ಕಲಬುರಗಿ: ಕೇಂದ್ರ ಸರಕಾರವು ನಿನ್ನೆ ಹೊರಡಿಸಿದ ಜಾಹೀರಾತಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿ ಅನೇಕ ಧೀಮಂತ ನಾಯಕರನ್ನು ಕಡೆಗಣಿಸಲಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ಅಸಮಧಾನ ವ್ಯಕ್ತಪಡಿಸಿದ್ದಾರೆ.
ದೇಶದ ಪ್ರದಾನ ಮಂತ್ರಿ ಮತ್ತು ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿ ಫೋಟೊಗಳಿವೆ. ದೇಶದ ಪಟ್ಟಿಯಲ್ಲಿ ಮೊದಲ ಪ್ರದಾನಿ ಜವಾಹರಲಾಲ್ ನೆಹರು ಅವರು ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದರು ಎಂಬುದನ್ನು ಉದ್ದೇಶಪೂರ್ವಕವಾಗಿಯೇ ಕೈಬಿಟ್ಟಿರುವುದು ಮಾತ್ರವಲ್ಲ ಸುಭಾಷಚಂದ್ರ ಬೋಸ್ ಅವರ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಹೆಸರಿನ ಮಹಿಳಾ ರೆಜಿಮೆಂಟಿಗೆ ಕ್ಯಾಪ್ಟನ್ ಆಗಿದ್ದ ಲಕ್ಷ್ಮಿ ಸೆಹಗಲ್ ಅವರನ್ನೂ ಬಿಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂತೆಯೇ ಕಮ್ಯುನಿಸ್ಟ್ ಚಳುವಳಿಯಲ್ಲಿನ ಸ್ವಾತಂತ್ರ್ಯ ಹೋರಾಟಗಾರರನ್ನೂ ಕೈಬಿಡಲಾಗಿದೆ. ಇದೇ ಸಂದರ್ಭದಲ್ಲಿ ಒಂಬತ್ತು ಬಾರಿ ಬ್ರಿಟಿಷರಿಗೆ ಕ್ಷಮಾಪಣೆ ಕೇಳಿ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಯಾವತ್ತೂ ಭಾಗವಹಿಸುವುದಿಲ್ಲ ಬದುಕಿರುವವರೆಗೂ ತಮ್ಮ ಸೇವೆ ಮಾಡಿಕೊಂಡು ಇರುತ್ತೇನೆ ಎಂದು ಪತ್ರ ಬರೆದಿದ್ದ ವಿನಾಯಕ ದಾಮೋದರ್ ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯ ಮೊದಲ ಸಾಲಿನಲ್ಲಿ ಸೇರಿಸಲಾಗಿದೆ ಎಂದು ದುರಿದ್ದಾರೆ.
ಹಾಗೆಯೇ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಬಗೆಗಿನ ನಿರ್ಲಕ್ಷ್ಯವೂ ವ್ಯಕ್ತವಾಗಿದೆ. ಕರ್ನಾಟಕ ರಾಜ್ಯದ ಪಟ್ಟಿಯಲ್ಲಿ ತನ್ನನ್ನು ‘ಸಿಟಿಜನ್ ಟಿಪ್ಪು’ ಎಂದು ಕರೆದುಕೊಂಡ ಮತ್ತು ದೇಶಕ್ಕಾಗಿ ತನ್ನ ಮಕ್ಕಳನ್ನೇ ಒತ್ತೆಯಿಟ್ಟಿದ್ದ ಟಿಪ್ಪು ಸುಲ್ತಾನರ ಕೈ ಬಿಡಲಾಗಿದೆ. ಇನ್ನೂ ಅಸಂಖ್ಯರನ್ನು ಕಡೆಗಣಿಸಲಾಗಿದೆ. ಇದು ಬಿಜೆಪಿಯ ದ್ವೇಷಪೂರಿತ ನಿಲುವಾಗಿದೆ. ದೇಶದ ಚರಿತ್ರೆಯನ್ನು ತಿರುಚುವ ಮಹಾಪರಾಧ ಬಿಜೆಪಿ ಮಾಡಿದೆ. ಸತ್ಯವನ್ನು ಮುಚ್ಚಿಟ್ಟು ಸುಳ್ಳನ್ನು ಮುನ್ನೆಲೆಗೆ ತರುವ ಷಡ್ಯಂತ್ರ ಇದಾಗಿದೆ ಎಂದು ಆರೋಪಿಸಿದ್ದಾರೆ.
ಬ್ರಿಟಿಷರೊಂದಿಗೆ ಕೈಜೋಡಿಸಿದ ಮತ್ತು ಭಾರತದ ಸಂವಿಧಾನ ಒಪ್ಪದ ಆರ್ ಎಸ್ ಎಸ್ ಸಿದ್ಧಾಂತಕ್ಕೆ ತಲೆ ಬಾಗಿದೆನೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೊಂಡಿದ್ದಾರೆ. ಇದು ಪ್ರಜಾಸತ್ತೆಗೆ ಮಾಡುವ ದ್ರೋಹವಾಗಿದೆ. ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುವ ನೈತಿಕತೆಯನ್ನು ಬೊಮ್ಮಾಯಿವರು ಕಳೆದುಕೊಂಡಿದ್ದಾರೆ. ಇವರು ಬದ್ಧರಾಗಿರಬೇಕಾದದ್ದು ಭಾರತದ ಸಂವಿಧಾನಕ್ಕೆ. ಈ ಎಚ್ಚರ ಇಲ್ಲದ ಬೊಮ್ಮಾಯಿಯವರ ನಡೆಯು ತೀವ್ರ ಖಂಡನಾರ್ಹವಾಗಿದೆ.
ಬಿಜೆಪಿಯು ಇಂತಹ ನಡೆಗಳ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದ ಘನತೆಗೆ ಕುಂದುಂಟು ಮಾಡುತ್ತಿದೆ. ಭಾರತದ ಜನತೆಯು ಬಹಳ ಬೇಗ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲದಿದ್ದರೆ ಭವಿಷ್ಯದ ಮಕ್ಕಳಿಗೆ ಸುಳ್ಳು ಚರಿತ್ರೆಯನ್ನೇ ಕೊಡುವ ಅಪಾಯವಿದೆ ಇದು ದೇಶದ ಭವಿಷ್ಯಕ್ಕೆ ಮಾರಕವಾದದ್ದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.