ಬೆಂಗಳೂರಿನ ನೆರೆಗೆ ಬಿಡಿಎ ನೇರ ಕಾರಣ: ಹೆಚ್.ಡಿ.ಕುಮಾರಸ್ವಾಮಿ ಕಿಡಿ

0
11
  • ಯಾವತ್ತು ಬಿಡಿಎ ಹುಟ್ಟಿಕೊಂಡಿತೋ ಆಗಲೇ ಬೆಂಗಳೂರಿಗೆ ಗಂಡಾಂತರ ಪ್ರಾರಂಭವಾಯಿತು.
  • ವಿಧಾನಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸುದೀರ್ಘ ಭಾಷಣ.

ಬೆಂಗಳೂರು: ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರದ ಇಂದಿನ ಎಲ್ಲ ಕರ್ಮಕಾಂಡಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ವೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ನಿಯಮ 69ರ ಅಡಿ ಅತಿವೃಷ್ಟಿ ಬಗ್ಗೆ ವಿಧಾನಸಭೆಯಲ್ಲಿ ಎಂದು ಸುದೀರ್ಘವಾಗಿ ಮಾತನಾಡಿದ ಅವರು, ಇದ್ದ ಎಲ್ಲಾ ಕೆರೆಗಳನ್ನು ಮುಚ್ಚಿ ಬಡಾವಣೆಗಳನ್ನು ಮಾಡಿ, ಕಾಲುವೆಗಳನ್ನು ಮುಚ್ಚಿ ಬೆಂಗಳೂರು ಸೌಂದರ್ಯವನ್ನು ನಾಶ ಮಾಡಿತು ಎಂದು ಕಿಡಿಕಾರಿದರು.

Contact Your\'s Advertisement; 9902492681

ನಾನಂತೂ ಅಧಿಕಾರದಲ್ಲಿ ಇದ್ದಾಗ ಬೆಂಗಳೂರು ‌ನಗರ ವಿಷಯದಲ್ಲಿ ನಗರಕ್ಕೆ ಮಾರಕವಾಗುವ ಯಾವುದೇ ತೀರ್ಮಾನ ಎರಡೂ ಅವಧಿಯಲ್ಲೂ ನಾನು ತೆಗೆದುಕೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಸ್ಪಷ್ಟ ಮಾತಗಳಲ್ಲಿ ಹೇಳಿದರು.

ಮಳೆ ಅನಾಹುತ ಈಗಿನಿಂದ ಆಗಿದ್ದಲ್ಲ. 1999 ಈಚೆಗೆ ಐಟಿ ಕ್ಷೇತ್ರ ವೇಗವಾಗಿ ಬೆಳೆಯಲು ತೊಡಗಿತು. ಆಗ ಬೆಂಗಳೂರಿನ ಅಭಿವೃದ್ಧಿ ಬೇಕಾಬಿಟ್ಟಿ ದೊಡ್ಡ ಮಟ್ಟಿಗೆ ಆಯಿತು. ಮುಂದಾಗ ಬಹುದಾದ ಅನಾಹುತದ ಬಗ್ಗೆ ಯಾರೂ ಗಮನ ಕೊಟ್ಟಿಲ್ಲ ಎಂದು ಅವರು ಹೇಳಿದರು.

ಯಾವತ್ತು ಬಿಡಿಎ ಹುಟ್ಟಿಕೊಂಡಿತೋ ಆಗಲೇ ಬೆಂಗಳೂರಿಗೆ ಗಂಡಾಂತರ ಪ್ರಾರಂಭವಾಯಿತು. ಕೆರೆಗಳಿದ್ದಿದ್ದರೆ ಈ ರೀತಿ ನೆರೆ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಕೆರೆ ಅಭಿವೃದ್ಧಿಪಡಿಸಿದ್ದರೇ ನೀರಿನ ಸಮಸ್ಯೆನೇ ಆಗುತ್ತಿರಲಿಲ್ಲ. ಮೇಕೆದಾಟುಗೆ ಪಾದಯಾತ್ರೆ ಬೇಕಾಗಿತ್ತಾ? ಮೇಕೆದಾಟಿಗಾಗಿ ಪಾದಯಾತ್ರೆ ಮಾಡುವ ಅವಶ್ಯಕತೆನೇ ಇರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ವಿವರಿಸಿದರು.

ಕೆರೆ ಮುಚ್ಚಿ ನಿರ್ಮಿಸಲಾದ ಜೆಪಿ ನಗರ ಡಾಲರ್ಸ್ ಕಾಲೋನಿಯಲ್ಲಿ ಬಡವರಿಗೆ ನಿವೇಶನ ಕೊಟ್ಟಿದ್ದೀರಾ? ಅಲ್ಲಿ ಎಲ್ಲ ಐಎಎಸ್ ಅಧಿಕಾರಿಗಳು, ಶ್ರೀಮಂತರಿಗೆ ನಿವೇಶನ ಕೊಟ್ಡಿದ್ದೀರಿ. ಹಲವು ಕೆರೆಯನ್ನು ಮುಚ್ಚಿ ಹಾಕಿದ್ದಾರೆ. ಇದಕ್ಕೆಲ್ಲ ಕಾರಣ ಬಿಡಿಎ. ಬಿಡಿಎ ನಾಲ್ಕು ಸಾವಿರ ಎಕರೆ ಬಡಾವಣೆಗಾಗಿ ಭೂಮಿ ನೋಟಿಫೈ ಮಾಡುತ್ತದೆ. ಮತ್ತೆ ಯಾರಾದರು ಪ್ರಭಾವ ಬೀರಿದರೆ ಡಿನೋಟಿಫೈ ಮಾಡುತ್ತದೆ. ಆ ಪ್ರಾಧಿಕಾರಕ್ಕೆ ಒಂದು ಸ್ಪಷ್ಟತೆ ಇಲ್ಲ. ಒಂದು ನಿರ್ದಿಷ್ಟ ನೀಲನಕ್ಷೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ವಾಗ್ದಾಳಿ ನಡೆಸಿದರು.

ಒಂದು ಕಾಲದಲ್ಲಿ ಬೆಂಗಳೂರನ್ನು ಸಿಂಗಾಪುರ ಮಾಡಲು ಹೊರಟಿದ್ದರು. ಸಿಂಗಾಪುರ ಮಾಡಲು ಹೋಗಿಯೇ ಈ ತರ ಆಗಿದೆ ಎಂದು ಹಿಂದಿನ ಸರಕಾರಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದರು ಕುಮಾರಸ್ವಾಮಿ ಅವರು.

ತೆರವಿಗೆ ರಾತ್ರೋರಾತ್ರಿ ಜ್ಞಾನೋದಯ ಆಗಿದೆಯಾ?: ನೆರೆ ವಿಷಯದಲ್ಲಿ ಬೆಂಗಳೂರಿಗೆ ಶಾಶ್ವತ ಪರಿಹಾರ ಬೇಕು. ಸಿಎಜಿ ವರದಿಯಲ್ಲಿ ಕಾಲುವೆ ಮುಚ್ಚಿರುವುದರಿಂದ ಈ ನೆರೆ ಸಮಸ್ಯೆ ಎದುರಾಗಿದೆ ಎಂದು ತಿಳಿಸಲಾಗಿದೆ. ಡ್ರೈನೇಜ್ ಕಟ್ಟಲು ಹಣ ಹೋಗುತ್ತಿದೆಯಾ? ಅಥವಾ ಡ್ರೈನೇಜ್ ನಲ್ಲೇ ಹಣ ಹರಿದು ಹೋಗುತ್ತಿದೆಯಾ? ಹಣದ ದುರ್ಬಳಕೆ ಮಾಡಬಾರದು. ಹಣ ಲೂಟಿ ಮಾಡಿದ ವರ ಮೇಲೆ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ನಾವು ತಾಂತ್ರಿಕವಾಗಿ, ಆರ್ಥಿಕವಾಗಿ ಬೆಳೆದಿದ್ದೇವೆ. ಆದರೆ ಜನರ ಸಂಕಷ್ಟ ಪರಿಹರಿಸಲು ಏಕೆ ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳಿಗೆ ರಾತ್ರೋರಾತ್ರಿ ನಿಮಗೆ ಜ್ಞಾನೋದಯ ಆಗಿದೆ. ಸಿಎಂ ಆದೇಶ ಕೊಟ್ಟ ಮೇಲೆ ಏಕೆ ಜ್ಞಾನೋದಾಯ ಆಗಿದೆ? ಇಷ್ಟು ದಿನ ಅಧಿಕಾರಿಗಳು ಏಕೆ ಏನೂ ಮಾಡಿಲ್ಲ? ಈ ದೇಶದ ಕಾನೂನು ಬರೀ ಶ್ರೀಮಂತರಿಗಾ? ಬಡವರಿಗೆ ಇಲ್ಲವಾ? ಮೂರು‌ನಾಲ್ಕು ದಿನ ಕಟ್ಟಡವನ್ನು ಒಡೆದರೆ ಆಗುವುದಿಲ್ಲ. ಮುಖ್ಯಮಂತ್ರಿಗಳು ಕಠಿಣವಾಗಿ ವರ್ತಿಸಬೇಕು. ಒಂದು ವಿಸ್ತೃತವಾದ ವರದಿ ತರಿಸಿ ಕ್ರಮ ಕೈಗೊಳ್ಳಬೇಕು. ಆದರೆ, ಮಾನವೀಯತೆಯಿಂದ ಬಡ ಕುಟುಂಬಗಳ ಬಗ್ಗೆ ಯೋಚಿಸಬೇಕು. ಇದು ಅವರು ಮಾಡಿದ ತಪ್ಪಲ್ಲ ಎಂದು ಅವರು ಹೇಳಿದರು.

ರಾಮನಗರ ಸಚಿವರ ವಿರುದ್ಧ ವಾಗ್ದಾಳಿ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೇ ಯೋಜನೆಯಿಂದ ಕೆಲ ಸಮಸ್ಯೆ ಎದುರಾಗಿದೆ. ಅವೈಜ್ಞಾನಿಕ ಕಾಮಗಾರಿ ರಸ್ತೆಯಲ್ಲಿ ಪ್ರವಾಹಕ್ಕೆ ಕಾರಣ. ಅಲ್ಲದೆ ರಾಮನಗರ ನಗರ ಪ್ರದೇಶದಲ್ಲಿ ನೆರೆ ಉಂಟಾಗಲು ರಾಮನಗರ ಪಕ್ಕದ ಕೆರೆ ಕೋಡಿ ಒಡೆದಿರುವುದೇ ಕಾರಣ‌. ಘಟಾನುಘಟಿ ನಾಯಕರು ಇರುವ ಜಿಲ್ಲೆಯಲ್ಲಿ ಯಾರೂ ಏನೂ ಮಾಡಲು ಆಗಿಲ್ಲ. ಮೂರು ವರ್ಷದಲ್ಲಿ ನಾವು ಬಂದು ಎಲ್ಲವನ್ನೂ ಮಾಡಿದ್ದೆವು ಎಂದು ಉಸ್ತುವಾರಿ ಸಚಿವರು ವೀರಾವೇಶದಿಂದ ಮಾತನಾಡಿದ್ದರು. ಅವರು ಏನು ಮಾಡಿದ್ದಾರೆ ಎಂಬುದು ಸದನದ ಮುಂದೆ ಇಡುವುದು ಸೂಕ್ತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

10 ವರ್ಷದಿಂದ ರಾಮನಗರದ ಅಭಿವೃದ್ಧಿ ಏನಾಗಿದೆ? ಕಳೆದ ಮೂರು ವರ್ಷದಿಂದ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬ ಬಗ್ಗೆ ಸದನದ ಮುಂದೆ ಇಡಲಿ. ನನ್ನಿಂದ ಏನಾದರು ಲೋಪ ಆಗಿದೆಯಾ ಎಂಬ ಬಗ್ಗೆಯೂ ನನಗೂ ತಿಳಿಯುತ್ತದೆ ಎಂದು ಸಚಿವ ಅಶ್ವತ್ಥನಾರಾಯಣಗೆ ತಿರುಗೇಟು ನೀಡಿದರು ಅವರು. ಮಳೆ ಹಾನಿ ಪರಿಶೀಲನೆ ನಡೆಸಿ ವರದಿ ನೀಡಲು ಬಂದಿದ್ದ ಕೇಂದ್ರ ತಂಡ “ಬಂದ ಪುಟ್ಟ ಹೋದ ಪುಟ್ಟ ಆದಂತಾಯಿತೆ ಎಂಬುದು ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ತಂಡದ ವಿರುದ್ಧ ಕಿಡಿ: ನೆರೆ ವೀಕ್ಷಣೆಗೆ ಬಂದ ಕೇಂದ್ರ ತಂಡ ಬಂದ ಪುಟ್ಟ ಹೋದ ಪುಟ್ಟ ಆದ್ರ ಗೊತ್ತಿಲ್ಲ.‌ ಕೇಂದ್ರ ತಂಡದ ಮುಂದೆ ಜನರು ಹಾವೇರಿಯಲ್ಲಿ ಪರಿಹಾರ ಕೊಡಿಸಿ ಇಲ್ಲಾಂದ್ರೆ ವಿಷ ಸೇವಿಸುವ ಪರಿಸ್ಥಿತಿ ಇದೆ ಎಂದು ಅಳಲು ತೋಡಿಕೊಂಡಿದ್ದಾರೆ‌ ಎಂದು ಗಮನಸೆಳೆದರು.

ಶಿಗ್ಗಾವಿ ತಾಲ್ಲೂಕಿನಲ್ಲಿ ಕೇಂದ್ರ ತಂಡದ ಪರಿಶೀಲನೆಗೆ ರೈತರು ಅಸಮಾಧಾನಗೊಂಡಿದ್ದರು. ಈ ಬಗ್ಗೆ ಪತ್ರಿಕೆಯಲ್ಲಿ ಈ ಬಗ್ಗೆ ವರದಿ ಬಂದಿದೆ. ಬೆಳೆ ನಷ್ಟ ಬಗ್ಗೆ ಹೊಲಕ್ಕೆ ಬಾರದೆ ರಸ್ತೆಯಲ್ಲೇ ನಿಂತು ಪರಿಶೀಲನೆ ನಡೆಸಿದ್ದಾರೆ.ಈ ಬಗ್ಗೆ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಹೀಗಾದರೆ ಎಷ್ಟರ ಮಟ್ಟಿಗೆ ಕೇಂದ್ರ ಸರ್ಕಾರಕ್ಕೆ ವರದಿ ಕೊಡುತ್ತಾರೆ? ಎಂದು ಪ್ರಶ್ನಿಸಿದರು.

ಕೃಷಿ ವಿವಿ ಬಗ್ಗೆ ಅಸಮಾಧಾನ: ಕಳೆದ ಐದು ವರ್ಷದಲ್ಲಿ ಯಾವ ರೀತಿಯಲ್ಲಿ ಸರಾಸರಿ ಮಳೆ ಹಾಗೂ ಅದರ ಪರಿಣಾಮದ ಬಗ್ಗೆ ವರದಿ ತೆಗೆದುಕೊಳ್ಳಬೇಕಿದೆ. ಸ್ಪರ್ಧೆಯಲ್ಲಿ ಕೃಷಿ ವಿವಿ ಮಾಡಿಕೊಂಡಿದ್ದೇವೆ. ಆದರೆ ಅವರು ಏನು ಮಾಡ್ತಿದ್ದಾರೆ? ಐದು ವರ್ಷಗಳಲ್ಲಿ ಏನು ಕೆಲಸ ಮಾಡಿದ್ದಾರೆ? ಮಳೆ ಅನಾಹುತದ ಬಗ್ಗೆ ವೈಜ್ಞಾನಿಕವಾಗಿ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದರು.

ಎನ್ ಡಿ ಆರ್ ಎಫ್ ಗೈಡ್ ಲೈನ್ ಬದಲಾವಣೆ ಆಗಿಲ್ಲ. ಐದು ವರ್ಷಕ್ಕೆ ಒಮ್ಮೆ ಪರಿಶೀಲನೆ ಮಾಡಬೇಕಾಗಿದೆ. ಆದರೆ ಕೇಂದ್ರ ಸರ್ಕಾರದಿಂದ ಅದು ಆಗಿಲ್ಲ . ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರು ಸದನಲ್ಲಿ ಹೇಳಿದ್ದಾರೆ. ಅದಕ್ಕೆ ನನ್ನ ಸಹಮತ ಇದೆ ಎಂದು ಸಿದ್ದರಾಮಯ್ಯ ಮಾತಿಗೆ ಹೆಚ್ ಡಿಕೆ ಸಹಮತ ವ್ಯಕ್ತಪಡಿಸಿದರು.

ಈ ವರ್ಷ ಹೆಚ್ಚಿನ ಮಳೆಯಾಯಿತು ಅಂತ ಕಾರಣ ಹೇಳಲು ಸಾಧ್ಯವಿಲ್ಲ. ಆ ಕಾರಣ ಹೇಳಿ ಜನರನ್ನ ಮೆಚ್ಚಿಸಲು ಸಾಧ್ಯವಿಲ್ಲ. ಕಳೆದ ಐದು ವರ್ಷದಲ್ಲಿ ಯಾವ್ಯಾವ ಜಿಲ್ಲೆಯಲ್ಲಿ ಎಷ್ಟು ಮಳೆಯಾಗಿದೆ. ಹಳ್ಳಿ ಮೇಲೆ, ಬೆಳೆ ಮೇಲೆ ಆಗಿರುವ ಪರಿಣಾಮದ ಬಗ್ಗೆ ವರದಿ ಪಡೆಯಬೇಕು ಎಂದರು.

ಪ್ರಕೃತಿ ವಿಕೋಪದ ಸಂಕಷ್ಟಕ್ಕೆ ನಾವೇ ನಮ್ಮನ್ನು ದೂಡಿಕೊಂಡಿದ್ದೇವೆ. ಅತಿವೃಷ್ಟಿ ಅನಾಹುತ 2004-05 ರಲ್ಲೂ 2009 ರಲ್ಲೂ ಕಂಡಿದ್ದೇವೆ. 2018 ರಲ್ಲೂ ಹಲವಾರು ಭಾಗದಲ್ಲಿ ಪ್ರಕೃತಿ ವಿಕೋಪದ ಸಮಸ್ಯೆ ಎದುರಿಸಬೇಕಾಯಿತು. ವಿರೋಧ ಪಕ್ಷದಲ್ಲಿ ಕೂತು ಸರ್ಕಾರದ ವೈಫಲ್ಯವನ್ನು ಟೀಕೆಗಾಗಿ ಮಾಡಲು ನಾನು ತಯಾರಿಲ್ಲ. ಇದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪರಿಹಾರ ವಿಚಾರವಾಗಿ ಕೇಂದ್ರ ಸರ್ಕಾರದ ಮನವೋಲಿಸಲೇ ಬೇಕು. ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ಬಿ.ಎಸ್. ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಮನೆಗಳ ಕುಸಿತಕ್ಕೆ ಐದು ಲಕ್ಷ ಪರಿಹಾರ ಕೊಡಲಾಗಿತ್ತು. ಇದು ಉತ್ತಮವಾದ ತೀರ್ಮಾನ. ಬೆಳೆ ಹಾನಿ ಬಗ್ಗೆಯೂ ಎನ್ ಡಿ ಆರ್ ಎಫ್ ನಿಯಮಾವಳಿ ಮೀರಿ ಪರಿಹಾರ ಕೊಡಲಾಗಿದೆ. ಬೆಂಗಳೂರು ಮಳೆ ಹಾನಿಗೆ ಪರಸ್ಪರ ಟೀಕೆ ಸರಿಯಲ್ಲ. ಇದರಿಂದ ಜನಸಾಮಾನ್ಯರ ನೋವಿಗೆ ಉತ್ತರ ಸಿಗಲ್ಲ ಎಂದರು ಅವರು.

ನಮ್ಮ ಸರ್ಕಾರದ ಪ್ರತೀ ವರದಿ ನೋಡಿದಾಗ, 2008-09ರಲ್ಲಿ ಎಸ್ಟಿಮೇಟ್ ಲಾಸ್ 3,700 ಕೋಟಿ ರೂ. ಕೊಟ್ಟಿದ್ದೇವೆ. 2019ಕ್ಕೆ ಬಂದರೆ 35 ಸಾವಿರ ಕೋಟಿ ರೂ. ನಷ್ಟವಾಗಿದೆ. 2020 ಆಗಸ್ಟ್ ತಿಂಗಳಲ್ಲಿ 8,000 ಕೋಟಿ ನಷ್ಟ ಆಗಿದೆ. ಮತ್ತೆ ಅದೇ ವರ್ಷ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ 15,410ಕೋಟಿ ಲಾಸ್ ಕೊಡಲಾಗಿದೆ. 2021 ಜುಲೈ ತಿಂಗಳಲ್ಲಿ 5,490ಕೋಟಿ. ಈಗ 11,911 ಕೋಟಿ ಲೆಕ್ಕ ಕೊಡಲಾಗಿದೆ. ಎಲ್ಲಾ ಲೆಕ್ಲ ನೋಡಿದರೆ, 1ಲಕ್ಷ ಕೋಟಿ ಕಳೆದ ಐದು ವರ್ಷದಲ್ಲಿ ಪ್ರಕೃತಿ ವಿಕೋಪದಿಂದ ನಷ್ಟವಾಗಿದೆ ಎಂದು ಅಂಕಿ ಅಂಶಗಳ ಸಹಿತ ವಿವರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here