ವಾಡಿ ಇಂದಿರಾಗಾಂಧಿ ವಸತಿ ಶಾಲೆ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ

0
108

ವಾಡಿ: ಪಟ್ಟಣದ ಬಳಿರಾಮ ಚೌಕ್ ಹತ್ತಿರ ಇರುವ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯ ನೂರಾರು ವಿದ್ಯಾರ್ಥಿಗಳು ನೀಡಲಾಗುತ್ತಿರುವ ಕಳಪೆ ಊಟ ಹಾಗೂ ಅಸ್ವಚ್ಚತೆಯ ವಸತಿ ಸಂಕಷ್ಟದ ವಿರುದ್ಧ ಸ್ವಾತಂತ್ರೋತ್ಸವದ ದಿನವೇ ಬೀದಿಗಿಳಿದು ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಭಟನಾ ನಿರತ ವಿದ್ಯಾರ್ಥಿಗಳು, ನಾವು ಮಲಗುವ ಖಾಸಗಿ ಕಟ್ಟಡ ನಿರ್ಮಾಣ ಹಂತದಲ್ಲಿದ್ದು, ವಿಶ್ರಾಂತಿ ಕೋಣೆಗಳಿಗೆ ಬಾಗಿಲಿಲ್ಲ. ಶೌಚಾಲಯಕ್ಕೂ ಬಾಗಿಲು ಅಳವಡಿಸಿಲ್ಲ. ರಾತ್ರಿ ಬೆಳಕಿನ ವ್ಯವಸ್ಥೆಯಿಲ್ಲ. ಭಯದಲ್ಲೇ ಮಲಗುತ್ತಿದ್ದೇವೆ ಎಂದು ವಿದ್ಯಾರ್ಥಿನಿಯರು ಕಷ್ಟ ಹೇಳಿಕೊಂಡರೆ, ಊಟ ಸೇರದೆ ನಮ್ಮ ಆರೋಗ್ಯ ಹದಗೆಡುತ್ತಿದೆ. ಮಲಗುವ ಕೋಣೆಗಳು ಸರಿಯಾಗಿಲ್ಲ. ಸ್ನಾನ ಮತ್ತು ಶೌಚಾಲಯಗಳ ನೀರು ಹರಿದು ಪಾಠದ ಕೋಣೆಗಳತ್ತ ಹರಿದು ದುರ್ವಾಸನೆ ಹಬ್ಬುತ್ತದೆ. ಇಂತಹ ಕೆಟ್ಟ ಪರಸ್ಥಿತಿಯಲ್ಲಿ ಅಭ್ಯಾಸ ಮಾಡಬೇಕಾದ ದುಸ್ಥಿತಿ ಬಂದಿದೆ ಎಂದು ಗೋಳು ಹೇಳಿಕೊಂಡರು.

Contact Your\'s Advertisement; 9902492681

ಮಲಗುವ ಹಾಲ್‌ನಲ್ಲಿ ವಿಪರೀತ ಕಾಂಕ್ರೀಟ್ ಧೂಳಿದೆ. ಉಸಿಕಿನ ಹರಳುಗಳ ಮೇಲೆ ಮಲಗಬೇಕು. ವಿದ್ಯುತ್ ವೈರ್‌ಗಳು ಹರಿದಿವೆ. ವಿದ್ಯುತ್ ಬಲ್ಪ್ ಕೆಟ್ಟಿವೆ. ಫ್ಯಾನ್ ತಿರುಗಿದರೂ ಗಾಳಿ ತಟ್ಟುವುದಿಲ್ಲ. ಹಲವು ಕೋಣೆಗಳಿಗೆ ಫ್ಯಾನ್ ವ್ಯವಸ್ಥೆಯಿಲ್ಲ. ಉತ್ತಮ ಸೌಲಭ್ಯವಿದೆ ಎಂಬ ಕಾರಣಕ್ಕೆ ನಾವಿಲ್ಲಿಗೆ ಬಂದಿದ್ದೇವೆ. ಆದರೆ ಇಲ್ಲಿ ನಮಗೆ ಪ್ರತಿದಿನವೂ ನರಕದ ದರ್ಶನವಾಗುತ್ತಿದೆ. ನಮ್ಮ ಕಷ್ಟ ಯಾರಿಗೆ ಹೇಳಬೇಕು ಅರ್ಥವಾಗುತ್ತಿಲ್ಲ. ಕರದಾಳದಲ್ಲಿ ಸರಕಾರದ ಹೊಸ ಕಟ್ಟಡ ಸಿದ್ಧವಾಗಿದೆ ಅಲ್ಲಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಕಳೆದ ಐದಾರು ವರ್ಷಗಳಿಂದ ಹೇಳುತ್ತಿದ್ದಾರೆ. ಆದರೆ ನಮಗೆ ಸಂಕಷ್ಟದಿಂದ ಪಾರು ಮಾಡುವವರು ಯಾರೂ ಇಲ್ಲ. ಬೇಸತ್ತು ಬೀದಿಗೆ ಬಂದಿದ್ದೇವೆ ಎಂದು ವಿದ್ಯಾರ್ಥಿಗಳು ಸಾರ್ವಜನಿಕವಾಗಿ ತಮ್ಮ ಗೋಳು ಹೇಳಿಕೊಂಡರು.

ಹುಳು ಹುಪ್ಪಡಿ ಕಲ್ಲು ಕಸ ತುಂಬಿದ ಅಕ್ಕಿಯಿಂದ ತಯಾರಿಸಿದ ಕಳಪೆ ಊಟ ಕೊಡುತ್ತಾರೆ. ಹೊಟ್ಟೆ ತುಂಬುವುದಿಲ್ಲ ರುಚಿ ಕೇಳುವಂತಿಲ್ಲ. ಪಾಠದ ಕೋಣೆ ಮತ್ತು ವಸತಿ ಕೋಣೆಗಳಿಗೆ ಬಾಗಿಲುಗಳಿಲ್ಲ. ಶೌಚಾಲಯ ಶುಚಿಗೊಳಿಸುವವರಿಲ್ಲ. ಗೋಡೆಗಳಿಂದ ನೀರಿಳಿದು ಮಲಗಲು ಸಾಧ್ಯವಾಗುತ್ತಿಲ್ಲ. ವಿದ್ಯುತ್ ಸಮಸ್ಯೆ ಜೀವಂತವಿದೆ. ಫ್ಯಾನ್ ವ್ಯವಸ್ಥೆ ಇಲ್ಲ. ಕೆಟ್ಟ ಫ್ಯಾನ್‌ಗಳನ್ನು ನಾವೇ ರಿಪೇರಿ ಮಾಡಿಸಬೇಕು. ಸೊಳ್ಳೆ ಕಾಟದಿಂದ ನಿದ್ರೆಯೂ ಇಲ್ಲ ಅಭ್ಯಾಸವೂ ಆಗುತ್ತಿಲ್ಲ. ಸಮಸ್ಯೆಗಳು ಗಮನಕ್ಕೆ ತಂದರೆ ವಾರ್ಡನ್ ಹೆದರಿಸುತ್ತಾರೆ. ಅಂಕಗಳು ಕಡಿಮೆ ಕೊಟ್ಟು ನಿಮಗೆ ಪಾಠ ಕಲಿಸುತ್ತೇನೆ ಎಂದು ಹೆದರಿಸುತ್ತಾರೆ. ಪ್ರತಿದಿನ ಟೈಂ ಟೇಬಲ್ ಪ್ರಕಾರ ನೀಡಬೇಕಾದ ಊಟದ ಥರಥರದ ದಿನಿಸುಗಳು ಸಿಗುವುದಿಲ್ಲ. ಸಿಹಿಯೂಟ, ಮಾಂಸ, ಮೊಟ್ಟೆ ಕೊಡಲು ಹಿಂದೇಟು ಹಾಕುತ್ತಾರೆ ಎಂದು ದೂರಿದರು.

ಪಿಎಸ್‌ಐ ಸಂಧಾನ: ಮಕ್ಕಳ ಈ ದಿಢೀರ್ ಪ್ರತಿಭಟನೆಯ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪಿಎಸ್‌ಐ ಮಹಾಂತೇಶ ಜಿ.ಪಾಟೀಲ, ಸಮಸ್ಯೆಗಳನ್ನು ಆಲಿಸಿದರು. ಹೋರಾಟಕ್ಕೆ ಮುಂದಾದ ವಿದ್ಯಾರ್ಥಿಗಳ ಮನವೊಲಿಸುವ ಪ್ರಯತ್ನ ಮಾಡಿದರು. ಈ ಕುರಿತು ಮೇಲಾಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು. ಸಮಸ್ಯೆ ಮುಂದು ವರೆದರೆ ನಮ್ಮ ಹೋರಾಟವೂ ಮುಂದುವರೆಯುತ್ತದೆ ಎಂದು ಮಕ್ಕಳು ಇದೇ ವೇಳೆ ಪೊಲೀಸ್ ಅಧಿಕಾರಿಗೆ ಪ್ರತಿಕ್ರೀಯಿಸಿದ ಪ್ರಸಂಗ ನಡೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here