ಕಲಬುರಗಿ: ಸರ್ಕಾರಿ ನೌಕರಿ ಪಡೆಯುವುದು, ದೀರ್ಘ ಕಾಲ ನೌಕರಿ ಮಾಡುವುದೇ ದೊಡ್ಡ ಸಾಧನೆಯಲ್ಲ. ಬದಲಿಗೆ ದೊರೆತ ಹುದ್ದೆಗೆ ಪ್ರಾಮಾಣಿಕತೆ, ನಿಷ್ಠೆ ಹಾಗೂ ಕರ್ತವ್ಯಬದ್ಧತೆಯಿಂದ ಸೇವೆ ಸಲ್ಲಿಸಿದರೆ ಅಂತಹ ಸೇವೆ ನಿಜಕ್ಕೂ ಸಾರ್ಥಕತೆ ಪಡೆಯಲು ಸಾಧ್ಯವಾಗುತ್ತದೆ ಎಂದು ದಕ್ಷಿಣ ವಲಯ ಬಿಇಓ ಶಂಕ್ರೆಮ್ಮ ಢವಳಗಿ ಅಭಿಮತ ವ್ಯಕ್ತಪಡಿಸಿದರು.
ತಾಲೂಕಿನ ಭೀಮಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿರುವ ಸಹ ಶಿಕ್ಷಕ ಬಸವರಾಜ ಎಸ್.ಚಿಕ್ಕಬೋನಾರ್ ಅವರಿಗೆ ಶಾಲೆಯ ಆವರಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜೇವರ್ಗಿ ಸರ್ಕಾರಿ ಪಿಯು ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ.ಪಾಟೀಲ ಮಾತನಾಡಿ, ಬಸವರಾಜ ಎಸ್.ಚಿಕ್ಕಬೋನಾರ್ ಖಾಸಗಿ, ಸರ್ಕಾರಿ ಶಾಲೆ ಸೇರಿದಂತೆ ಒಟ್ಟು ೩೧ ವರ್ಷಗಳ ಕಾಲ ತಮ್ಮ ಸುಧೀರ್ಘವಾದ ಸೇವೆಯನ್ನು ಸಲ್ಲಿಸಿದ್ದಾರೆ. ಮಕ್ಕಳ ಬಗ್ಗೆ ಸದಾ ಕಾಳಜಿ ಹೊಂದಿದ ಸಮಾಜಮುಖಿ ಶಿಕ್ಷಕರಾಗಿದ್ದರು. ನಾನು ೪.೫ ವರ್ಷಗಳ ಕಾಲ ಇದೇ ಗ್ರಾಮದ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿದ್ದು, ಸಮೀಪದಿಂದ ಅವರನ್ನು ಗಮನಿಸಿದ್ದೇನೆ. ಸರಳ ಜೀವನ, ಎಲ್ಲರೊಂದಿಗೆ ಬೆರೆಯುವ ಸ್ವಭಾವ ಇವರದಾಗಿತ್ತು. ಯಾವುದೇ ಕಪ್ಪು ಚುಕ್ಕೆಯಿಲ್ಲದೇ ಸೇವೆ ಸಲ್ಲಿಸಿ, ನಿವೃತ್ತಿಯಾಗಿದ್ದಾರೆ. ಮುಂದೆ ಅವರ ಜೀವನ ಸಮಾಜ ಸೇವೆಯತ್ತ ಸಾಗಲಿ ಎಂದು ಆಶಿಸಿದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಬಸವರಾಜ ಎಸ್.ಚಿಕ್ಕಬೋನಾರ್, ನಾನು ಸಲ್ಲಿಸಿದ ಸೇವೆ ಆತ್ಮತೃಪ್ತಿ ತಂದಿದೆ. ವಿದ್ಯಾರ್ಥಿಗಳಲ್ಲಿ ದೇವರನ್ನು ಕಾಣುವ ಪ್ರವೃತ್ತಿ ನನ್ನದಾಗಿದೆ. ಪ್ರಾಥಮಿಕ ಶಿಕ್ಷಣ ಬುನಾದಿಯಾಗಿದ್ದು, ಮಕ್ಕಳ ಪರಿಣಾಮಕಾರಿಯಾದ ಕಲಿಕೆಯಾದರೆ ಮುಂದೆ ಅವರ ಭವಿಷ್ಯ ಉಜ್ವಲವಾಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಂತೆ ಭಾವಿಸಿ ಅವರ ಬದುಕು ಕಟ್ಟಿಕೊಳ್ಳಲು ಪೂರಕವಾದ ವಾತಾವರಣ ಸೃಷ್ಟಿಸಿದರೆ, ಖಂಡಿತವಾಗಿಯೂ ಅಂತಹ ಶಿಕ್ಷಕರು ವಿದ್ಯಾರ್ಥಿಗಳಿಗೆ ಗುರುವಾಗುತ್ತಾರೆ. ಸಹದ್ಯೋಗಿ, ಇಲಾಖೆ, ಎಸ್.ಡಿ.ಎಂ.ಸಿ., ಗ್ರಾಮಸ್ಥರ ಸಹಕಾರ ಉತ್ತಮವಾಗಿ ದೊರೆತಿದ್ದು ಮರೆಯುವಂತಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಡಾ.ಪ್ರಕಾಶ ರಾಠೋಡ್, ಶೈಕ್ಷಣಿಕ ಸಮನ್ವಯಾಧಿಕಾರಿಗಳಾದ ಬಸವರಾಜ ಗುಂಜಾಳ್, ರಾಜಕುಮಾರ ಪಾಟೀಲ, ಸ್ಥಳೀಯ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಾಂಬೋಜಿರಾವ್, ಆದರ್ಶ ಶಾಲೆಯ ಮುಖ್ಯ ಶಿಕ್ಷಕ ಕಲಾಲಿಂಗ, ಬಿ.ಆರ್.ಪಿ ದಯಾನಂದ ಹಿರೇಮಠ, ಸಿ.ಆರ್.ಪಿ ವಿಜಯಕುಮಾರ ಚಕ್ರಸಾಲಿ, ದಕ್ಷಿಣ ವಲಯ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮು ಚವ್ಹಾಣ, ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಅಮರೇಶ ಪಾಟೀಲ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಲ್ಲಿಕಾರ್ಜುನ ಹರಸೂರ್, ಗ್ರಾ.ಪಂ.ಅಧ್ಯಕ್ಷ ರಾಮಚಂದ್ರಪ್ಪ ಜಾಫರಬಾದ್, ಸದಸ್ಯ ಶರಣಪ್ಪ ಸಿಂಗೆ, ಪ್ರಮುಖರಾದ ದೇವೇಂದ್ರಪ್ಪ ಗಣಮುಖಿ, ಮಲ್ಲಿಕಾರ್ಜುನ ಚೋರಗಸ್ತಿ, ರೇಣುಕಾಚಾರ್ಯ ಸ್ಥಾವರಮಠ, ವಿಶ್ವನಾಥ ಜಮಾದಾರ, ಸುರೇಶ ಜಾಧವ, ಶಿವಶರಣಪ್ಪ ಚೌಡಗೊಂಡ್, ಗಂಗಾಧರ ಹರಸೂರ್, ಶಿವಯೋಗಪ್ಪ ಬಿರಾದಾರ, ವಿಶ್ವನಾಥ ಸಿಂಗೆ, ಬಸವರಾಜ ಪಾಟೀಲ, ರಾಮದಾಸ ಪಾಟೀಲ, ಮಹಾದೇವ ಚಿತಲಿ, ಅಂಬಿಕಾ ಕುಲಕರ್ಣಿ, ವಂದನಾ ಕುಲಕರ್ಣಿ, ಜಗದೀಶ್ ಎಚ್.ಬಿ., ನನಿತಾಕುಮಾರಿ, ಭಾಗ್ಯಶ್ರೀ ಮಾಕಾ, ಭೀಮಮ್ಮ, ಶೀಲಾದೇವಿ ಪಾಟೀಲ, ಇಂದಿರಾಬಾಯಿ ಚಿಂಚೋಳಿಕರ್, ಸವಿತಾ ಬಿ.ಚಿಕ್ಕಬೋನಾರ್, ವೆಂಕಟೇಶ್, ಶ್ವೇತಾ, ಚೈತನ್ಯ ಸೇರದಿಂತೆ ಮುಂತಾದವರು ಭಾಗವಹಿಸಿದ್ದರು.