ಭಾಲ್ಕಿ: ಬಸವಾದಿ ಶರಣರ ಸಮಕಾಲೀನ ಕುಂಬಾರ ಗುಂಡಯ್ಯ ಕಾಯಕ ನಿಷ್ಠರಾಗಿದ್ದರು. ಅವರು ಕಾರ್ಯಕ್ಷೇತ್ರ ಭಾಲ್ಕಿ ಆಗಿದೆ. ಅವರಿಂದ ಈ ಪಟ್ಟಣ ಐತಿಹಾಸಿಕ ಮಹತ್ವ ಪಡೆದಿದೆ. ಕೈಲಾಸ ಬೇಡ ಕಾಯಕವೇ ಇರಲಿ ಎಂಬುದು ಅವರ ದಿವ್ಯ ಸಂದೇಶವಾಗಿದೆ. ಇವರ ಪತ್ನಿ ಕೇತಲದೇವಿ ಅನಾಚಾರಿಗಳ ಸಂಗ ನರಕಕ್ಕೆ ಮೂಲ ಎಂದು ತಮ್ಮ ವಚನದಲ್ಲಿ ಬೋಧಿಸಿದ್ದಾರೆ ಎಂದು ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು. ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮದಲ್ಲಿ ಏರ್ಪಡಿಸಿದ ೨೭೯ ನೇ ಮಾಸಿಕ ಶರಣ ಸಂಗಮ ಮತ್ತು ಕುಂಬಾರ ಗುಂಡಯ್ಯ ಜಯಂತಿ ಕಾರ್ಯಕ್ರಮದ ದಿವ್ಯಸನ್ನಿಧಾನ ವಹಿಸಿ ಪೂಜ್ಯ ಶ್ರೀಗಳು ಆಶೀರ್ವಚನಗೈದರು.
ಕರ್ನಾಟಕ ಜಾನಪದ ಪರಿಷತ್ತು ಭಾಲ್ಕಿ ಘಟಕದ ಅಧ್ಯಕ್ಷ ವಸಂತ ಹುಣಸನಾಳೆ ಅಧ್ಯಕ್ಷತೆ ವಹಿಸಿದ್ದರು. ತಮ್ಮ ಸೇವೆಯಿಂದ ನಿವೃತ್ತರಾದ ಕ್ರಾಂತಿವೀರ ಸಿರ್ಸೆ, ಬಸವರಾಜ ಬಿರಾದಾರ, ವೈ.ಆರ್.ಇಂಗಳೆ ಅವರಿಗೆ ಸನ್ಮಾನಿಸಲಾಯಿತು. ನಾಟಿವೈದ್ಯ ರವಿದಾಸ ಮೆಂಗಾ ಮುಖ್ಯ ಅತಿಥಿಗಳಾಗಿದ್ದರು.
ಭಾಲ್ಕಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವಂತರಾಯ ಜಿಡ್ಡೆ ಅವರ ಹುಟ್ಟುಹಬ್ಬ ನಿಮಿತ್ಯ ಪೂಜ್ಯರಿಂದ ಆಶೀರ್ವಾದ ಪಡೆದರು. ಡೋಣಗಾಪೂರದ ಪೂಜ್ಯ ದೇವಮ್ಮತಾಯಿ, ಶಾಂತಮ್ಮ ವಾಡೆ, ಸಹದೇವ ಉಪಸ್ಥಿತರಿದ್ದರು.
ನಿರ್ಮಲಾ ಪ್ರಭುರಾವ ದೇವಣೆ ಭಕ್ತಿದಾಸೋಹ ವಹಿಸಿಕೊಂಡಿದ್ದರು. ಕುಂಬಾರ ಸಮಾಜದ ಅಧ್ಯಕ್ಷ ಜಯಪ್ರಕಾಶ ಕುಂಬಾರ ಅವರು ಬಸವಗುರುಪೂಜೆ ನೆರವೇರಿಸಿದರು. ರಾಜು ಜುಬರೆ ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು.
ಯಲ್ಲನಗೌಡ ಬಾಗಲಕೋಟ, ಚನ್ನಬಸವ ವಡಗಾಂವ ಅವರಿಂದ ವಚನ ಗಾಯನ ನಡೆಯಿತು. ವೀರಣ್ಣ ಕುಂಬಾರ ಸ್ವಾಗತಿಸಿ ನಿರೂಪಿಸಿದರು. ಶಾಂತಯ್ಯ ಸ್ವಾಮಿ ವಂದಿಸಿದರು.