ಸುರಪುರ: ’ಶಿಕ್ಷಕ ವೃತ್ತಿಯು ಸಮಾಜದ ಶ್ರೇಷ್ಟತೆಯ ಪರಮ ಪವಿತ್ರ ಸಂಕೇತವಾಗಿದೆ. ಶ್ರೀನಿವಾಸ ಜಾಲವಾದಿಯವರು ಅಂತಹ ಪವಿತ್ರತೆಗೆ ಸಮಾಜದಲ್ಲಿ ಶ್ರೇಷ್ಟ ಉದಾಹರಣೆಯಾಗಿದ್ದಾರೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಮರೇಶ ಕುಂಬಾರ ಹೇಳಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ, ಸಾಹಿತಿ ಶ್ರೀನಿವಾಸ ಜಾಲವಾದಿ ಅವರ ವಯೋ ನಿವೃತ್ತಿ ನಿಮಿತ್ಯ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಡಾ.ಎ.ಪಿ.ಜೆ.ಅಬ್ದುಲ್ ಕಲಾಮ, ಡಾ.ರಾಧಾಕೃಷ್ಣನ್ ಅವರಂತಹ ಶ್ರೇಷ್ಟ ಶಿಕ್ಷಕರ ಪರಂಪರೆಯೇ ನಮ್ಮಲ್ಲಿದೆ. ಬೇಂದ್ರೆ, ಕುವೆಂಪು, ಎಸ್.ಎಲ್.ಭೈರಪ್ಪ ಅವರಂಥ ಶ್ರೇಷ್ಟ ದಿಗ್ಗಜರನ್ನು ಕಂಡಂತಹ ನಾಡಿದು. ಈ ಪರಂಪರೆಯಲ್ಲಿ ನಡೆದು ಬಂದ ಜಾಲವಾದಿ ಅವರು ಸಾಹಿತ್ಯ ಹಾಗೂ ಶೈಕ್ಷಣಿಕ ರಂಗದ ಶ್ರೇಷ್ಟತೆಯ ಸಂಕೇತರಾಗಿದ್ದಾರೆ. ಅವರು ಕವಿ, ಸಾಹಿತಿ, ನಟರು, ಕತೆಗಾರು, ಕಾದಂಬರಿಕಾರರು ಆಗಿರುವುದು ನಮಗೆಲ್ಲ ತುಂಬ ಅಭಿಮಾನದ ವಿಷಯವಾಗಿದೆ ಎಂದು ಹೇಳಿದರು.
ಸಂಶೋಧಕರು ಹಾಗೂ ಉಪಖಜಾನೆ ಅಧಿಕಾರಿ ಎಮ್.ಎಸ್.ಶಿರವಾಳ ಮಾತನಾಡಿ, ಜಾಲವಾದಿಯವರು ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿದ ೩೬ ವರ್ಷಗಳ ಶೈಕ್ಷಣಿಕ ಸೇವೆ ಅನೇಕ ಹೆಗ್ಗುರುತುಗಳನ್ನು ಮೂಡಿಸಿದೆ. ಇವರು ಶಿಕ್ಷಕರಾಗಿ, ಶಿಕ್ಷಣ ಸಂಯೋಜಕರಾಗಿ, ಸಮೂಹ ಸಹಾಯಕ ಶಿಕ್ಷಣಾಧಿಕಾರಿಯಾಗಿ, ಉಪಪ್ರಾಂಶುಪಾಲರಾಗಿ ಹೀಗೆ ವಿವಿಧ ಹುದ್ದೆಗಳಲ್ಲಿ ಸಮರ್ಥವಾಗಿ ಆಡಳಿತ ನಡೆಸಿ ಇತರರಿಗೆ ಮಾದರಿಯಾಗಿದ್ದಾರೆ ಎಂದರು. ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮೌನೇಶ ಕಂಬಾರ ಮಾತನಾಡಿ, ಜಾಲವಾದಿಯವರ ಕುರಿತು ಸ್ವರಚಿತ ಕವನವನ್ನು ವಾಚಿಸಿದರು. ಗಾಯಕ ಶ್ರೀಹರಿ ಆದೋನಿಯವರು ಲೇಖಕ ಜಾಲವಾದಿಯವರ ಕುರಿತು ಕವನವನ್ನು ವಾಚಿಸಿದರಲ್ಲದೇ ಸುಶ್ರಾವ್ಯವಾಗಿ ನಾಡಗೀತೆಯನ್ನು ಹಾಡಿದರು.
ಇದೇ ಸಂದರ್ಭದಲ್ಲಿ ನಿವೃತ್ತಿಗೊಂಡ ಶ್ರೀನಿವಾಸ ಜಾಲವಾದಿ ಮಾತನಾಡುತ್ತಾ ಪಿತೃ ಋಣ, ಮಾತೃ ಋಣ ಹಾಗೂ ಸಮಾಜದ ಋಣವನ್ನು ತೀರಿಸುವುದು ಅಸಾಧ್ಯವಾದುದು, ಶಿಕ್ಷಣ ಮಾನವನಿಗೆ ಉತ್ತಮ ಮೌಲ್ಯಗಳನ್ನು ಕಲಿಸುತ್ತದೆ, ಸಾಹಿತ್ಯ ಸೃಜನಶೀಲತೆಯ ಹೊಸತೊಂದು ಲೋಕವನ್ನು ಅನಾವರಣಗೊಳಿಸುತ್ತದೆ, ಈ ಸಮಾಜವು ನನಗೆ ನೀಡಿದ ಗೌರವಕ್ಕಾಗಿ ಕೃತಜ್ಞನಾಗಿದ್ದೇನೆ ಎಂದು ಹೇಳಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶನಾಯಕ, ಉಪನ್ಯಾಸಕಿ ಶಕುಂತಲಾ ಜಾಲವಾದಿ, ಶಿಕ್ಷಕ ಅನಂತಮೂರ್ತಿ ಡಬೀರ ಮಾತನಾಡಿದರು. ಬೀರಣ್ಣ ಆಲ್ದಾಳ ಅನೇಕ ಚುಟುಕುಗಳನ್ನು ವಾಚಿಸಿದರು.
ಪ್ರೌಢಶಾಲಾ ವಿಭಾಗದ ಪ್ರಭಾರಿ ಉಪಪ್ರಾಂಶುಪಾಲ ಎಸ್.ಎಸ್.ಕರಿಕಬ್ಬಿ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ವಯೋ ನಿವೃತ್ತಗೊಂಡ ಶ್ರೀನಿವಾಸ ಜಾಲವಾದಿ ದಂಪತಿಗಳನ್ನು ಶಾಲೆಯವತಿಯಿಂದ ಹಾಗೂ ನಗರದ ವಿವಿಧ ಶಾಲೆ-ಕಾಲೇಜುಗಳು, ಸಂಘ-ಸಂಸ್ಥೆಗಳು ಹಾಗೂ ನಾಗರೀಕರು ಸನ್ಮಾನಿಸಿದರು. ಕಾರ‍್ಯಕ್ರಮದಲ್ಲಿ ಹಿರಿಯ ಸಾಹಿತಿ ಎ.ಕೃಷ್ಣ ಸುರಪುರ, ನಿವೃತ್ತ ಪ್ರಾಂಶುಪಾಲ ನಿಷ್ಠಿ ದೇಶಮುಖ, ರತನ್‌ಸಿಂಗ್ ಠಾಕೂರ್, ಭೀಮಣ್ಣ ಭೋಸಗಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂಜೀವ ದರ್ಬಾರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೋಮರೆಡ್ಡಿ, ವೆಂಕೋಬ, ಯಲ್ಲಪ್ಪ ಕಾಡ್ಲೂರ್, ಖಾದರ್ ಪಟೇಲ್, ಶಿವಪ್ಪ ಕಟ್ಟೀಮನಿ, ಕೆ.ವೀರಪ್ಪ ಸೇರಿದಂತೆ ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿನಿಯರು, ಕವಿಗಳು, ಸಾಹಿತಿಗಳು ಭಾಗವಹಿಸಿದ್ದರು. ಶಿಕ್ಷಕ ಮಲ್ಲಿಕಾರ್ಜುನ ಜೆಟಗಿಮಠ ಸ್ವಾಗತಿಸಿದರು, ಬಸವರಾಜ ಗೋಗಿ ಹಾಗೂ ಹಸೀನಾ ಬಾನು ನಿರೂಪಿಸಿದರು ಹಾಗೂ ವಿಶ್ವರಾಜ ವಂದಿಸಿದರು.