ಮಹಿಳಾ ಉದ್ಯಮಿಗಳಿಗೆ ಡಿಜಿಟಲ್ ಪರಿವರ್ತನೆ ಹೊಸ ದಾರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

0
21

ಬೆಂಗಳೂರು: ದೇವರು ಎಲ್ಲವನ್ನೂ ಸೃಷ್ಟಿಸಲು ಸಾಧ್ಯವಿಲ್ಲವೆಂದು, ಮಹಿಳೆಯರನ್ನು ಸೃಷ್ಟಿಸಿದ. ಜೊತೆಯಲ್ಲಿ ಮಹಿಳೆಯರಿಗೆ ಸೃಷ್ಟಿಸುವ ಪರಮಾಧಿಕಾರವನ್ನು ದೇವರು ನೀಡಿದ್ದಾನೆ, ಮಹಿಳೆಯರು ಏನು ಬೇಕಾದರೂ ಸೃಷ್ಟಿಸುವ ಶಕ್ತಿ ಹೊಂದಿದ್ದಾರೆ. ಸ್ವಸಹಾಯ ಸಂಘದ ಮೂಲಕ ಇಂದು ರಾಜ್ಯದ ಮಹಿಳೆಯರು ಬೆಳೆಸುತ್ತಿರುವ ಕಿರು ಉದ್ದಿಮೆಗಳಿಗೆ ಡಿಜಿಟಲ್ ತರಬೇತಿ ನೀಡುವ ಮೂಲಕ ಮಾರುಕಟ್ಟೆ ವ್ಯವಸ್ಥೆಯನ್ನು ಜಾಗತಿಕ ವಿಸ್ತರಿಸುವ ಕಾರ್ಯವನ್ನು UBUNTU & UNESCAP ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಇಂದು ಮತ್ತು ನಾಳೆ ನಗರದ ಅಶೋಕ ಹೋಟೆಲ್ ನಲ್ಲಿ ಎರಡು ದಿನಗಳ ಕಾಲ UBUNTU & UNESCAP ಸಹಯೋಗದಲ್ಲಿ ಹಮ್ಮಿಕೊಂಡಿರುವ “ಡಿಜಿಟಲ್ ಪರಿವರ್ತನೆ ಮಹಿಳಾ ಉದ್ಯಮಿಗಳಿಗೆ ಹೊಸ ದಾರಿ” ಕಾರ್ಯಕ್ರಮದಡಿಯಲ್ಲಿ 10,000 ಮಹಿಳೆಯರಿಗೆ ಡಿಜಿಟಲ್ ಮಾರ್ಕೆಟಿಂಗ್ ಕುರಿತು ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದ ಜನಸಂಖ್ಯೆಯಲ್ಲಿ ಪುರುಷರಷ್ಟೆ ಸರಿಸಮಾನರಾಗಿರುವ ಮಹಿಳೆಯರು ಪುರುಷರಿಗಿಂತ ಕಡಿಮೆ ಇಲ್ಲ, ಅವರಿಗೆ ಇಂತಹ ತರಬೇತಿಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸುವುದು ನಮ್ಮ ಜವಬ್ಧಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Contact Your\'s Advertisement; 9902492681

ಕಳೆದ ಒಂದು ವರ್ಷದಲ್ಲಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ, ಇಂದು ಡಿಜಿಟಲ್ ಮಾರುಕಟ್ಟೆ ವ್ಯವಸ್ಥೆ ದೈತ್ಯವಾಗಿ ಬೆಳೆಯುತ್ತಿದ್ದು, ಗ್ರಾಮೀಣ ಭಾಗದ ಕರಕುಶಲ ಮತ್ತು ಸಣ್ಣ ಉದ್ದಿಮೆಗಳಿಗೆ ಡಿಜಿಟಲ್ ಮಾರುಕಟ್ಟೆ ವ್ಯವಸ್ಥೆಯ ತರಬೇತಿ ಅವಶ್ಯಕವಾಗಿದೆ. ಜ್ಞಾನ ಕೇವಲ ಒಬ್ಬರ ಸ್ವತ್ತಲ್ಲ, ಅದು ವಿದ್ಯುಚ್ಛಕ್ತಿಯಂತೆ ಸದಾ ಹರಿಯುತ್ತಿರಬೇಕು, ಅದು ನಿಂತ ನೀರಾಗಬಾರದು, ಇಂತಹ ಕಾರ್ಯಗಾರಗಳನ್ನು ಹಮ್ಮಿಕೊಳ್ಳುವ ಮೂಲಕ ಜ್ಞಾನಕ್ಕೆ ಹರಿಯುವ ಮತ್ತು ಹಂಚುವ ಕೆಲಸವನ್ನು ಮಾಡಬೇಕು. ಸಮಾಜದಲ್ಲಿ ಜ್ಞಾನವಂತರಿಗೆ ವಿಶೇಷ ಸ್ಥಾನವಿದೆ.

ಡಿಜಿಟಲ್ ಮಾರುಕಟ್ಟೆ ವ್ಯವಹಾರ ಮುಖಸ್ತುತಿ ಹೊಂದಿರುವುದಿಲ್ಲ, ಇಲ್ಲಿ ಮಾರಾಟಕ್ಕಿಟ್ಟ ವಸ್ತುಗಳ ಗುಣಮಟ್ಟ ಮತ್ತು ಅದರ ನಂಬಿಕೆಯೆ ಮುಖ್ಯ ಬಂಡವಾಳ, ಇಲ್ಲಿ ವಸ್ತುಗಳನ್ನು ಮಾಡಿದವರು, ಮಾರಿದವರು ಮತ್ತು ಕೊಳ್ಳುವವರಿಗೆ ಒಬ್ಬರಿಗೊಬ್ಬರು ಪರಿಚಯವಿರುವುದಿಲ್ಲ. ಇಲ್ಲೇನಿದ್ದರು ಕೇವಲ ನಂಬಿಕೆ ಎಂಬ ಬಂಡವಾಳ ಹಣಕ್ಕಿಂತ ಮುಖ್ಯವಾಗಿರುತ್ತಿದೆ ಎಂದು ಹೇಳಿದರು.

ರಾಜ್ಯದ ಅಭಿವೃದ್ಧಿಗೆ ಮಹಿಳೆಯರು ಇಂಜಿನ್ ಇದ್ದಂತೆ ಎಂಬುದನ್ನು ಮನಗಂಡು ರಾಜ್ಯದಲ್ಲಿ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಈಗಾಗಲೇ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲೂ ಮಹಿಳಾ ಸ್ವಸಹಾಯ ಸಂಘಗಳನ್ನು ಪ್ರೋತ್ಸಾಹಿಸಲು ಹೊಸದಾಗಿ ರಾಜ್ಯದ 33,000 ಮಹಿಳಾ ಸ್ವಸಹಾಯ ಸಂಘಗಳಿಗೆ ಆರ್ಥಿಕ ಸಹಾಯ ಮತ್ತು ಮಾರುಕಟ್ಟೆ ವಿಸ್ತರಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಪ್ರತಿ ಹಳ್ಳಿಯಲ್ಲೊಂದು ಪ್ರಬಲ ಮಹಿಳಾ ಸ್ವಸಹಾಯ ಸಂಘಗಳನ್ನು ಸ್ಥಾಪಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ನಾಂದಿಯಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ UBUNTU ಸಂಸ್ಥಾಪಕ ಅಧ್ಯಕ್ಷರಾದ ಕೆ.ರತ್ನಪ್ರಭಾ ಅವರು ಮಾತನಾಡಿ, ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಇ-ಕಾಮರ್ಸ್‌ ಪ್ರಬಲ ಸಾಧನವಾಗಿದೆ. ಇದು ಮಹಿಳಾ ಉದ್ಯಮಿಗಳಿಗೆ ಹೆಚ್ಚಿನ ಲಾಭವನ್ನು ತರಬಹುದು. ಹೆಚ್ಚುವರಿಯಾಗಿ ಇ-ಕಾಮರ್ಸ್ ವ್ಯಾಪಾರ ವಹಿವಾಟುಗಳು ದೇಶದಲ್ಲಿ ಹೆಚ್ಚುತ್ತಿವೆ COVID -19 ಕಾರಣದಿಂದ ಈ ಪ್ರದೇಶದಲ್ಲಿ ಇ-ಕಾಮರ್ಸ್ ವ್ಯವಹಾರದಲ್ಲಿ ಹೆಚ್ಚಳವಾಗಿದೆ. ಇದು ಮಹಿಳಾ ಉದ್ಯಮಿಗಳು ಎದುರಿಸುತ್ತಿರುವ ಸವಾಲುಗಳನ್ನು ಜಯಿಸಲು ಮತ್ತು ಜಾಗತಿಕ ಮತ್ತು ಪ್ರಾದೇಶಿಕ ಮಾರುಕಟ್ಟೆಗಳನ್ನು ಅನ್ವೇಷಿಸಲು ಒಂದು ದೊಡ್ಡ ಅವಕಾಶವನ್ನು ಒದಗಿಸಿದೆ. ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೃಷ್ಟಿಕೋನಕ್ಕೆ ಡಿಜಿಟಲ್ ಇಂಡಿಯಾ ಆಶಯಕ್ಕೆ ಅನುಗುಣವಾಗಿದೆ’ ಎಂದರು.

ಈ ತರಬೇತಿಯು ಇ: ಕಾಮರ್ಸ್‌ ಮೂಲಕ ವ್ಯಾಪಾರವನ್ನು ಉತ್ತೇಜಿಸಲು, ಅಸ್ತಿತ್ವದಲ್ಲಿರುವ ಅವಕಾಶಗಳ ಕುರಿತು ಜಾಗೃತಿ ಮೂಡಿಸಲು ಮತ್ತು ಮೂರು ವರ್ಷಗಳಲ್ಲಿ ಭಾರತದಾದ್ಯಂತ 10,000 ಮಹಿಳಾ ಉದ್ಯಮಿಗಳನ್ನು ತಲುಪುವ ಮಹತ್ವಾಕಾಂಕ್ಷೆಯೊಂದಿಗೆ ಡಿಜಿಟಲ್ ಮತ್ತು ಆನ್‌ಲೈನ್ ಫ್ಲ್ಯಾಟ್‌ಫಾರ್ಮ್‌ಗಳನ್ನು ಬಳಸಲು ಮಹಿಳಾ ಉದ್ಯಮಿಗಳ ಜ್ಞಾನ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಈ ಕಾರ್ಯಕ್ರಮದಡಿಯಲ್ಲಿ 10,000 ಮಹಿಳೆಯರಿಗೆ ಡಿಜಿಟಲ್ ಮಾರ್ಕೆಟಿಂಗ್ ಕುರಿತು ತರಬೇತಿ ನೀಡಲಾಗುತ್ತದೆ. ವರ್ಚುವಲ್ ತರಬೇತಿಯು ಡಿಜಿಟಲ್ ಮಾರ್ಕೆಟಿಂಗ್ ಪರಿಕರಗಳ ಪರಿಚಯವನ್ನು ಒದಗಿಸುವ ಗುರಿಯನ್ನು ಹೊಂದಿದೆ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳನ್ನು ತಲುಪುವ ವ್ಯಾಪಾರವನ್ನು ಉತ್ತೇಜಿಸಲು ಇ-ಕಾಮರ್ಸ್ ಅನ್ನು ಬಳಸುವ ಪರಿಚಯವನ್ನು ಮಹಿಳಾ ಉದ್ಯಮಿಗಳಿಗೆ ಅವರ ಬಿಸಿನೆಸ್ ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. ಮಹಿಳಾ ಉದ್ಯಮಿಗಳಿಗೆ UBUNTU ಉಚಿತವಾಗಿ ಈ ತರಬೇತಿಯನ್ನು ಒದಗಿಸುತ್ತದೆ.

ತರಬೇತಿಯ ನಂತರ ಪ್ರಮಾಣಪತ್ರವನ್ನು ನೀಡಲಾಗುತ್ತದೆ ರಾಜ್ಯ ಮತ್ತು ದೇಶದ ವಿವಿಧ ಭಾಗಗಳಿಂದ 220 ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಗಿರೀಶ್ ಕೌಸ್ಗಿ, ಎಂಡಿ ಮತ್ತು ಸಿಇಒ ಕ್ಯಾನ್ ಫಿನ್ ಹೋಮ್, ರೆಬ್ಬಾಪ್ರಗಡ ಪ್ರಸಾದ್, ನಿರ್ದೇಶಕರು, ಸರ್ಕಾರ ಮತ್ತು ಸಾರ್ವಜನಿಕ ಸೇವೆಗಳ ಸಲಹಾ KPMG ಇಂಡಿಯಾ, ಶ್ರೀಮತಿ ಮಿಕಿಕೊ ತನಕಾ ಮುಖ್ಯಸ್ಥರು ESCAP ದಕ್ಷಿಣ ಮತ್ತು ದಕ್ಷಿಣ ಪಶ್ಚಿಮ ಏಷ್ಯಾ, ಕಚೇರಿ, ನವದೆಹಲಿ), FKCCI ಅಧ್ಯಕ್ಷರಾದ ಡಾ. ಸಿಎ ಐ.ಎಸ್.ಪ್ರಸಾದ್‍  ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಉಬಂಟು ಆಪ್‍, ಡೆಲಿಗೇಟ್ಸ್‍ ಡೈರೆಕ್ಟರಿಯನ್ನು ಲೋಕಾರ್ಪಣೆ ಮಾಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here