ಇದೇ ತಿಂಗಳ 23 ಮತ್ತು 24 ರಂದು ದಾವಣಗೆರೆಯಲ್ಲಿ ನಡೆಯಲಿರುವ ಬಂಡಾಯ ಸಾಹಿತ್ಯ ಸಮ್ಮೇಳನ

0
31
  • ಕೆ.ಶಿವು.ಲಕ್ಕಣ್ಣವರ

1984 ರಲ್ಲಿ ದಾವಣಗೆರೆಯಲ್ಲಿ ನಡೆದಿತ್ತು ಬಂಡಾಯ ಸಾಹಿತ್ಯ ಸಮ್ಮೇಳನವು. ಆಗ ದಾವಣಗೆರೆ ತಿಪ್ಪೇಸ್ವಾಮಿ ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಪೂರ್ವಭಾವಿ ಸಭೆಯಲ್ಲಿ ಪ್ರೊ.ಚಂದ್ರಶೇಖರ.ಪಾಟೀಲ, ಪ್ರೊ.ಕಾಳೇಗೌಡ ನಾಗಾವರ, ಚನ್ನಣ್ಣ ವಾಲೀಕರ, ಪ್ರೊ.ಬರಗೂರು ರಾಮಚಂದ್ರಪ್ಪ, ಪ್ರೊ.ಸಿ.ವಿ.ಪಾಟೀಲರಂತವರು ಭಾಗವಹಿಸಿದ್ದರು.

ಸಾಹಿತ್ಯದಲ್ಲಿ ಬಂಡಾಯದ ಕಹಳೆ ಮೊಳಗಿಸಿದ್ದ ಪ್ರಗತಿಪರ ಬರಹಗಾರರಲ್ಲಿ ಒಬ್ಬರಾಗಿದ್ದ ಪ್ರೊ.ಚಂದ್ರಶೇಖರ.ಪಾಟೀಲರು ದಾವಣಗೆರೆಯಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಸಲು ಸ್ಫೂರ್ತಿಯಾಗಿದ್ದರು. 1984 ರಲ್ಲಿ ರಾಜ್ಯ ಮಟ್ಟದ ಬಂಡಾಯ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಂಡಿದ್ದ ಸಮ್ಮೇಳನವನ್ನು ಬರಗೂರು.ರಾಮಚಂದ್ರಪ್ಪ ಉದ್ಘಾಟಿಸಿದ್ದರು.

Contact Your\'s Advertisement; 9902492681

ಚಂದ್ರಶೇಖರ ಪಾಟೀಲರು ಸಮಾರೋಪ ಭಾಷಣ ಮಾಡಿದ್ದರು. ಕಾಳೇಗೌಡ ನಾಗಾವರ, ಚನ್ನಣ್ಣ ವಾಲೀಕರ್‌ ಸಹಿತ ಆಗಿನ ಪ್ರಮುಖ ಬಂಡಾಯ ಸಾಹಿತಿಗಳು ಆಗ ಭಾಗವಹಿಸಿದ್ದರು. ಆ ಸಮ್ಮೇಳನದ ಕುರಿತು ನಿವೃತ್ತ ಪ್ರೊ.ಸಿ.ವಿ.ಪಾಟೀಲ ಹರಿಹರ ನೆನಪಿಸಿಕೊಳ್ಳುತ್ತಾರೆ. ಈಗ ಮತ್ತೆ ದಾವಣಗೆರೆಯಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನವು ನಡೆಯುತ್ತಿದೆ. ಅದಕ್ಕಾಗಿಯೇ ಈ ಮೆಲಕು.

ದಾವಣಗೆರೆ ಮತ್ತು ಹರಿಹರ ಎಡ ಚಿಂತನೆಯ ಕೇಂದ್ರವಾಗಿದ್ದವು. ಆಗ ಪಂಪಾಪತಿ ಶಾಸಕರಾಗಿದ್ದರು. ಇಂಥ ಸಂದರ್ಭದಲ್ಲಿಯೇ ಇಲ್ಲಿನ ಸಾಹಿತಿಗಳು ಜೀವಪರ, ಜನಪರ ನಿಲುವಿನ ಈ ಸಂಘಟನೆಯೊಂದಿಗೆ ನಿಂತಿದ್ದರು. ‘ಸಮುದಾಯ’ ಸಂಘಟನೆ, ಬಳಿಕ ಬಂದ ಬಂಡಾಯ ಸಾಹಿತ್ಯ, ದಲಿತ ಸಾಹಿತ್ಯ ಸಂಘಟನೆಗಳಲ್ಲಿ ದಾವಣಗೆರೆಯ ಪಾತ್ರ ಹಿರಿದಾಗಿತ್ತು. ದಾವಣಗೆರೆಯ ಬರಹಗಾರರ ಮೇಲೆ ಚಂಪಾ ಬೀರಿದ ಪರಿಣಾಮ ಅದಕ್ಕೆ ಕಾರಣವಾಗಿತ್ತು.

ಸಿ.ವಿ.ಪಾಟೀಲರು ಜಿಲ್ಲಾ ಸಂಚಾಲಕರಾಗಿದ್ದ ಕಾಲದಲ್ಲಿ ಹರಿಹರ ತಾಲ್ಲೂಕು ಸಂಚಾಲಕನಾಗಿ 1986 ರಲ್ಲಿ ಹರಿಹರದಲ್ಲಿಯೂ ಬಂಡಾಯ ಸಾಹಿತ್ಯ ಸಮ್ಮೇಳನ ಮಾಡಿದಿತ್ತು. ಆಗ ಅನೇಕ ಬಂಡಾಯ ಕವಿಗಳ ಮತ್ತು ಬರಹಗಾರರ ಕವನಗಳು ಮತ್ತು ಬರಹಗಳನ್ನು ತಿದ್ದಿ ತೀಡಿ ಪೊ.ಚಂದ್ರಶೇಖರ ಪಾಟೀಲರು ಕವಿ, ಮತ್ತು ಬರಹಗಾರನ್ನಾಗಿಸಿದ್ದರು ಹೊಸ ಬಂಡಾಯ ಬರಹಗಾರರನ್ನು.

ಪ್ರೊ.ಚಂದ್ರಶೇಖರ ಪಾಟೀಲರು ದಾವಣಗೆರೆಗೆ ಬಂದಾಗಲೆಲ್ಲ ಸಿ.ವಿ. ಪಾಟೀಲರನ್ನು, ಭಿಕ್ಷಾವರ್ತಿಮಠ ಅವರನ್ನು, ಭೇಟಿಯಾಗಿಯೇ ಹೋಗುತ್ತಿದ್ದರು. ಇಲ್ಲಿ ಅಲ್ಲದೇ ಚಳ್ಳಕೆರೆ, ಚಿತ್ರದುರ್ಗ, ಬೆಂಗಳೂರು ಸಹಿತ ಬಹುತೇಕ ಕಡೆಗಳಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಸಲು ಚಂಪಾ ಜೊತೆಗೆ ದಾವಣಗೆರೆ ಜಿಲ್ಲೆಯ ಬರಹಗಾರರು ಕೈ ಜೋಡಿಸಿದ್ದರು. ದಾವಣಗೆರೆ, ಹರಿಹರದ ಬಗ್ಗೆ ವಿಪರೀತ ಪ್ರೀತಿ ಅವರಿಗೆ ಎಂದು ಸಾಹಿತಿ ಹರಿಹರದ ಕಲೀಂ ಬಾಷಾ ಜೆ. ವಿವರಿಸುತ್ತಾರೆ.

‘ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಅವರ ಎದುರಿಗೆ ಒಂದು ಅರ್ಜಿ ಸಲ್ಲಿಕೆ ಆಗಿತ್ತು. ಆ ಅರ್ಜಿಯು ಹೀಗಿತ್ತು — ರಾಜ್ಯದಲ್ಲಿ ಇರುವ ಉರ್ದು ಶಾಲೆಗಳಲ್ಲಿ ಕನ್ನಡವನ್ನು ಮೂರನೇ ಭಾಷೆಯಾಗಿ ಕಲಿಸಲಾಗುತ್ತಿದೆ. ಎರಡನೇ ಭಾಷೆಯಾಗಿ ಕಲಿಸಲು ಕ್ರಮ ವಹಿಸಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. ಈ ಅರ್ಜಿಯನ್ನು ಗಂಭೀರವಾಗಿ ತೆಗೆದುಕೊಂಡು ಉರ್ದು ಶಾಲೆಗಳಲ್ಲಿ ಕನ್ನಡವನ್ನು ಎರಡನೇ ಭಾಷೆಯಾಗಿ, ಇಂಗ್ಲಿಷನ್ನು ಮೂರನೇ ಭಾಷೆಯಾಗಿ ಕಲಿಸುವಂತೆ ಮಾಡಿದ್ದರು ಅವರು ಎಂದು ಹೆಮ್ಮೆಪಡುತ್ತಾರೆ ದಾವಣಗೆರೆಯ ಕೆಲವು ಸಾಹಿತಿಗಳು.

ಆಯಿತು ಈಗ ದಾವಣಗೆರೆಯಲ್ಲಿ ನಡೆಯಲಿರುವ ಬಂಡಾಯ ಸಾಹಿತ್ಯ ಸಮ್ಮೇಳನದ ಕುರಿತು ಒಂದು ಮೆಲಕು ಹಾಕೋಣ. ಈಗ ನಡೆಯಲಿರುವ ಬಂಡಾಯ ಸಾಹಿತ್ಯ ಸಂಘಟನೆಯ ಹೆಜ್ಜೆ ಗುರುತಿಗೆ ನಾಲ್ಕನೇ ದಶಕವೂ. ಎಲ್ಲಾ ಪ್ರೇರಣೆಗಳೊಂದಾದ ಹದಗೊಂಡ ಕಾಲದಲ್ಲಿ, ಸಾಮಾಜಿಕ ತಳಮಳಗಳಿಗೆ ಕಳಕಳಿಯ ಕಣ್ಣಾಗುವ ಬಂಡಾಯ ಸಾಹಿತ್ಯ ಚಳವಳಿ ರೂಪುಗೊಂಡು ಇದೀಗ ನಾಲ್ಕು ದಶಕಗಳಾಗಿವೆ.

ಆ ಸಾಹಿತ್ಯ ಸಂಭ್ರಮದಲ್ಲಿ ದಾವಣಗೆರೆಯಲ್ಲಿ ಇದೇ 23 ಮತ್ತು 24 ರಂದು ಸಮ್ಮೇಳನವೂ ನಡೆಯುತ್ತಿದೆ. ಈ ಸೈದ್ಧಾಂತಿಕ ಕಾಲ ಚಕ್ರ ಚಲಿಸಿದ ಹಾದಿಯ ಮೇಲೊಂದು ಹಿನ್ನೋಟವೂ. ಯಾವುದೇ ಚಳವಳಿಯು ದೀರ್ಘಕಾಲ ಬಾಳುವುದು ಸಣ್ಣ ಸಂಗತಿಯಲ್ಲ. ಚಳವಳಿಯ ತೀವ್ರತೆ ಸದಾ ಒಂದೇ ಸ್ತರದಲ್ಲಿ ಇಲ್ಲದೇ ಇರಬಹುದು. ಆದರೆ, ಕಾಲಕಾಲಕ್ಕೆ ಪುನಶ್ಚೇತನಗೊಳ್ಳುತ್ತಾ ತನ್ನ ಜೀವಶಕ್ತಿಯನ್ನು ಉಳಿಸಿಕೊಂಡು ಸದಾ ಸಮಕಾಲೀನವಾಗುವುದರಲ್ಲಿ ಚಳವಳಿಗಳ ಯಶಸ್ಸು ಇರುತ್ತದೆ. ಈ ದೃಷ್ಟಿಯಿಂದ ನೋಡಿದಾಗ ನಾಲ್ಕು ದಶಕ ದಾಟಿದ ಬಂಡಾಯ ಸಾಹಿತ್ಯ ಚಳವಳಿಯು ನಮ್ಮ ಸಾಂಸ್ಕೃತಿಕ ಕ್ಷೇತ್ರದ ಒಂದು ಹೆಗ್ಗಳಿಕೆಯಾಗಿಯೂ ಉಳಿದಿದೆವು..!

1979 ರ ಮಾರ್ಚ್ 10 ಮತ್ತು 11 ರಂದು ಬೆಂಗಳೂರಿನಲ್ಲಿ ನಡೆದ ಮೊದಲ ಬಂಡಾಯ ಸಾಹಿತ್ಯ ಸಮ್ಮೇಳನವು ‘ಸಂಘಟನೆ’ಗೆ ಒತ್ತಾಸೆ ಒದಗಿಸಿತು. ‘ಸಂಘಟನೆ’ಯು ‘ಚಳವಳಿ’ಯನ್ನು ರೂಪಿಸಿತು; ಮುನ್ನಡೆಸಿತು. ಮುಖ್ಯವಾಗಿ, ಹೊಸ, ಸಾಹಿತ್ಯ ಚಳವಳಿಯೊಂದಕ್ಕೆ ಹದಗೊಂಡ ಕಾಲ ಅದಾಗಿತ್ತು. ಈ ‘ಹದಗೊಂಡ ಕಾಲ’ಕ್ಕೆ ಒಂದೇ ಕಾರಣವೆಂದು ನಮಗ್ಯಾರಿಗೂ ಅನ್ನಿಸಿಲ್ಲ.

ಮೊದಲನೇ ಬಂಡಾಯ ಸಾಹಿತ್ಯ ಸಮ್ಮೇಳನವು ಆಯೋಜನೆಗೊಳ್ಳುವ ಮುಂಚೆ ದಲಿತ ಸಂಘರ್ಷ ಸಮಿತಿ ಹುಟ್ಟಿತ್ತುಕೊಂಡಿತ್ತು.
ಆ ಆಗ ದಲಿತ ಚಳವಳಿ ರೂಪುಗೊಂಡಿತ್ತು. ‘ಸಮುದಾಯ’ ರಂಗಭೂಮಿ ಸಂಘಟನೆಯು ಕ್ರಿಯಾಶೀಲವಾಗಿತ್ತು. ಇಂದಿರಾಗಾಂಧಿಯವರು ಹೇರಿದ ‘ತುರ್ತು ಪರಿಸ್ಥಿತಿ’ಯ ಅನುಭವವೂ ಆಗಿತ್ತು. ಬಿ.ಬಸವಲಿಂಗಪ್ಪನವರು ಕನ್ನಡ ಸಾಹಿತ್ಯವನ್ನು ‘ಬೂಸ’ ಎಂದರೆಂದು ಪರ — ವಿರೋಧದ ವಿವಾದವೆದ್ದು, ಸಾಮಾಜಿಕ ಸಂಘರ್ಷದತ್ತ ವಾಲಿತ್ತು. ಮೈಸೂರಿನಲ್ಲಿ ಬರಹಗಾರರ — ಕಲಾವಿದರ ಒಕ್ಕೂಟದಿಂದ ಸಮ್ಮೇಳನ ನಡೆದು, ರಾಷ್ಟ್ರಕವಿ ಕುವೆಂಪು ಅವರು ಅದನ್ನು ಉದ್ಘಾಟಿಸಿದ್ದರು. ಆಗ ಹೊರಳು ದಾರಿಯ ಒಳಕುದಿತಗಳು‌ ಹೊರಬರತೊಡಗಿದ್ದವು.ಆದರೆ, ಸಾಹಿತ್ಯ ಚಳವಳಿಯ ಹೊಸ ಹುಟ್ಟಿಗೆ ಇದಿಷ್ಟೇ ಸಾಕೆ.!?

ಸಾಹಿತ್ಯಾಭಿವ್ಯಕ್ತಿಯ ಸಾಧ್ಯತೆಗಳಲ್ಲಿ ಈ ಕಾಲದ ಕುದಿತದ ಸಾಮಾಜಿಕ ಸಂವೇದನೆಗಳು ಸೇರಬೇಡವೆ.!? ಇದಕ್ಕೆ ಉತ್ತರವೆಂಬಂತೆ ಬರಗೂರು ರಾಮಚಂದ್ರಪ್ಪ ಅವರು 1975 ರ ನವೆಂಬರ್‌ ನಲ್ಲೇ ಜಿ.ಎನ್.ರಂಗನಾಥರಾವ್ ಅವರು ಸಂಪಾದಿಸಿದ ‘ಅಕ್ಷರ ಸಂಚಿಕೆ’ಯಲ್ಲಿ
‘ಇತ್ತೀಚಿನ ಸಣ್ಣ ಕತೆ: ಹೊಸ ಆಶಯ’ ಎಂಬ ಲೇಖನವನ್ನು ಬರೆದಿದ್ದರು.

ಹೊಸ ಚಳವಳಿಗೆ ಬೇಕಾದ ವಸ್ತು ಸಾಮಗ್ರಿಯನ್ನು ಕನ್ನಡ ಕತೆಗಳು ಒಳಗೊಳ್ಳುತ್ತಿರುವುದನ್ನು ಸ್ಪಷ್ಟಪಡಿಸಿದ್ದರು. ಬರಗೂರು ರಾಮಚಂದ್ರಪ್ಪನವರ ಕೆಲವು ಮಾತುಗಳು ಹೀಗಿದ್ದವು — ‘ಸಣ್ಣಕಥಾ ಕ್ಷೇತ್ರದಲ್ಲಿ ಇತ್ತೀಚೆಗೆ ಸಾಮಾಜಿಕ ಕಾಳಜಿ ವಹಿಸುವವರು ಬರುತ್ತಿದ್ದಾರೆನ್ನುವುದು ಸಂತೋಷದ ವಿಷಯ. ಇದು ಈಗ ಮುಖ್ಯವೆಂದು ಕರೆಯಬಹುದಾದ ಒಂದು ತಿರುವು. ಆದರೆ, ಸಾಹಿತ್ಯದ ಎಲ್ಲ ಪ್ರಕಾರಗಳಿಗೆ ಸಂಬಂಧಿಸಿದಂತೆ ಇಂಥ ‘ಧೋರಣೆ’ಯುಳ್ಳವರು ಸಂಘಟಿತರಾಗಿ ಕ್ರಿಯಾಮಗ್ನರಾದಾಗ ಒಂದು ಹೊಸ ಚಳವಳಿಯ ಹುಟ್ಟು ಆಗಬಹುದು..!’ ಎಂದೂ ಅವರು ಹೇಳಿದ್ದರು.

ಬರಗೂರು ರಾಮಚಂದ್ರಪ್ಪನವರ ಈ ಲೇಖನಕ್ಕೆ ಮುಂಚೆಯೇ ಬಂದ ಪೂರ್ಣಚಂದ್ರ ತೇಜಸ್ವಿಯವರ ‘ಅಬಚೂರಿನ ಪೋಸ್ಟಾಫೀಸು’ ಕಥಾ ಸಂಕಲನದ ಆರಂಭದಲ್ಲಿದ್ದ ‘ಹೊಸ ದಿಗಂತದ ಕಡೆಗೆ’ ಎಂಬ ಲೇಖನವು ಹೊಸ ಹುಡುಕಾಟದ ಅಗತ್ಯಗಳನ್ನು ಹೇಳುತ್ತದೆ. ‘ಹಳೆ ಸಾಹಿತ್ಯಕ್ಕೂ ಹೊಸ ಸಾಹಿತ್ಯಕ್ಕೂ ನಡುವಿನ ಘರ್ಷಣೆ, ಹಳೆ ಸಂಪ್ರದಾಯ, ಆಚಾರ, ಪರಂಪರೆ ಮುಂತಾದವುಗಳೆಲ್ಲದರ ವಿರುದ್ಧವಾದ ಆಂದೋಲನವಾಗಲಿಲ್ಲ’ ಎಂದು ನವ್ಯ ಸಾಹಿತ್ಯ ಸಂದರ್ಭವನ್ನು ಬರಗೂರು ರಾಮಚಂದ್ರಪ್ಪ ಅವರು ವಿಶ್ಲೇಷಿಸಿಸುತ್ತಾರೆ.

ಅದೇನೇ ಇರಲಿ, ಆಗ ಕನ್ನಡ ಸಾಹಿತ್ಯ ಕ್ಷೇತ್ರವು ವಿವಿಧ ಸಾಮಾಜಿಕ ತಳಮಳಗಳನ್ನು ಒಳಗೊಳ್ಳುವ ಹಸಿವಿನಿಂದ ಕೂಡಿತ್ತು ಎಂಬುದಿಲ್ಲಿ ಮುಖ್ಯವಾಗಿದೆ. ಇಲ್ಲದಿದ್ದರೆ ಅದು ಹೊಸ ಸಾಹಿತ್ಯ ಚಳವಳಿಗೆ ಕಾರಣವಾಗುತ್ತಿರಲಿಲ್ಲ. ಬದಲಾಗಿ ಸಾಮಾಜಿಕ ಚಳವಳಿ ಮಾತ್ರ ಆಗುತ್ತಿತ್ತು. ಅಂತೂ ಎಲ್ಲ ಪ್ರೇರಣೆಗಳೊಂದಾದ ಹದಗೊಂಡ ಕಾಲದಲ್ಲಿ, ಸಾಮಾಜಿಕ ತಳಮಳಗಳಿಗೆ ಕಳಕಳಿಯ ಕಣ್ಣಾಗುವ ಬಂಡಾಯ ಸಾಹಿತ್ಯ ಚಳವಳಿ ರೂಪುಗೊಂಡಿತ್ತು. ನವ್ಯ ಸಾಹಿತ್ಯ ಸಂದರ್ಭದಲ್ಲಿ ಪ್ರಧಾನವಾಗಿದ್ದ ವೈಯಕ್ತಿಕತೆಯಿಂದ ಸಾಮಾಜಿಕತೆಯತ್ತ ಹೊರಳಿತು.

ಈ ಸಂದರ್ಭದಲ್ಲಿ ದಲಿತ, ಬಂಡಾಯ ಮತ್ತು ಸಮುದಾಯ — ಪರಸ್ಪರ ಪೂರಕವಾಗಿ ಬೆಳೆದವು.ಸಾಂಸ್ಕೃತಿಕ ಕ್ಷೇತ್ರಕ್ಕೆ ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆಯನ್ನು ಬೆಸೆದವು. ಇಲ್ಲಿ ರಾಜಕೀಯ ಪ್ರಜ್ಞೆಯೆಂದರೆ ರಾಜಕೀಯ ಪಕ್ಷ ಪರವಾದ ಪ್ರಜ್ಞೆಯಲ್ಲ. ಪ್ರಜಾಸತ್ತಾತ್ಮಕ ಪರವಾದ ಪ್ರಜ್ಞೆಯು.

ಬಂಡಾಯ ಸಾಹಿತ್ಯ ಚಳವಳಿಯು ಯಾವುದೇ ಪಕ್ಷ ಪರವಲ್ಲದ, ಸಮಾನತೆಗೆ ಬದ್ಧವಾದ ವಿಶಾಲ ವ್ಯಾಪ್ತಿಯ ಪ್ರಗತಿಪರ, ಸಾಮಾಜಿಕ, ರಾಜಕೀಯ ಪ್ರಜ್ಞೆಯನ್ನು ಪ್ರತಿಪಾದಿಸಿತು. ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ತೊಡಗಿಸಿಕೊಂಡವರು ತಮ್ಮ ತಮ್ಮ ವೈಚಾರಿಕ ಪಂಥಗಳನ್ನು ಉಳಿಸಿಕೊಂಡು ಒಟ್ಟಾರೆ ಸಮಾನತಾ ಸಂಸ್ಕೃತಿಗೆ ಬದ್ಧವಾದ ಸಾಮಾನ್ಯ ನೆಲೆಯಲ್ಲಿ ಒಂದಾಗಿ ಚಳವಳಿಯನ್ನು ಬೆಳೆಸಿದ್ದು ಒಂದು ವಿಶೇಷವಾಗಿದೆ.

ಯಾವುದೇ ಜನಪರವುಳ್ಳ ವಾದ — ಸಿದ್ಧಾಂತದವರು ಬಂಡಾಯ ಸಾಹಿತ್ಯ ಸಂಘಟನೆಯ ಭಾಗವಾಗಬಹುದು. ಹೀಗಾಗಿಯೇ ನಮ್ಮ ಬಂಡಾಯ ಸಂಘಟನೆಯಲ್ಲಿ ಗಾಂಧಿವಾದ, ಲೋಹಿಯಾವಾದ, ಮಾರ್ಕ್ಸ್‌ವಾದ, ಅಂಬೇಡ್ಕರ್ ವಾದ, ಮುಂತಾದವುಗಳಿಗೆ ಬದ್ಧವಾದವರು ಮತ್ತು ಯಾವುದೇ ವಾದಕ್ಕೂ ಬದ್ಧವಾಗದೇ, ಒಟ್ಟಾರೆ ಸಾಮಾಜಿಕ — ಆರ್ಥಿಕ ಸಮಾನತೆ ಮತ್ತು ಬದಲಾವಣೆಗೆ ಬದ್ಧವಾದವರು ಕೂಡ‌ ಬಂಡಾಯ ಸಂಘಟನೆಯ ಭಾಗವಾಗಲು ಅವಕಾಶವಿತ್ತು.ಇದು ಒಂದು ಸಾಮಾಜಿಕ — ಸಾಂಸ್ಕೃತಿಕ ಒಕ್ಕೂಟವಾಗುತ್ತದೆ. ದೇಶದಲ್ಲೇ ಒಂದು ವಿಶಿಷ್ಟ ಪ್ರಯೋಗವಾಗಿ ನಾಲ್ಕು ದಶಕ ದಾಟಿ ಐದನೇ ದಶಕದಲ್ಲಿ ನಡೆಯುತ್ತಿದೆ.

ಬಂಡಾಯ ಸಾಹಿತ್ಯವು ಒಂದು ಚಳವಳಿಯಾಗಿ ರೂಪುಗೊಂಡಾಗ ಕೆಲವು ಚರ್ಚೆಗಳನ್ನು ಹುಟ್ಟುಹಾಕಿತು. ಮೊದಲನೆಯದಾಗಿ, ಸಾಹಿತಿಗಳಿಗೆ ಸಾಮಾಜಿಕ ಜವಾಬ್ದಾರಿಯಿರಲೇಬೇಕು ಎಂಬ ನಮ್ಮ ಪ್ರತಿಪಾದನೆಯು, ಸೃಜನಶೀಲ ಸ್ವಾತಂತ್ರ್ಯಕ್ಕೆ ವಿರುದ್ಧ ಎಂದು ವಿರೋಧಿಸಲಾಯಿತು. ಸಾಹಿತಿಯು ಬದುಕಿಗೆ ಮಾತ್ರ ಬದ್ಧ ಎಂದು ಸಮರ್ಥನೆ ಕೊಡಲಾಯಿತು.

ಹಾಗಾದರೆ ಈ ‘ಬದುಕು’ ಎನ್ನುವುದು ಎಲ್ಲಿದೆ.!? ಸಮಾಜದಲ್ಲಿ ತಾನೆ.!? ಜನರಲ್ಲಿ ತಾನೆ.!? ಸಾಹಿತಿಗಳೂ ಜನರಲ್ಲವೆ.!? ಸಮಾಜದಲ್ಲೇ ಬದುಕುತ್ತಿಲ್ಲವೆ.!? ಆದ್ದರಿಂದ ಸಾಹಿತ್ಯವು ವೈಯಕ್ತಿಕ ಲೋಲುಪತೆಯಾಗದೇ ಸಾಮಾಜಿಕ ಜವಾಬ್ದಾರಿಯಿಂದ ಕೂಡಿರಬೇಕು. ಸಾಹಿತಿಗಳು ಜನರಿಗೆ ಜವಾಬ್ದಾರರಾಗಬೇಕು. ಆಗ ಸಾಮಾಜಿಕ ಬದುಕು ಮತ್ತು ಸಾಹಿತ್ಯದ ಸಂಬಂಧ ಗಾಢವಾಗುತ್ತದೆ.

ಪ್ಲಖನೋವ್ ಎಂಬ ಚಿಂತಕ ಹೇಳಿದ ಮಾತೊಂದು ಇಲ್ಲಿ ಉಲ್ಲೇಖನೀಯವೂ ‘ನಾವು ಕಲಾಕಾರರು (ಸಾಹಿತಿಗಳು) ಜನರಿಂದ ಮನ್ನಣೆ ಪಡೆಯುತ್ತೇವೆ. ಜನರು ನಮ್ಮಿಂದ ಜವಾಬ್ದಾರಿಯನ್ನು ಬಯಸುತ್ತಾರೆ’. ಮಾರ್ಕ್ಸ್‌ ಅಡೆರೆತ್ ಎಂಬ ವಿಮರ್ಶಕ ವಿಶ್ಲೇಷಿಸಿದ್ದು ಹೀಗೆ : ‘ಸಾಮಾಜಿಕ ಜವಾಬ್ದಾರಿಯೆನ್ನುವುದು ಸೃಜನಶೀಲ ಸ್ವಾತಂತ್ರ್ಯದಿಂದ ಹೊರಗಿನದಲ್ಲ. ಅದು ಸೃಜನಶೀಲ ಸ್ವಾತಂತ್ರ್ಯದಿಂದ ಬೇರ್ಪಡಿಸಲಾಗದ ಒಂದು ಆಯಾಮವೆಂದೂ..!’

ಬದ್ಧತೆಯ ವಿಷಯದಲ್ಲೂ ತಕರಾರು ಎತ್ತಿದವರು, ಎತ್ತುತ್ತಿರುವವರು ಇದ್ದಾರೆ. ಬದ್ಧತೆಯ ಪರಿಕಲ್ಪನೆಯೂ ಸೃಜನಶೀಲ ಸ್ವಾತಂತ್ರ್ಯದ ವಿರೋಧಿ ಎನ್ನುತ್ತಾರೆ. ಅದು ಬರಗೂರು ರಾಮಚಂದ್ರಪ್ಪನವರ ದೃಷ್ಟಿಯಲ್ಲಿ ‘ಬದ್ಧತೆ’ ಎನ್ನುವುದು ನಿರ್ದಿಷ್ಟ ಜೀವನ ದೃಷ್ಟಿಕೋನ ಅಥವಾ ಜೀವನ ಸಿದ್ಧಾಂತವು.

ಇದು ಇಲ್ಲದ ಯಾವ ಮುಖ್ಯ ಲೇಖಕರನ್ನೂ ನಾನು ಕಂಡಿಲ್ಲ ಎನ್ನುತ್ತಾರೆ ಬರಗೂರು ರಾಮಚಂದ್ರಪ್ಪನವರು. ಪಂಪ, ಬಸವಣ್ಣ, ಅಲ್ಲಮ, ಕುಮಾರವ್ಯಾಸ, ಕನಕದಾಸ, ಕುವೆಂಪು, ಬೇಂದ್ರೆ, ಅಡಿಗ‌ ಹೀಗೆಯೇ ಯಾರನ್ನೇ ತೆಗೆದುಕೊಳ್ಳಿ, ಅವರವರ ಸೈದ್ಧಾಂತಿಕ ನೆಲೆ — ನಿಲುವುಗಳು ಇರಲಿಲ್ಲವೆ.!? ಇದ್ದವು. ಇಂತಹ ಪರಂಪರೆಯ ಪ್ರಜ್ಞೆಯನ್ನು ಗೌರವಿಸುತ್ತಲೇ ಬಂಡಾಯ ಸಾಹಿತ್ಯ ಚಳವಳಿಯು ವಿಶಾಲವ್ಯಾಪ್ತಿಯ ಸಾಮಾಜಿಕ ಸೈದ್ಧಾಂತಿಕ ಪರಿಕಲ್ಪನೆಯನ್ನು ಪ್ರತಿಪಾದಿಸಿದೆ. ಹಾಗೆಂದು ಸಾಹಿತಿಯೊಬ್ಬ ಸಿದ್ಧಾಂತದ ಬಂಧಿಯಾಗಬೇಕಿಲ್ಲ. ತಾನು ನಂಬಿದ ಸಿದ್ಧಾಂತವು ಸ್ಫೂರ್ತಿ ಮಾತ್ರವಾಗಿರಬೇಕು. ವಿಶಿಷ್ಟ ನೋಟಗಳಿಗೆ ಪ್ರೇರಕವಾಗಬೇಕು.

ತಾವು ನಂಬಿದ ಸಿದ್ಧಾಂತದ ಜೊತೆಯೂ ಮಾನಸಿಕ ದೂರದ ದೃಷ್ಟಿ ಸಾಧ್ಯವಾಗಬೇಕು. ಸಿದ್ಧಾಂತ ಕೂಡ ಸೃಜನಶೀಲವಾಗಿರಬೇಕು; ಜಡವಾಗಬಾರದು. ಸೈದ್ಧಾಂತಿಕ ಜಡತೆಯ ಬದಲು ಸೈದ್ಧಾಂತಿಕ ಸೃಜನಶೀಲತೆ ಮುಖ್ಯವಾಗಬೇಕು. ಸೈದ್ಧಾಂತಿಕತೆಯು ದರ್ಶನಾತ್ಮಕತೆಗೆ ಹಾದಿ ತೋರಬೇಕು. ಈ ನೆಲೆಯಲ್ಲಿ ನಾವು ಬದ್ಧತೆಯ ವಿಷಯವನ್ನು ಅರ್ಥಮಾಡಿಕೊಳ್ಳಬೇಕು ಎಂದು ಬರಗೂರು ರಾಮಚಂದ್ರಪ್ಪನವರ ನಿಲುವು.

ಬಂಡಾಯ ಸಾಹಿತ್ಯ ಚಳವಳಿಯು ಉಂಟುಮಾಡಿದ ದೊಡ್ಡ ಪರಿಣಾಮಗಳಲ್ಲಿ ಒಂದು — ಹೊಸ ಬರಹಗಾರರಲ್ಲಿ ಮೂಡಿಸಿದ ಆತ್ಮವಿಶ್ವಾಸ. ವಿವಿಧ ಸಾಮಾಜಿಕ ವಲಯಗಳಿಂದ ಬಂದು ಮೊತ್ತಮೊದಲ ಬಾರಿಗೆ ಅಕ್ಷರಾಭಿವ್ಯಕ್ತಿಗೆ ತೊಡಗಿದವರು ಅಳುಕನ್ನು ಮೀರಿ ತಮಗೊಂದು ತಾಣವಿದೆಯೆಂದು ಭಾವಿಸುವಂತೆ ಮಾಡಿದ್ದು ಸಾಮಾನ್ಯ ಸಂಗತಿಯಲ್ಲ.

ಯಾಕೆಂದರೆ ಅನೇಕ ಸಾಮಾಜಿಕ ಸಮುದಾಯಗಳಿಗೆ ಬರೆಯುವುದೇ ಬಂಡಾಯವಾಗಿತ್ತು. ದಲಿತ — ಬಂಡಾಯ ಚಳವಳಿಗಳು ಇಲ್ಲದಿದ್ದರೆ, ಶ್ರೇಷ್ಠತೆಯ ಸೊಕ್ಕು, ಅನೇಕರ ಆತ್ಮವಿಶ್ವಾಸವನ್ನು ಕುಗ್ಗಿಸಿ ಪ್ರತಿಭಾ ಭ್ರೂಣ ಹತ್ಯೆ ಮಾಡುತ್ತಿತ್ತು. ಅನೇಕ ಪ್ರತಿಭಾವಂತರನ್ನು ಪ್ರತಿಭಾ ಭ್ರೂಣಹತ್ಯೆಯಿಂದ ಪಾರುಮಾಡಿದ್ದು ದಲಿತ — ಬಂಡಾಯ ಸಾಹಿತ್ಯ ಚಳವಳಿಗಳು ಎಂಬುದೀಗ ಚಾರಿತ್ರಿಕ ವಾಸ್ತವವಾಗಿದೆ.
ಇನ್ನೊಂದು ಮಾತನ್ನು ಇಲ್ಲಿಯೇ ಹೇಳಬೇಕು. ಬಂಡಾಯವೆಂದರೆ ‘ಹೊಡಿಬಡಿ’ಯ ಮಾತಲ್ಲ; ಹಿಂಸೆಯ ಜಾಡಲ್ಲ. ನೈಜವಾದ ಪ್ರಜಾಸತ್ತಾತ್ಮಕ ಹಾದಿಯಲ್ಲಿ ಬಯಸುವ ಬದಲಾವಣೆಯೇ ನಮ್ಮ ಬಂಡಾಯದ ಅರ್ಥವು.

ಹೊಸ ಬರಹಗಾರರ ಆತ್ಮವಿಶ್ವಾಸ ಒಂದು ಕಡೆಗಾದರೆ, ತಾತ್ವಿಕ ಸ್ಥಿತ್ಯಂತರಗಳಿಗೆ ಕಾರಣವಾದ ಸಾರ್ಥಕತೆ ಇನ್ನೊಂದು ಕಡೆಗಿದೆ. ಬಂಡಾಯ ಸಾಹಿತ್ಯದ ತಾತ್ವಿಕತೆಯಿಂದ ಸಮಾಜ, ಸಂಸ್ಕೃತಿ, ಸಾಹಿತ್ಯ, ಮುಂತಾದ ವಲಯಗಳನ್ನು ವ್ಯಕ್ತಿಕೇಂದ್ರಿತ ಚಿಂತನೆಯಿಂದ ಸಮುದಾಯ ಕೇಂದ್ರಿತ ಚಿಂತನೆಗೆ ಸ್ಥಿತ್ಯಂತರಗೊಳಿಸುವ ಪ್ರಕ್ರಿಯೆ ಪ್ರಬಲವಾಯಿತು.

ವ್ಯಕ್ತಿಪ್ರಜ್ಞೆ ಮತ್ತು ಸಮೂಹ ಪ್ರಜ್ಞೆಗಳ ಸಂಬಂಧ ಗಾಢವಾಯಿತು. ಲೋಕಾಂತದ ಮೂಲಕ ಏಕಾಂತ ಮತ್ತು ಏಕಾಂತದ ಮೂಲಕ ಲೋಕಾಂತವನ್ನು ಕಾಣುವ ಅಭಿವ್ಯಕ್ತಿ ವಿಧಾನ ರೂಪುಗೊಂಡಿತು. ವಿಮರ್ಶೆಯ ಸಿದ್ಧ ಮಾದರಿಗಳನ್ನು ಮೀರಿ ಹೊಸ ನೆಲೆ — ನಿಲುವುಗಳಿಂದ ಸಾಹಿತ್ಯವನ್ನು ವಿಶ್ಲೇಷಿಸುವ ಪ್ರಕ್ರಿಯೆ ಪ್ರಾರಂಭವಾಯಿತು.

ಪರಂಪರೆಯ ಪ್ರಜ್ಞೆ ಮತ್ತು ಪ್ರಗತಿ ಪ್ರಜ್ಞೆಗಳು ಪರಸ್ಪರ ಪ್ರತಿರೋಧಿಗಳಾಗದೇ, ಪೂರಕವಾಗಿ ಬೆಳೆಯಬೇಕೆಂಬ ಪ್ರತಿಪಾದನೆ ಪ್ರಬಲಗೊಂಡಿತು. ಹೀಗಾಗಿಯೇ ಬಂಡಾಯ ಸಾಹಿತ್ಯ ಚಳವಳಿಯು ತನಗಿಂತ ಹಿಂದಿನ ಎಲ್ಲಾ ಸಾಹಿತ್ಯ ಧಾರೆಗಳಿಂದಲೂ ಪ್ರಗತಿಪರ ಚಿಂತನೆಗಳನ್ನು ಪಡೆದುಕೊಂಡು ಬೆಳೆಯತೊಡಗಿತು; ಅಂತಹ ಚಿಂತನೆಗಳನ್ನು ಗೌರವಿಸುತ್ತಲೇ ಸಮಕಾಲೀನ ಸಂದರ್ಭಕ್ಕೆ ಅಗತ್ಯವಾದ ಹೊಸ ತಾತ್ವಿಕತೆಯನ್ನು ಕಟ್ಟಿಕೊಂಡಿತು. ವಿಶೇಷವೆಂದರೆ ನೇರವಾಗಿ ಬಂಡಾಯ ಸಾಹಿತ್ಯ ಚಳವಳಿಯ ಸಂಬಂಧವಿಲ್ಲದ ಸಾಹಿತಿಗಳ ಮೇಲೂ ಪರೋಕ್ಷ ಪರಿಣಾಮ ಬೀರಿತು.

ಬಹುಪಾಲು ಬರಹಗಾರರು ನಮ್ಮಲ್ಲಿರುವ ಜಾತಿಪದ್ಧತಿ, ಅಸ್ಪೃಶ್ಯತೆ, ಅಸಮಾನತೆಗಳನ್ನು ಒಪ್ಪದೇ, ತಮ್ಮ ತಮ್ಮ ರೀತಿಯಲ್ಲಿ ಪ್ರತಿಕ್ರಿಯಿಸುವಷ್ಟರಮಟ್ಟಿಗೆ ಬದಲಾವಣೆ ಕಾಣಿಸಿತು. ಈ ಬದಲಾವಣೆಗೆ ಬಂಡಾಯ ಸಾಹಿತ್ಯ ಚಳವಳಿ ಒಂದು ಪ್ರೇರಣೆಯಾಗಿತ್ತು.
ಜೊತೆಗೆ ನಮ್ಮ ನಾಡಿನ ದಲಿತ ಚಳವಳಿ, ರೈತ ಚಳವಳಿ, ಮಹಿಳಾ ಚಳವಳಿಗಳ ಪ್ರಭಾವವೂ ಇತ್ತು. ಒಟ್ಟಾರೆ ಇದೊಂದು ಸಕಾರಾತ್ಮಕ ಬೆಳವಣಿಗೆಯಾಗಿತ್ತು.

ಈಗ ನಕಾರಾತ್ಮಕ ಬೆಳವಣಿಗೆಗಳು ಬಲವಾಗುತ್ತಿವೆ. ದೇಶ, ಧರ್ಮ, ಸಂಸ್ಕೃತಿ ಮುಂತಾದ ಪರಿಕಲ್ಪನೆಗಳನ್ನು ಅಪವ್ಯಾಖ್ಯಾನಿಸಿ ಜನರ ಸಂಬಂಧ ಹಾಗೂ ಸೌಹಾರ್ದವನ್ನು ಒಡೆಯಲಾಗುತ್ತಿದೆ. ಹಿಂಸಾತ್ಮಕ ಭಾಷೆ ಮತ್ತು ಕ್ರಿಯೆಗಳೂ ಮುನ್ನೆಲೆಗೆ ಬರುತ್ತಿವೆ. ಇಂಥ ಕೆಟ್ಟ ಸನ್ನಿವೇಶದ ಹೊಣೆಯನ್ನು ಎಲ್ಲಾ ಧರ್ಮಗಳ ಮೂಲಭೂತವಾದಿಗಳೂ ಹೊರಬೇಕಾಗಿದೆ.ಎಂದಿಗಿಂತ ಇಂದು ಸಮಾನತೆ ಮತ್ತು ಸಹಿಷ್ಣುತೆಗಳ ಮಾನವೀಯ ಮೌಲ್ಯ ಮುಖ್ಯವಾಗಬೇಕಾಗಿದೆ. ಸಮತೆ ಮತ್ತು ಮಮತೆಗಳ ‘ಬಹುತ್ವ ಭಾರತೀಯತೆ’ಯ ಭಾವ ಹೃದಯಸ್ಥವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯು ಕಾರ್ಯಪ್ರವೃತ್ತವಾಗಿದೆ. ಬೆಂಗಳೂರು, ತುಮಕೂರು, ಚಿತ್ರದುರ್ಗ, ಬೆಳಗಾವಿ ಮತ್ತು ಬಳ್ಳಾರಿಯಲ್ಲಿ ದೊಡ್ಡಮಟ್ಟದ ಕಾರ್ಯಾಗಾರಗಳನ್ನು ನಡೆಸಿದೆ. ಕೇವಲ ಈ ನಾಲ್ಕು ವರ್ಷಗಳಲ್ಲೇ ರಾಜ್ಯದಾದ್ಯಂತ ನಲವತ್ತಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಸಂಘಟಿಸಿದೆ.

ಈಗ, ಎಲ್ಲ ಮಾನವೀಯ ಚಳವಳಿಗಳ ಜೊತೆಗೂಡಿ ಕ್ರಿಯಾಶೀಲವಾಗುವ ಆಶಯದಿಂದ ದಾವಣಗೆರೆಯಲ್ಲಿ ಇದೇ ತಿಂಗಳು 23 ಮತ್ತು 24 ರಂದು ರಾಜ್ಯ ಸಮ್ಮೇಳನವನ್ನು ಆಯೋಜಿಸುತ್ತಿದೆ. ಸೈದ್ಧಾಂತಿಕ ಚಲನಶೀಲತೆಯ ಚಕ್ರ ಹೀಗೆಯೇ ಮುನ್ನಡೆಯಲಿದೆ ಎಂದೂ ಬರಗೂರು ರಾಮಚಂದ್ರಪ್ಪನವರು ಹೇಳುತ್ತಾರೆಯೂ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here