ಸುರಪುರ:ನಗರದ ಸುರಪುರ ಹುನಗುಂದ ಹೆದ್ದಾರಿಯ ಸಿದ್ದಾಪುರ ಹನುಮಾನ ದೇವಸ್ಥಾನದ ಬಳಿಯಲ್ಲಿನ ಹಾಳಾಗಿರುವ ರಸ್ತೆ ಸ್ಥಳಕ್ಕೆ ಕೇಂದ್ರ ನೆರೆ ಅಧ್ಯಯನ ತಂಡ ಭೇಟಿ ನೀಡಿ ವೀಕ್ಷಿಸಿದರು.ನಿರಂತರವಾಗಿ ಸುರಿದ ಮಳೆಯಿಂದ ಸಂಪೂರ್ಣ ರಸ್ತೆ ಕಿತ್ತು ಹೋಗಿದ್ದು, ವಾಹನಗಳ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಸ್ಥಳದಲ್ಲಿದ್ದ ಅನೇಕರು ತಮ್ಮ ಗೋಳು ತೋಡಿಕೊಂಡರು.ಕೇವಲ ೫ ನಿಮಿಷಗಳಷ್ಟು ಕಾಲ ಹಾಳಾದ ರಸ್ತೆಯನ್ನು ವೀಕ್ಷಿಸಿ ವರದಿ ಮಾಡಿಕೊಂಡ ತಂಡ ನೇರವಾಗಿ ಕೆಂಭಾವಿ ಭಾಗದ ಗ್ರಾಮಗಳಲ್ಲಿನ ಬೆಳೆ ವೀಕ್ಷಣೆಗೆ ತೆರಳಿತು.
ಕಾಟಾಚಾರಕ್ಕೆ ಎನ್ನುವಂತೆ ತಾವು ಹೋಗುತ್ತಿರುವ ರಸ್ತೆ ಹಾಳಾಗಿರುವುದನ್ನು ನೋಡುವುದಕ್ಕೆ ತಂಡ ಬಂದಂತಿದೆ ಎಂದು ಈ ಸಂದರ್ಭದಲ್ಲಿದ್ದ ಅನೇಕ ಜನರು ಮಾತನಾಡಿಕೊಳ್ಳುತ್ತಿದ್ದುದು ಕಂಡುಬಂತು.ನಮ್ಮ ತಾಲೂಕಿನ ಅನೇಕ ಗ್ರಾಮಗಳಲ್ಲಿನ ಸಾವಿರಾರು ಎಕರೆ ಬೆಳೆ ನಷ್ಟವಾಗಿದೆ.ಇಂತಹ ಯಾವ ಜಮೀನುಗಳಿಗೆ ಭೇಟಿ ನೀಡದೆ ಬರೀ ಇಷ್ಟು ರಸ್ತೆ ನೋಡಿಕೊಂಡು ಹೋಗಿರುವುದು ಇದ್ಯಾವ ರೀತಿಯ ವೀಕ್ಷಣೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಸ್ನೇಹಲ್ ಆರ್.ಸಹಾಯಕ ಆಯುಕ್ತ ಶಾ ಆಲಂ ಹುಸೇನ್,ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅನೇಕ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿದ್ದರು.