ಕಲಬುರಗಿ: ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ೨೫ ವರ್ಷ ಸೇರಿ ಮಾಧ್ಯಮ ಕ್ಷೇತ್ರದಲ್ಲಿ ಮೂವತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮುಖ್ಯ ಉಪಸಂಪಾದಕ ಸುಭಾಷ ಬಣಗಾರ ಅವರಿಗೆ ಕಲಬುರಗಿಯಲ್ಲಿ ಶನಿವಾರ ನಡೆದ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೌರವಿಸಿದ ಹಿನ್ನಲೆಯಲ್ಲಿ ಕಲಬುರಗಿ ಆವೃತ್ತಿಯ ಪತ್ರಿಕಾ ಬಳಗದಿಂದ ಕಚೇರಿಯಲ್ಲಿ ಸೋಮವಾರ ಅಭಿನಂದಿಸಲಾಯಿತು.
ಸ್ಥಾನಿಕ ಸಂಪಾದಕ ವಾದಿರಾಜ ವ್ಯಾಸಮುದ್ರ ಸನ್ಮಾನಿಸಿ, ೩೦ ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಬಣಗಾರ ಅವರು ಎಲೆ ಮರೆಯ ಕಾಯಿಯಂತೆ ಕಾರ್ಯ ನಿರ್ವಹಿಸುತ್ತಿರುವುದನ್ನು ಗುರುತಿಸಿ ಸನ್ಮಾನಿಸಿದ್ದು, ಅರ್ಹರಿಗೆ ಸಂದ ಗೌರವವಾಗಿದೆ ಎಂದು ಸರಕಾರದ ಕಾರ್ಯವನ್ನು ಶ್ಲಾಘಿಸಿದರು.
ಬಣಗಾರ ಉಪಸಂಪಾದಕರಾಗಿ, ವರದಿಗಾರರಾಗಿ ಹಂತಹಂತವಾಗಿ ಬೆಳೆದಿದ್ದಾರೆ. ಪತ್ರಿಕೆಗಳನ್ನು ಓದುವ ಹವ್ಯಾಸ ಹೆಚ್ಚಿಸುವ ಹಿನ್ನಲೆಯಲ್ಲಿ ಹೊಸ ಕಲ್ಪನೆಯಲ್ಲಿ ಬಯಲು ಗ್ರಂಥಾಲಯವನ್ನು ಆರಂಭಿಸಿದ್ದು, ಅದು ರಾಜ್ಯದ ಎಲ್ಲಾ ಕಡೆ ಇದೇ ಮಾದರಿಯಲ್ಲಿ ಪ್ರಾರಂಭವಾಗಿದ್ದನ್ನು ಪ್ರಶಂಸೆ ವ್ಯಕ್ತಪಡಿಸಿದರು.
ಪತ್ರಿಕಾ ವೃತ್ತಿಯ ಜೊತೆಗೆ ವಿವಿಧ ವಿವಿಯಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರಿಂದ ಕಲಿತ ವಿದ್ಯಾರ್ಥಿಗಳು ರಾಜ್ಯಮಟ್ಟದ ಪತ್ರಿಕೆ, ವಿವಿಧ ಚಾನೆಲ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿನ ಅವರ ಸೇವೆ ಅಭಿನಂದನಾರ್ಹವಾಗಿದೆ. ಅವರು ಇನ್ನೂ ಎತ್ತರಕ್ಕೆ ಬೆಳೆದು, ಪತ್ರಿಕಾ ಕ್ಷೇತ್ರದಲ್ಲಿ ತಮ್ಮದೆ ಆದ ಛಾಪು ಮೂಡಿಸಲಿ ಎಂದು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಭಾಷ ಬಣಗಾರ್, ಈ ಸನ್ಮಾನ, ಗೌರವ ಸಂಯುಕ್ತ ಕರ್ನಾಟಕ ಪತ್ರಿಕೆಗೆ, ಇದರ ಬಳಗಕ್ಕೆ ದೊರೆತ ಸನ್ಮಾನವಾಗಿದೆ. ಪತ್ರಿಕೆ, ಆಕಾಶವಾಣಿ, ದೂರದರ್ಶನ, ಉಪಪನ್ಯಾಸಕನಾಗಿ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಿದ ಹಾಗೂ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಕಚೇರಿ ವ್ಯವಸ್ಥಾಪಕ ಯು.ವಸುಧೇಂದ್ರ, ಜಾಹೀರಾತು ವ್ಯವಸ್ಥಾಪಕ ಗಿರೀಶ ಕುಲಕರ್ಣಿ, ಹಿರಿಯ ಉಪಸಂಪಾದಕ ರಾಘವೇಂದ್ರ ದೇಸಾಯಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಉಪಸಂಪಾದಕ ಸಂಗಮನಾಥ ರೇವತಗಾಂವ ನಿರೂಪಿಸಿ, ವಂದಿಸಿದರು.