ಸಮಾಜ ಕಾರ್ಯಕ್ಕೆ ಸವೆಯುವುದು ಅಗತ್ಯ: ಅಕ್ಕ ಅನ್ನಪೂರ್ಣ

1
564

ಅಪಮಾನವೂ ಅಪ್ಯಾಯಮಾನ. ಡಾಕ್ಟರೇಟ್ ಪದವಿಯಲ್ಲಿ ಅಕ್ಕ ಕಳೆದು ಹೋಗಬಾರದು. ಸಾಯುವುದು ಸುಲಭ. ಸವೆಯುವುದು ಕಷ್ಟ. ದೇವಕಾರ್ಯ ಮತ್ತು ಸಮಾಜ ಕಾರ್ಯಕ್ಕೆ ಸವೆಯಬೇಕು. ಸಾವಿಗೆ ಕಾರಣ ರೋಗವಲ್ಲ; ಆಯುಷ್ಯ. ಆಯುಷ್ಯ ತೀರದೆ ಮರಣವಿಲ್ಲ. -ಅಕ್ಕ ಅನ್ನಪೂರ್ಣ ತಾಯಿ, ಬೀದರ್.

ಕಲಬುರಗಿ: ಬಸವತತ್ವ ಪರಿಚಾರಕರಾಗಿ, ಪ್ರಚಾರಕರಾಗಿ, ಪ್ರಬುದ್ಧ ಚಿಂತಕರಾಗಿ, ಕನ್ನಡ ತತ್ವಜ್ಞಾನದ ಹಿರಿಮೆಯನ್ನು ಜಗತ್ತಿಗೆ ಸಾರಿದ ಶ್ರೇಯಸ್ಸು ಬೀದರ್ ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ತಾಯಿಗೆ ಸಲ್ಲುತ್ತದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ಪ್ರಾಧ್ಯಾಪಕಿ ಡಾ. ಜಯಶ್ರೀ ದಂಡೆ ಅಭಿಪ್ರಾಯಪಟ್ಟರು.

Contact Your\'s Advertisement; 9902492681

ಜಾಗತಿಕ ಲಿಂಗಾಯತ ಮಹಾಸಭಾ ಬಸವಪರ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತರಾದ ಡಾ. ಅಕ್ಕ ಅನ್ನಪೂರ್ಣ ತಾಯಿ ಅವರಿಗೆ ನಗರದ ಬಸವ ಮಂಟಪದಲ್ಲಿ ಆಯೋಜಿಸಿದ್ದ ಅಭಿನಂದನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದ ಅಕ್ಕ ಬಸವತತ್ವಕ್ಕೆ ಮಾರು ಹೋಗಿ ತಮ್ಮ ಅಸ್ಖಲಿತ ಪ್ರವಚನದ ಮೂಲಕ ಲಿಂಗ ಮೆಚ್ವುವ ನುಡಿಗಳನ್ನಾಡುತ್ತಿರುವ ಅನ್ನಪೂರ್ಣ ತಾಯಿಯವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡುವ ಮೂಲಕ ಬೆಳಗಾವಿ ವಿವಿ ತನ್ನ ಘನತೆಯನ್ನು ಹೆಚ್ಚಿಸಿಕೊಂಡಿದೆ ಎಂದು ತಿಳಿಸಿದರು.

ಅಭಿನಂದನ ನುಡಿಗಳನ್ನಾಡಿದ ಪತ್ರಕರ್ತ-ಲೇಖಕ ಡಾ. ಶಿವರಂಜನ ಸತ್ಯಂಪೇಟೆ, ಬಸವಗಿರಿ, ಬಸವ ಸೇವಾ ಪ್ರತಿಷ್ಠಾನ, ಲಿಂಗಾಯತ ಮಹಾ ಮಠ ಹೀಗೆ ಹತ್ತು ಹಲವು ಸಂಸ್ಥೆಗಳನ್ನು ಹುಟ್ಟು ಹಾಕುವ ಮೂಲಕ ನಾಡಿನಾದ್ಯಂತ ಬಸವ ಬೀಜ ಬಿತ್ತಿದ ಅಕ್ಕನವರ ಸಾಮಾಜಿಕ ಧಾರ್ಮಿಕ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ವಚನ ವಿಜಯೋತ್ಸವ, ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ, ಪ್ರವಚನದ ಮೂಲಕ ಕನ್ನಡ ನಾಡಿನ ಅಷ್ಟೇ ಏಕೆ ಅಂತರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿರುವ ಅನ್ನಪೂರ್ಣ ತಾಯಿಯವರು ಕ್ಯಾನ್ಸರ್ ಪೀಡಿತರಾಗಿದ್ದರೂ ತಮ್ಮ ಬಸವ ಸೇವೆ ನಿಲ್ಲಿಸಿಲ್ಲ. ಆಸರೆ, ಸಮಾಧಾನ, ಸಂರಕ್ಷಣೆ, ಅವ್ವನಷ್ಟೇ ಅಪ್ಯಾಯಮಾನವಾಗಿ ಜೀವಂತ ಜೀವನವಾಗಿ ನಮ್ಮ ಕಣ್ಣ ಮುಂದಿರುವುದು ನಮ್ಮೆಲ್ಲರ ಭಾಗ್ಯ ಎಂದು ತಿಳಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಬಸವದಳದ ಜಿಲ್ಲಾಧ್ಯಕ್ಷ ಆರ್.ಜಿ. ಶೆಟಗಾರ ಪ್ರಾಸ್ತಾವಿಕ ಮಾತನಾಡಿದರು.ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ಸಂಚಾಲಕ ರವೀಂದ್ರ ಶಾಬಾದಿ ಸ್ವಾಗತಿಸಿದರು.

ಸಂತೋಷ ಹೂಗಾರ ನಿರೂಪಿಸಿದರು. ಸತೀಶ ಸಜ್ಜನಶೆಟ್ಟಿ ವಂದಿಸಿದರು. ನೀಲಕಂಠ ಪಾಟೀಲ, ಶರಣಬಸವ ಕಲ್ಲಾ, ಶಿವಶರಣಪ್ಪ ದೇಗಾಂವ, ಮಾಲತಿ ರೇಶ್ಮಿ, ಸಾಕ್ಷಿ ಸತ್ಯಂಪೇಟೆ, ಅಯ್ಯಣ್ಣ ನಂದಿ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here