎನ್. ಧರ್ಮಸಿಂಗ್

0
104

ಅದು ಕಲಬುರಗಿಯಲ್ಲಿ ಬುದ್ದ ವಿಹಾರ ನಿರ್ಮಾಣವಾಗುತ್ತಿದ್ದ ಸಂದರ್ಭ. ನಾನು ಆಗ ಪ್ರಜಾವಾಣಿಯಲ್ಲಿ ಹಿರಿಯ ಉಪಸಂಪಾದಕ/ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದೆ. ಆಗ ಸಂಸದರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅಲ್ಲಿದ್ದುಕೊಂಡು ಬುದ್ಧ ವಿಹಾರ  ಲೋಕಾರ್ಪಣೆಯ ಗಡಿಬಿಡಿಯಲ್ಲಿದ್ದರು. ನನ್ನ ಹಾಗೂ ಪತ್ರಿಕೆಯ ಹೆಸರು ಹೇಳಿಕೊಂಡು ಮಾತನಾಡಿಸಲು ಸಿದ್ಧನಾದೆ. “ಓಹ್ ನೀನ್ ನಮ್ಮ ಲಿಂಗಣ್ಣ ಸತ್ಯಂಪೇಟೆ ಮಗನಾ, ಅವರು ನಮ್ಮ ವಿರುದ್ಧ ಬರದು ನಮ್ಮನ್ನು ಸದಾ ಎಚ್ಚರಿಸುತ್ತಿದ್ದರು” ಎಂದು ಸಿದ್ಧತೆಯ ಬಗ್ಗೆ ಹೇಳಿದವರು ಖರ್ಗೆ ಜತೆಗಿದ್ದ ಧರ್ಮಸಿಂಗ್ ಅವರು.

Contact Your\'s Advertisement; 9902492681

ಮರುದಿನ ನಮ್ಮ ಬ್ಯೂರೋ ಚೀಫ್ ಹೋಗಿ “ನಾನು ಪ್ರಜಾವಾಣಿ ಪತ್ರಿಕೆಯವನು ಎಂದು ಪರಿಚಯಿಸಿಕೊಂಡು ಸಿದ್ಧತೆಯ ಬಗ್ಗೆ ಮತ್ತೆ ಮಾತನಾಡಿಸಿದಾಗ, ನಿನ್ನೆ ನಮ್ಮ ಸತ್ಯಂಪೇಟೆ ಲಿಂಗಣ್ಣನ ಮಗ ಬಂದಿದ್ದ. ಆತನಿಗೆ ಎಲ್ಲ ಹೇಳಿದ್ದೇವೆ ಎಂದಿದ್ದರಂತೆ! ಈ ಘಟನೆಯಿಂದ ಧರ್ಮಸಿಂಗ್ ಅವರಿಗೆ ನಮ್ಮ ಭಾಗ ಮತ್ತು ನಮ್ಮ ಭಾಗದ ಜನರ ಕಾಳಜಿ, ಕಳಕಳಿ ಎಷ್ಟಿತ್ತು ಎಂಬುದು ಮನದಟ್ಟಾಗುತ್ತದೆ. ಬಹುಶಃ ಈ ಕಾರಣಕ್ಕಾಗಿಯೇ ಅವರನ್ನು ಅಜಾತಶತ್ರು ಎಂದು ಕರೆಯುತ್ತಿರಬಹುದು.

ಇನ್ನೊಂದು ಬಾರಿ ೨೦೦೮ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಸೋಲಿನ ಕಹಿ ಉಂಡ ತಕ್ಷಣವೇ ಪತ್ರಕರ್ತ ಮಿತ್ರರೆಲ್ಲರೂ ಗೆದ್ದ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರ ಹಿಂದೆ ಹೋದರು. ನಾನು ಮಾತ್ರ ಧರ್ಮಸಿಂಗ್ ಅವರ ಮನೆಗೆ ತೆರಳಿದ್ದೆ. ಸೋಲರಿಯದ ಸರದಾರ ಧರ್ಮಸಿಂಗ್ ಅವರು ಈಗ ಏನು ಮಾಡುತ್ತಿರಬಹುದು? ಅವರ ಮನೆ ಮುಂದೆ ಈಗ ಯಾರಿರಬಹುದು ಎಂದು ಕುತೂಹಲದಿಂದ ಅಲ್ಲಿಗೆ ಹೋದರೆ, ಮನೆ ಮುಂದೆ ಹಾಕಲಾಗಿದ್ದ ಟೆಂಟ್ ಮುಂದೆ ಹತ್ತಿಪ್ಪತ್ತು ಜನ ಮಾತ್ರ ಇದ್ದರು. ಸಾಹೇಬರು ಸೋತಿರುವುದಕ್ಕೆ ಎಲ್ಲರಿಗೂ ದುಃಖವಾಗಿತ್ತು.

ಧರ್ಮಸಿಂಗ್ ಅವರು ಸಹ ಸೋಲಿನ ಸುದ್ದಿ ಕೇಳಿ ಮನಸ್ಸಿಗೆ ಸ್ವಲ್ಪ ನೋವು ಮಾಡಿಕೊಂಡಿರುವಂತೆ ಕಂಡು ಬಂದರು. ಕರವಸ್ತ್ರದಿಂದ ಒತ್ತರಿಸಿ ಬರುತ್ತಿದ್ದ ಕಣ್ಣೀರು ಒರೆಸಿಕೊಳ್ಳುತ್ತಿದ್ದರು. ಅವರ ಪುತ್ರ ಅಜಯ ಸಿಂಗ್ ಅವರು ತಮ್ಮ ತಂದೆಯವರ ಕೈ ಹಿಡಿದು ಮನೆಯ ಮೇಲಿನ ಕೋಣೆಯಿಂದ ಕೆಳಗಿನ ಹಾಲ್ ವರೆಗೆ ಅವರನ್ನು ಕರೆ ತಂದರು. ಅಲ್ಲಿ ನಾನು ಮತ್ತು ದೆಹಲಿಯಿಂದ ಬಂದಿದ್ದ ಎನ್.ಡಿ. ಟಿವಿ ವರದಿಗಾರ್ತಿ ಮಾತ್ರ ಇದ್ದೇವು. ಸೋಲರಿಯದ ನಿಮಗೆ ಈ ಸೋಲು ಹೇಗನ್ನಿಸುತ್ತದೆ? ಎಂದು ನಾನು ಕೇಳಿದಾಗ, ಗರಂ ಆದ ಧರ್ಮಸಿಂಗ್ ಅವರು, “ಸೋತೋರ್ ಹಿಂದ ಯಾಕ ಬೆನ್ನತ್ತೀರಿ? ಗೆದ್ದೋರ್ ಹಿಂದ ಹೋಗ್ರಿ” ಅಂತ ಹೇಳಿ ಮಾತಿಗಾರಂಭಿಸಿದರು ಮಾತ್ರವಲ್ಲ ತಮ್ಮ ಸೋಲಿನ ಬಗ್ಗೆ ವಿಶ್ಲೇಷಣೆ ಮಾಡಿ ಅದನ್ನು ಮನದಟ್ಟಾಗಿಸಿದರು. ಮೇಲಾಗಿ ತಮ್ಮದೇ ಪಕ್ಷ ಅಧಿಕಾರ ಹಿಡಿಯಲಿದೆ ಎಂದು ರಾಜಕೀಯ ಲೆಕ್ಕಾಚಾರ ಹಾಕಿ ಹೇಳಿದರು.

ನನ್ನ ವಿಶೇಷ ವರದಿಯ ಶಿರ್ಷಿಕೆ ಕೂಡ “ಗರಂ ಆದ ಧರಂ; ಸೋತೋರ್ ಹಿಂದ ಯಾಕ ಬೆನ್ನತ್ತೀರಿ? ಗೆದ್ದೋರ ಹಿಂದ ಹೋಗ್ರಿ” ಎಂದೇ ಕೊಟ್ಟಿದ್ದೆ. ಆಗ ಪ್ರಜಾವಾಣಿ ಪತ್ರಿಕೆಯ ಕಲಬುರಗಿ ಬ್ಯೂರೋ ಮುಖ್ಯಸ್ಥರಾಗಿದ್ದ ರಂಜಾನ್ ದರ್ಗಾ ಅವರು, ಸೋತಿರುವವರ ಬಗೆಗೆ ನಾನು ತೋರಿದ ಕಾಳಜಿ ಕಂಡು, ಒಬ್ಬ ವರದಿಗಾರನಿಗೆ ಈ ರೀತಿಯ ಕನ್ಸರ್ನ್ ಇರಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಹುಶಃ ಈ ಕಾರಣಕ್ಕಾಗಿಯೇ  ಅವರನ್ನು ಮುತ್ಸದ್ದಿ ರಾಜಕಾರಣಿ ಎಂದು ಕರೆಯುತ್ತಿರಬಹುದು.

ಅವರ ಸಾವಿನ ಸುದ್ದಿ ಕೇಳಿ ಅಂದು ನೆಲೋಗಿ ಗ್ರಾಮದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನ ಸೇರಿದ್ದರು. ತಾಲ್ಲೂಕಿನ ಬಡ ಜನತೆ ತಮ್ಮ ಮನೆಯ ಒಬ್ಬ ಹಿರಿಯ ಸದಸ್ಯನನ್ನು ಕಳೆದುಕೊಂಡಂತೆ ದುಃಖಿಸುತ್ತಿರುವುದನ್ನು ಕಣ್ಣಾರೆ ಕಂಡು ದಂಗಾದೆ. ಅಲ್ಲಿಗೆ ಆಗಮಿಸಿದ್ದ ಎಲ್ಲರೂ ಅವರ ವೈಯಕ್ತಿಕ ಬದುಕಿನ ಜೊತೆಗೆ ಅವರ ರಾಜಕೀಯ ಜೀವನದ ಎಲ್ಲವೂಗಳನ್ನು ಮೆಲುಕು ಹಾಕಿ ವಿಮರ್ಶೆಗೆ ಇಳಿದಿದ್ದರು.

ಮೇಲಿನ ಈ ಮೂರು ಘಟನೆಗಳು ಅವರ ಸಾದಾ ಸೀದ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿದ ಘಟನೆಗಳಾಗಿವೆ. ಧರ್ಮಸಿಂಗ್ ಅವರು ರಾಜಕೀಯವಾಗಿ ಕ್ಷೇತ್ರಕ್ಕೆ ಮತ್ತು ಈ ಭಾಗಕ್ಕೆ ಸಾಕಷ್ಟು ಕೆಲಸ ಮಾಡಿರುವುದರ ಜೊತೆಗೆ ಒಬ್ಬ ಅಂತಃಕರಣವುಳ್ಳ ಮನುಷ್ಯರಾಗಿದ್ದರು ಎಂಬುದು ಬಹಳ ಮುಖ್ಯವಾಗುತ್ತದೆ. ಅವರ ಪುತ್ರರಾದ ಡಾ. ಅಜಯಸಿಂಗ್ ಮತ್ತು ವಿಜಯಸಿಂಗ್ ಅವರು ಸಹ ಶಾಸಕರಾಗಿ ಆಯ್ಕೆಯಾಗುವ ಮೂಲಕ ಈಗ ಅವರೂ ರಾಜಕೀಯ ಪ್ರವೇಶ ಪಡೆದಿದ್ದಾರೆ. ತಂದೆ ಹಾಕಿಕೊಟ್ಟ ಮಾರ್ಗದಲ್ಲಿಯೇ ಮುನ್ನಡೆದಿರುವ ಇವರುಗಳು ಇನ್ನಷ್ಟು ಜನಸ್ನೇಹಿ, ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here