ಜೇವರ್ಗಿ: ವೀರಶೈವರು ಬೇಡ ಜಂಗಮ ಪ್ರಮಾಣ ಪತ್ರಕ್ಕಾಗಿ ಬೆಂಗಳೂರಿನ ವಿಧಾನಸೌಧದಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲಿಸಿ ಭಾಷಣ ಮಾಡಿದ ಮತ್ತು ಅಧಿವೇಶನದಲ್ಲಿ ಇದರ ಬಗ್ಗೆ ಪ್ರಸ್ತಾಪಿಸಲಾಗುವುದು ಎಂದು ಹೇಳಿಕೆ ನೀಡಿದ ಜೇವರ್ಗಿ ಶಾಸಕ ಡಾ.ಅಜಯಸಿಂಗ್ ಅವರ ನಡೆಯನ್ನು ಖಂಡಿಸಿ ಕಲಬುರಗಿ ನಿವಾಸಕ್ಕೆ ಇದೇ 14ರಂದು ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಕಲ್ಯಾಣ ಕರ್ನಾಟಕ ಜನಜಾಗ್ರತಿ ವೇದಿಕೆ ಅಧ್ಯಕ್ಷ ಗುರಣ್ಣ ಐನಾಪುರ ಹೇಳಿದರು.
ಸುಮಾರು ಅರ್ಧ ದಶಕಗಳ ಕಾಲ ಪರಿಶಿಷ್ಟರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಅಲ್ಲದೆ ಧರ್ಮಸಿಂಗ್ ಕುಟುಂಬವನ್ನು ರಾಜಕೀಯವಾಗಿ ಬೆಳೆಸಿ ಮುಖ್ಯಮಂತ್ರಿ ಮಾಡುವಲ್ಲಿ ದಲಿತರ ಪಾತ್ರ ಬಹಳಷ್ಟಿದೆ. ಆದರೆ ಶಾಸಕ ಡಾ.ಅಜಯಸಿಂಗ್ ಅವರು ವೀರಶೈವವರಿಗೆ ಬೇಡ ಜಂಗಮ ಪ್ರಮಾಣ ಪತ್ರ ನೀಡಲು ಬೆಂಬಲಿಸುತ್ತೇನೆ ಎಂದಿರುವುದು ಮೂಲ ಪರಿಶಿಷ್ಟರಿಗೆ ಮಾಡಿದ ಅವಮಾನ. ಈ ಬಗ್ಗೆ ತಾಲ್ಲೂಕಿನ ಬಿಳವಾರˌ ಬಳಬಟ್ಟಿˌ ನಾಗರಹಳ್ಳಿ ಹಾಗೂ ಯಡ್ರಾಮಿಯಲ್ಲಿಯೂ ಪ್ರತಿಭಟಿಸಲಾಗುವುದು.
ಕೂಡಲೇ ಶಾಸಕ ಡಾ. ಅಜಯಸಿಂಗ್ ಇಡೀ ರಾಜ್ಯದ ಶೋಷಿತರ ಕ್ಷೇಮೆ ಕೇಳಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ತಾಲ್ಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ಘೇರಾವ್ ಹಾಕುವುದರ ಮೂಲಕ ಚುನಾವಣೆಯಲ್ಲಿ ಪಾಠ ಕಲಿಸಲಾಗುವುದು ಎಂದು ತಿಳಿಸಿದ್ದಾರೆ.