ಚಿಟಗುಪ್ಪ: ಮಕ್ಕಳ ಉತ್ತಮ ಭವಿಷ್ಯವೇ ಭಾರತದ ಭವಿಷ್ಯವೆಂಬ ದೂರದೃಷ್ಠಿಯ ಹಿನ್ನೆಲೆಯಲ್ಲಿ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡಿ ಶ್ರಮಿಸಲಾಗುತ್ತಿದೆ ಎಂದು ಸಾಹಿತಿ, ಸಾಮಾಜಿಕ ಸೇವಕ ಸಂಗಮೇಶ ಎನ್ ಜವಾದಿ ಯವರು ಹೇಳಿದರು.
ನಗರದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ, ವಿಕಾಸ ಅಕಾಡೆಮಿ, ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಸಮಿತಿ ಬೀದರ ಜಿಲ್ಲೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಸಮಾರಂಭ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ದೇಶದ ಮುಂದಿನ ಸಾಮಾಜಿಕ, ಆರ್ಥಿಕ ಬೆಳವಣಿಗೆಗೆ ಮಕ್ಕಳ ಕೊಡುಗೆ ಅಪಾರವಾಗಿರುತ್ತದೆ. ಬಾಲ ಕಾರ್ಮಿಕತೆ, ಹೆಣ್ಣು ಭ್ರೂಣಹತ್ಯೆ, ಬಾಲ್ಯ ವಿವಾಹ ಮತ್ತು ಹೆಣ್ಣು ಮಕ್ಕಳ ಮಾರಾಟ ಮುಂತಾದ ಸಾಮಾಜಿಕ ಪಿಡುಗುಗಳನ್ನು ತಡೆಗಟ್ಟುವುದು ಅವಶ್ಯಕತೆ ಇದೆ.
ಈ ನಿಟ್ಟಿನಲ್ಲಿ ಆರೋಗ್ಯ, ಶಿಕ್ಷಣ, ಪ್ರೀತಿ ಸ್ನೇಹದ ಪೋಷಣೆ ಮತ್ತು ಪೌಷ್ಠಿಕ ಮಟ್ಟವನ್ನು ಉತ್ತಮ ಪಡಿಸಿ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಸರ್ಕಾರ,ಸಂಘ ಸಂಸ್ಥೆಗಳು ಮಾಡಬೇಕು.ಅದೇ ರೀತಿ ಹೆಣ್ಣು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯನ್ನು ಉತ್ತಮಪಡಿಸಿ,ಹೆಣ್ಣು ಮಗುವಿಗೆ ಆರ್ಥಿಕ ನೆರವು ನೀಡುವುದರ ಮೂಲಕ ಅವರನ್ನು ಸಮಾಜದಲ್ಲಿ ಸದೃಢರನ್ನಾಗಿ ಮಾಡುವುದು ಇಂದಿನ ದಿನಗಳಲ್ಲಿ ಬಹಳ ಅಗತ್ಯತೆ ಇದೆ.ಈ ದಿಸೆಯಲ್ಲಿ ಕಲ್ಯಾಣ ಕರ್ನಾಟಕ ಸಂಘವು ಬಸವರಾಜ ಪಾಟೀಲ ಸೇಡಂ ರವರ ಅಧ್ಯಕ್ಷತೆಯಲ್ಲಿ ಸತತವಾಗಿ ದುಡಿಯುತ್ತಿದೆ. ಇದಕ್ಕೆ ತಾವೆಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.
ಸಾಮಾಜಿಕ ಸೇವಕರಾದ ರೇವಣ್ಣಪ್ಪಾ ಹೂಗಾರ ಮಾತನಾಡಿ ಸಮಾಜವನ್ನು ಸಜ್ಜುಗೊಳಿಸಿ, ಸ್ಥಳೀಯ ಸಮುದಾಯವನ್ನು ತೊಡಗಿಸಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಸಾರ್ವಜನಿಕ ಸಭೆಗಳನ್ನು ನಡೆಸಿ, ಕಾರ್ಯಗಾರ/ವಿಚಾರ ಗೋಷ್ಟಿಗಳು ಹಾಗೂ ನವೀನ ಚಟುವಟಿಕೆಗಳ ಮೂಲಕ ಮಹಿಳೆಯರು ಮತ್ತು ಮಕ್ಕಳು ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳು ಹಮ್ಮಿಕೊಂಡು ಹಗಲಿರುಳು ದುಡಿಯುತ್ತಿರುವ ಸಂಗಮೇಶ ಎನ್ ಜವಾದಿ ಯವರ ನಿಸ್ವಾರ್ಥ ಸೇವೆ ಅನನ್ಯವಾದದ್ದು,ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ. ಇವರ ಸಾಮಾಜಿಕ ಸೇವೆಯ ಕೆಲಸಗಳು ನಾಡಿಗೆ ಮಾದರಿಯಾಗಿದ್ದು ಎಂದು ಹೇಳಿದರು.
ನಿವೃತ್ತ ಶಿಕ್ಷಕ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಾಹಾರುದ್ರ ಅಣದೂರ ಮಾತನಾಡಿ ಅನ್ಯಾಯಕ್ಕೆ ಒಳಗಾಗದವರಿಗೆ ನ್ಯಾಯ ಕೊಡಿಸಿ, ಮೂಲಭೂತ ಸೌಲಭ್ಯ, ಆಶ್ರಯ, ಆಹಾರ, ವಸ್ತ್ರ, ಸಮಲೋಚನೆ ಒಳಗೊಂಡಂತೆ ವೈದ್ಯಕೀಯ ಸೌಲಭ್ಯ, ಕಾನೂನಿನ ನೆರವು ಮತ್ತು ಮಾರ್ಗದರ್ಶನ ಹಾಗೂ ವೃತ್ತಿ ತರಬೇತಿ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಗಮೇಶ ಎನ್ ಜವಾದಿಯವರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.ಈ ನಿಟ್ಟಿನಲ್ಲಿ ನಾವೆಲ್ಲರೂ ಅವರ ಜೊತೆ ನಿಲ್ಲಬೇಕು.ಅಂದಾಗ ಮಾತ್ರ ಅವರಿಗೆ ಇನ್ನು ಹೆಚ್ಚಿನ ಕೆಲಸ ಮಾಡಲು ಪ್ರೋತ್ಸಾಹ ಸೀಗುತ್ತದೆ ಎಂದರು.
ಇದೆ ಸಂದರ್ಭದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವು ಗಣ್ಯರಿಗೆ ಗೌರವ ಸನ್ಮಾನ ಮಾಡಲಾಯಿತು. ಮತ್ತು ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಪ್ರಮಾಣ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಗತಿ ಕೇಂದ್ರ ಮಾತೆಯರಾದ ರೇಣುಕಾ ಮಾಳಾ, ಕರುಣಾ ದಾಂಡೇಕರ್, ಕೌಶಲ್ಯ ಕೇಂದ್ರ ಸರಸ್ವತಿ ಝರೇಪ್ಪ, ಶಶಿಕಲಾ ಚವ್ಹಾಣ ಸೇರಿದಂತೆ ಮಾತೆಯರು, ಅಪಾರ ಪ್ರಮಾಣದಲ್ಲಿ ಮುದ್ದು ಮಕ್ಕಳು ಭಾಗವಹಿಸಿದ್ದರು.