-
ಸುಲಫಲ ಮಠದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಭೆಯಲ್ಲಿ ಎಚ್.ಬಿ.ಪಾಟೀಲ ಮನವಿ
ಕಲಬುರಗಿ: ನಗರದ ಶಹಾಬಜಾರ ಸುಲಫಲಮಠದಲ್ಲಿ ಕೋವಿಡ್ ಕಾರಣದಿಂದ ಕಳೆದ ಮೂರು ವರ್ಷಗಳಲ್ಲಿ ದೊಡ್ಡ ಪ್ರಮಾಣದ ಕಾರ್ಯಕ್ರಮಗಳು ಆಗಿರುವುದಿಲ್ಲ. ಇದೇ ಸೆ.೪-೧೩ರವರೆಗೆ ಸಾ.೭ಗಂಟೆಗೆ ಶ್ರೀಮಠದಲ್ಲಿ ೭೫ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ, ಲಿಂ.ಚನ್ನವೀರ ಶಿವಯೋಗಿಗಗಳ ಪುಣ್ಯಸ್ಮರಣೋತ್ಸವ, ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿಗಳ ಜನ್ಮದಿನಾಚರಣೆ, ಶರಣ ದರ್ಶನ ಪ್ರವಚನ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಸತ್ಕಾರ ಇವೆಲ್ಲ ಕಾರ್ಯಕ್ರಮಗಳು ಜರುಗುತ್ತಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬಸವೇಶ್ವರ ಸಮಾಜ ಸೇವಾ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ ಮನವಿ ಮಾಡಿದ್ದಾರೆ.
ಶ್ರೀಮಠದಲ್ಲಿ ಬುಧವಾರ ಸಂಜೆ ಪೂಜ್ಯ ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಜರುಗಿದ ಪೂರ್ವಸಿದ್ಧತೆ ಸಭೆಯಲ್ಲಿ ಅವರು ಮಾತನಾಡಿದರು.
ಬಳಗದ ಉಪಾಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ ಮಾತನಾಡಿ, ಕರ್ನಾಟಕದ ಪ್ರಖರ ಪ್ರವಚನ ವಾಗ್ಮಿ ಪೂಜ್ಯ ನಿಜಗುಣಾನಂದ ಶ್ರೀಗಳ ಪ್ರವಚನ ಕಲಬುರಗಿ ನಗರದಲ್ಲಿ ಬಹಳ ವರ್ಷಗಳಿಂದ ಜರುಗಿಲ್ಲ. ಅವರು ತಮ್ಮ ಸಿಡಿಲಬ್ಬರದ ಮಾತುಗಳಿಂದ ಎಲ್ಲರ ಮನಮುಟ್ಟುವಂತೆ ಬಸವಾದಿ ಶರಣರ ತತ್ವದ ದಿವ್ಯ ದರ್ಶನವನ್ನು ಮಾಡಿಸಲಿದ್ದಾರೆ. ಶರಣರ ಸತ್ಸಂಗದಲ್ಲಿ ಭಾಗವಹಿಸುವುದರಿಂದ ಮಾನಸಿಕ ನೆಮ್ಮದಿ, ಚೈತನ್ಯ ದೊರೆಯುತ್ತದೆ. ಭಕ್ತರು ಇದರ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ಬಳಗದ ಕಾರ್ಯದರ್ಶಿ ರಾಜಶೇಖರ ಬಿ.ಮರಡಿ, ಕಾನೂನು ಸಲಹೆಗಾರ ಡಾ.ಸುನೀಲಕುಮಾರ ಎಚ್.ವಂಟಿ, ಸಂಚಾಲಕ ವೀರೇಶ ಬೋಳಶೆಟ್ಟಿ ನರೋಣಾ, ಸದಸ್ಯರಾದ ಬಸವರಾಜ ಹೆಳವರ ಯಾಳಗಿ, ಸಿದ್ದರಾಮ ತಳವಾರ, ಬಸವರಾಜ ಮುನ್ನಳ್ಳಿ, ಸಂಗಮೇಶ ಇಮ್ಡಾಪೂರ್ ಪಾಲ್ಗೊಂಡಿದ್ದರು.