ಧಾರವಾಡ: ನಗರದ ರಂಗಾಯಣ ಸಭಾಭವನದಲ್ಲಿ ವಿಶ್ವದರ್ಶನ ಕನ್ನಡ ದಿನಪತ್ರಿಕೆಯ ಸಮ್ಮೇಳನದಲ್ಲಿ ಕಲಬುರಗಿಯ ಜನಪರ ಹೋರಾಟಗಾರ ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ ಅವರ ಸಮಾಜ ಸೇವೆಯನ್ನು ಗುರುತಿಸಿ “ವಿಶ್ವ ಪ್ರಜಾಸೇವಾ ರತ್ನ” ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಅರಳಿ ನಾಗರಾಜ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಸಮಾಜ ಸೇವಕರು ಸಮಾಜದ ಆಸ್ತಿ, ಅಂಥವರನ್ನು ಗುರುತಿಸಿ ಸರಕಾರ ಅಲ್ಲದೆ ಇತರ ಸಂಘ, ಸಂಸ್ಥೆಗಳು ಗೌರವಿಸುವುದು ಹಾಗೂ ಪ್ರಶಸ್ತಿ ನೀಡುವುದರೊಂದಿಗೆ ಸಮಾಜ ಸೇವಕರ ಕಾರ್ಯ ಇಮ್ಮಡಿಗೊಳಿಸಿದಂತಾಗುತ್ತದೆ.ಇಂಥಹ ಗುರುತರವಾದ ಜವಾಬ್ದಾರಿಯನ್ನು ಅರಿತು ಮಾಡಿದರೆ ಉತ್ತಮವಾದ ಸಮಾಜ ಕಟ್ಟಲು ನಾಂದಿಯಾಗುತ್ತದೆ. ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಯಿಂದ ಆಯ್ಕೆ ಮಾಡಿ ಪ್ರಶಸ್ತಿ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಮಾರ್ಮಿಕವಾಗಿ ನುಡಿದರು.
ವೇದಿಕೆಯ ಮೇಲೆ ಗದಗ ಜಿಲ್ಲೆಯ ಗಜೇಂದ್ರಗಡದ ಶರಣಬಸವ ಸಂಸ್ಥಾನ ಕೋಡಿಮಠದ ಡಾ. ಕಾಲಜ್ಞಾನ ಬ್ರಹ್ಮ ಸದ್ಗುರು ಮಹಾಶಿವಯೋಗಿಗಳು ಸೇರಿದಂತೆ ನಾಡಿನ ಅನೇಕ ಜನ ಪೂಜ್ಯರು ಉಪಸ್ಥಿತರಿದ್ದರು.
ಬೆಳಗಾವಿಯ ಹಿರಿಯ ಪತ್ರಕರ್ತರಾದ ಎಲ್ ಎಸ್ ಶಾಸ್ತ್ರಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದ ಆಯೋಜಕರಾದ ಎಸ್ ಎಸ್ ಪಾಟೀಲ ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದರಾದ ರಮೇಶ ಕೋರಿಶೆಟ್ಟಿ ಹಾಗೂ ಸಿದ್ದರಾಮಪ್ಪ ಸರಸಂಬಿ,ರಾಜ್ಯ ಪ್ರಶಸ್ತಿ ಹಾಗೂ ರಾಷ್ಟ್ರ ಪ್ರಶಸ್ತಿ ಮುರಿಗೆಪ್ಪ ಹಡಪದ ಸೇಡಂ ಅವರಿಗೆ ನೀಡಲಾಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ ಅನೇಕ ಜನರಿಗೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.