ಆಳಂದ: ಜೀವನದಲ್ಲಿ ದೈಹಿಕ ಕಸರತ್ತು ಮಾಡುವುದರೊಂದಿಗೆ ಕ್ರೀಡೆಗಳನ್ನು ಆಡುವುದರಿಂದ ಸಮತೋಲಿತ ಜೀವನ ನಡೆಸಲು ಸಾಧ್ಯ ಎಂದು ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಅರವಿಂದ ಭಾಸಗಿ ಅಭಿಪ್ರಾಯಪಟ್ಟರು.
ಸೋಮವಾರ ಪಟ್ಟಣದ ತಾಲೂಕಾ ಸರ್ಕಾರಿ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ, ಮಾತೋಶ್ರೀ ಅಂಬವ್ವಾ ರುಕ್ಮಯ್ಯ ಗುತ್ತೇದಾರ ಸ್ಮಾರಕ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಮ್ಮಿಕೊಂಡಿದ್ದ ಪದವಿ ಪೂರ್ವ ಕಾಲೇಜುಗಳ ತಾಲೂಕಾ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮ ಪಡಿಸುತ್ತವೆ ಅಲ್ಲದೇ ನಮ್ಮನ್ನು ಸದಾಕಾಲ ಕ್ರೀಯಾಶೀಲವಾಗಿಡಲು ಸಹಕರಿಸುತ್ತವೆ ಹೀಗಾಗಿ ದಿನನಿತ್ಯದ ಜೀವನದ ಭಾಗದಲ್ಲಿ ಒಂದು ಸಮಯವನ್ನು ಕ್ರೀಡೆಗಾಗಿ ಮೀಸಲಿಡಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಶಶಿಕಾಂತ ಮೇತ್ರೆ, ರಾಣಪ್ಪ ಸಂಗನ, ಶಿವಕುಮಾರ ಕರಹರಿ, ಶಿವಶರಣಪ್ಪ ಗುಬ್ಬನ, ಮಲ್ಲಿನಾಥ ಖಜೂರಿ, ಸಲೀಂ ಶಿರೂರ, ಮಲ್ಲಿಕಾರ್ಜುನ ಬುಕ್ಕೆ ಭಾಗವಹಿಸಿದ್ದರು.
ಎಂಎಆರ್‍ಜಿ ಪಿಯು ಕಾಲೇಜು ಪ್ರಾಚಾರ್ಯ ಡಾ. ಅಪ್ಪಾಸಾಬ ಬಿರಾದಾರ ಕ್ರೀಡಾಧ್ವಜ ನೇರವೇರಿಸಿದರು. ಶಶಿಕಾಂತ ಮೇತ್ರೆ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಉಪನ್ಯಾಸಕ ಶಿವಾನಂದ ಕಲಮಂಥಣಿ ಸ್ವಾಗತಿಸಿದರೆ, ಮಲ್ಲಿಕಾರ್ಜುನ ಶೃಂಗೇರಿ ವಂದಿಸಿದರು. ಶರಣಬಸಪ್ಪ ವಡಗಾಂವ ಪ್ರತಿಜ್ಞಾವಿಧಿ ಬೋಧಿಸಿದರು.