ಶಹಾಬಾದ:ತಾಲೂಕಿನ ಭಂಕೂರ ಗ್ರಾಮದ ಪ್ರಕಾಶ ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಸೋಮವಾರ ಕಲ್ಬುರ್ಗಿ ಜಿಲ್ಲಾ ಪೊಲೀಸ್ ಮಹಿಳಾ ಸ್ವಯಂ ರಕ್ಷಣಾ ಪಡೆಯ ಒಬ್ಬವ್ವ ಪಡೆಯಿಂದ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣೆ ಕೌಶಲ್ಯಗಳ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಒಬ್ಬವ್ವ ಪಡೆಯ ಅನೀತಾ ಹಾಗೂಸವಿತಾ ತಳವಾರ ಹೆಣ್ಣು ಮಕ್ಕಳನ್ನು ದುಷ್ಕರ್ಮಿಗಳು ಬಂಗಾರ ಕಿತ್ತುಕೊಳ್ಳುವಾಗ, ಎಳೆಯುವಾಗ, ಕೈಹಿಡಿದಾಗ, ಕೂದಲನ್ನು ಹಿಡಿದು ಎಳೆಯುವಾಗ ಯಾವ ರೀತಿ ಅವರಿಂದ ಬಿಡಿಸಿಕೊಳ್ಳಬಹುದೆಂಬ ಪ್ರಾತ್ಯಕ್ಷಿಕತೆಯನ್ನು ಮಾಡಿ ತೋರಿಸುವುದಲ್ಲದೇ, ವಿದ್ಯಾರ್ಥಿಯರನ್ನೇ ಕರೆಯಿಸಿ ಅವರಿಂದಲೇ ಕೌಶಲ್ಯವನ್ನು ಮಾಡಿಸಿದರು.
ನಂತರ ಮಾತನಾಡಿದ ಚಿತ್ತಾಪೂರ ಕ್ಷೇತ್ರ ಮಹಿಳಾ ಪೊಲೀಸ್ ಅನಿತಾ ಹಾಗೂ ಸವಿತಾ ತಳವಾರ್ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಒನಕೆ ಓಬವ್ವರಂತಹ ವೀರ ಮಹಿಳೆಯರ ಹಾಗೆ ಪ್ರತಿ ವಿದ್ಯಾರ್ಥಿನಿಯರು ಸ್ವಯಂ ರಕ್ಷಣೆ ಕಲೆಯ ಜೊತೆಗೆ ಮಾದರಿ ವ್ಯಕ್ತಿಗಳಾಗಿ ದೇಶ ಸೇವೆಯಲ್ಲಿ ತೊಡಗಿಕೊಳ್ಳಬೇಕು.
ಸ್ವಾವಲಂಬಿಯಾಗಿ ಬದುಕಲು ವಿದ್ಯಾರ್ಥಿನಿಯರಿಗೆ ಆತ್ಮ ರಕ್ಷಣಾ ಕಲೆ ಅವಶ್ಯಕವಾಗಿದೆ.ಅಲ್ಲದೇ ಯಾರಾದರೂ ಚುಡಾಯಿಸುವುದು, ಎನ್ನಾವುದೇ ಕಷ್ಟಗಳು ಬಂದರೆ ಕೂಡಲೇ ೧೧೨ಗೆ ಅಥವಾ ನಮಗೆ ಕರೆ ಮಾಡಿದರೇ ತಕ್ಷಣ ನಿಮ್ಮ ಸೇವೆಗೆ ಹಾಜರಾಗುತ್ತೆವೆ.ಅಲ್ಲದೇ ಯಾವುದೇ ವಿದ್ಯಾರ್ಥಿನಿ ಹಾಗೂ ಮಹಿಳೆಯರು ನಿರ್ಜನ ಪ್ರದೇಶದಲ್ಲಿ ಒಬ್ಬಂಟಿಗರಾಗಿ ಹೋಗಬೇಡಿ.ಯಾರಿಂದಾದರೂ ಅಪಾಯ ಎನಿಸಿದರೇ, ಕೂಡಲೇ ಸಾರ್ವಜನಿಕ ಸ್ಥಳಗಳಿಗೆ ಓಡಿ ಹೋಗಿ. ಅಲ್ಲದೇ ಯಾರಾದರೂ ಕೈ ಹಿಡಿದರೆ, ಎಳೆಯುವಾಗ ಆತ್ಮ ರಕ್ಷಣಾ ಕಲೆಗಳನ್ನು ಉಪಯೋಗಿಸಿಕೊಂಡು ಅಲ್ಲಿಂದ ಓಡಿ ಬಂದು ಪೊಲೀಸರಿಗೆ ತಿಳಿಸಿ.ಅಲ್ಲದೇ ೧೮ ವರ್ಷದೊಳಗೆ ಯಾರು ಮದುವೆಯಾಗಬೇಡಿ.ಒಂದು ವೇಳೆ ಈ ರೀತಿಯ ಘಟನೆ ಎಲ್ಲಾದರೂ ನಡೆದರೆ ಮಾಹಿತಿ ನೀಡಿ ಎಂದರು.
ಮುಖ್ಯಗುರು ಚಂದ್ರಶೇಖರ ಗಾರಂಪಳ್ಳಿ ಮಾತನಾಡಿ, ಒನಕೆ ಓಬವ್ವ ಅವರ ಹೆಸರಲ್ಲೇ ಶಕ್ತಿ ಅಡಗಿದೆ. ಧಾನ್ಯ ಕುಟ್ಟುವ ಒನಕೆಯಿಂದಲೇ ಶತ್ರುಗಳನ್ನು ದಮನ ಮಾಡಿ ಕೋಟೆ ರಕ್ಷಣೆ ಮಾಡಿರುವುದನ್ನು ಓದಿದ್ದೇವೆ. ಹಾಗೆಯೇ ಚಿತ್ರದುರ್ಗದ ಓಬವ್ವ ಹಾಗೂ ಕಿತ್ತೂರು ರಾಣಿ ಚೆನ್ನಮ್ಮನ ಹಾಗೆ ಪ್ರತಿ ವಿದ್ಯಾರ್ಥಿನಿಯರು ಸ್ವಾಲಂಬಿಗಳಾಗಬೇಕು. ಯಾವುದೇ ಕ?ದ ಪರಿಸ್ಥಿತಿಯಲ್ಲಿ ತಮ್ಮ ಆತ್ಮ ಸಂರಕ್ಷಣೆ ಮಾಡಿಕೊಳ್ಳಬೇಕು. ಮಹಿಳೆಯರ ದೌರ್ಜನ್ಯ ಮತ್ತು ಆಕ್ರಮಣಗಳಿಂದ ಸ್ವಯಂ ರಕ್ಷಣೆ ಪಡೆಯುವುದಕ್ಕೆ ಪೂರಕವಾಗಿ ಈ ತರಬೇತಿ ನೀಡಲಾಗುತ್ತಿದ್ದು, ಇದರಿಂದ ವಿದ್ಯಾರ್ಥಿನಿಯರ ಆತ್ಮಸ್ಥೈರ್ಯ ಹೆಚ್ಚಲಿದೆ ಎಂದರು.
ಸುರೇಶ್ ಕಾಂಬ್ಳೆ, ಶರಣಮ್ಮ ಪುರಾಣಕ, ಗುರುಶಾಂತಪ್ಪ ನಾಟೀಕಾರ, ಪಯಣಪ್ಪ ಜೈನ್, ಸುನಂದ ಗುಮಸ್ತಿ,ಸತೀಶ ನವಲೆ ಹಾಗೂ ಪ್ರವೀಣ ಹೇರೂರು ಹಾಗೂ ಶಾಲಾ ಮಕ್ಕಳು ಇದ್ದರು.