ಕಲಬುರಗಿ: ಜಿಲ್ಲೆಯ ಹಿರಿಯ ಶಾಸಕ ಹಾಗೂ ಹಿಂದುಳಿದ ವರ್ಗಗಳ ನೇತಾರ ಸುಭಾಷ್ ಆರ್. ಗುತ್ತೇದಾರ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಬೇಕು ಎಂದು ಭಾರತೀಯ ಜನತಾ ಪಕ್ಷದ ಅಲ್ಪಸಂಖ್ಯಾತ ಮೋರ್ಚಾ ಗ್ರಾಮಾಂತರ ಜಿಲ್ಲಾಧ್ಯಕ್ಷ ಸೈಯದ್ ಮಸ್ತಾನ್ ಚಿಂಚೋಳಿ ಅವರು ಇಲ್ಲಿ ಒತ್ತಾಯಿಸಿದರು.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಳಂದ್ ಶಾಸಕರಾಗಿ ಸುಭಾಷ್ ಆರ್. ಗುತ್ತೇದಾರ್ ಅವರು ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದಾರೆ. ಜಿಲ್ಲೆಯಲ್ಲಿಯೇ ಅವರಿಗಿದ್ದ ಹಿರಿತನ ಉಳಿದ ಶಾಸಕರಿಗಿಲ್ಲ. ಅಲ್ಲದೇ ಇಡೀ ರಾಜ್ಯದ ಇತಿಹಾಸದಲ್ಲಿ ಆಳಂದ್ ಕ್ಷೇತ್ರಕ್ಕೆ ಇಲ್ಲಿಯವರೆಗೂ ಸಚಿವ ಸ್ಥಾನ ಸಿಕ್ಕಿಲ್ಲ. ಆದ್ದರಿಂದ ಯಡಿಯೂರಪ್ಪ ಅವರು ಗುತ್ತೇದಾರ್ ಅವರಿಗೆ ಸಚಿವ ಸ್ಥಾನ ಕೊಡುವ ಮೂಲಕ ಹಿರಿತನ ಹಾಗೂ ಆಳಂದ್ ಕ್ಷೇತ್ರಕ್ಕೆ ಸಚಿವ ಸ್ಥಾನದ ಕೊರತೆಯನ್ನು ನಿವಾರಿಸಬೇಕು ಎಂದು ಆಗ್ರಹಿಸಿದರು.
ಇಡೀ ರಾಜಕೀಯ ಇತಿಹಾಸದಲ್ಲಿ ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಡಾ. ಮಲ್ಲಿಕಾರ್ಜುನ್ ಖರ್ಗೆಯವರಿಗೆ ಯಾರಿಂದಲೂ ಸೋಲಿಸಲು ಸಾಧ್ಯವಾಗಿರಲಿಲ್ಲ. ಈಗ ಬಿಜೆಪಿ ಅವರನ್ನು ಸೋಲಿಸುವ ಮೂಲಕ ದಿಗ್ವಿಜಯ ಸಾಧಿಸಿದೆ. ಈ ಹಿಂದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸುಭಾಷ್ ಆರ್. ಗುತ್ತೇದಾರ್ ಅವರಿಗೆ ಅಭಯ ನೀಡಿದ್ದರು. ಈಗ ಗುತ್ತೇದಾರ್ ಅವರಿಗೆ ಸಚಿವ ಸ್ಥಾನ ಕೊಡುವ ಮೂಲಕ ಹೈದ್ರಾಬಾದ್ ಕರ್ನಾಟಕ ಸೇರಿದಂತೆ ಇಡೀ ನಾಡಿನ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.
ಈ ಭಾಗವೂ ಸಹ ಹಿಂದುಳಿದಿದೆ. ಭೌಗೋಳಿಕವಾಗಿ, ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಗುತ್ತೇದಾರ್ ಅವರಿಗೆ ಸಂಪುಟದಲ್ಲಿ ಸ್ಥಾನ ಕೊಡುವುದು ಅಗತ್ಯವೆಂದು ಅವರು ಪ್ರತಿಪಾದಿಸಿದರು.