ಸುರಪುರ:ಇಲ್ಲಿಯ ಕನ್ನಡ ಸಾಹಿತ್ಯ ಸಂಘದ ವತಿಯಿಂದ ಹಮ್ಮಿಕೊಂಡಿರುವ ನಾಡಹಬ್ಬದ ಅಂಗವಾಗಿ ನಡೆದ ನಾಡದೇವಿಯ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಚಾಲನಾ ಸಮಾರಂಭದಲ್ಲಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಭಾಗವಹಿಸಿ ನಾಡದೇವಿಗೆ ಪೂಜೆ ಸಲ್ಲಿಸಿ ನಂತರ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.
ನಾಡದೇವಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಶಾಸಕರು,ಕನ್ನಡ ಸಾಹಿತ್ಯ ಸಂಘ ಪ್ರತಿ ವರ್ಷವೂ ನಡೆಸಿಕೊಂಡು ಬರುತ್ತಿರುವ ಈ ನಾಡಹಬ್ಬ ಕಾರ್ಯಕ್ರಮ ಗತಕಾಲವನ್ನು ನೆನಪಿಸುತ್ತದೆ,ಇದಕ್ಕೆ ನಮ್ಮ ಮಾಜಿ ಶಾಸಕರಾಗಿದ್ದ ರಾಜಾ ಮದನಗೋಪಾಲ ನಾಯಕರು ನಡೆಸಿಕೊಂಡು ಬಂದಿರುವ ಈ ಕಾರ್ಯಕ್ರಮ ಇನ್ನೂ ನೂರಾರು ವರ್ಷಗಳು ಹೀಗೆ ಆಚರಿಸುತ್ತಿರೋಣ ಎಂದರು.
ಮೆರವಣಿಗೆಗೆ ಚಾಲನೆ ನಂತರದಲ್ಲಿ ವಿವಿಧ ಕಲಾ ತಂಡಗಳ ಪ್ರದರ್ಶನ,ಶಾಲಾ ಮಕ್ಕಳ ಮೇಳಗಳ ಕಲಾ ಪ್ರದರ್ಶನ ಹಾಗೂ ನಗರದ ವಿವಿಧ ಶಾಲೆಗಳಿಂದ ನಿರ್ಮಿಸಲಾಗಿದ್ದ ಸ್ತಬ್ಧ ಚಿತ್ರಗಳ ಮೆರವಣಿಗೆ ಗರುಡಾದ್ರಿ ಕಲಾ ಮಂದಿರದ ವರೆಗೆ ನಡೆಯುತ್ತಿದ್ದರೆ ನೋಡುಗರ ಗಮನ ಸೆಳೆದವು.ನಗರದ ಪ್ರಮುಖ ಬೀದಿಗಳಲ್ಲಿ ನಡೆಯುತ್ತಿದ್ದ ಮೆರವಣಿಗೆ ನೋಡಲು ಜನರು ಸಾಲುಗಟ್ಟಿ ನಿಂತಿದ್ದು ಕಂಡುಬಂತು.
ಮೆರವಣಿಗೆಯಲ್ಲಿ ನಾಡಹಬ್ಬ ಉತ್ಸವ ಸಮಿತಿ ಗೌರವಾಧ್ಯಕ್ಷ ರಾಜಾ ಪಾಮನಾಯಕ,ಅಧ್ಯಕ್ಷ ರಾಜಾ ಮುಕುಂದ ನಾಯಕ,ಕಲಬುರ್ಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ:ಸುರೇಶ ಸಜ್ಜನ್,ನಯೋಪ್ರಾ ಅಧ್ಯಕ್ಷ ಪ್ರಕಾಶ ಸಜ್ಜನ್,ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ,ಬಸವರಾಜಪ್ಪ ನಿಷ್ಠಿ ದೇಶಮುಖ,ಮಲ್ಲಣ್ಣ ಸಾಹು ಮುಧೋಳ,ಗೋಪಾಲದಾಸ್ ಲಡ್ಡಾ,ನಬಿಲಾಲ ಮಕಾಂದಾರ,ಜಯಲಲಿತಾ ಪಾಟೀಲ್,ಪ್ರಕಾಶ ಗುತ್ತೇದಾರ,ಸೋಮರಾಯ ಶಖಾಪುರ,ಮನೋಹರ ಕುಂಟೋಜಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.