ಶಹಾಪುರ : 26 : ಬಸವ ಪರಂಪರೆಯನ್ನು ಮುಂದುವರೆಸಿಕೊಂಡು ಬಂದ ಜೇವರ್ಗಿಯ ಷಣ್ಮುಖ ಶಿವಯೋಗಿಗಳು ಹನ್ನೆರಡನೆಯ ಶತಮಾನದ ಶರಣರ ಚಿಂತನೆಗಳು ಮುಂದುವರೆದ ರೂಪವಾಗಿದ್ದರು. ಷಣ್ಮುಖ ಶಿವಯೋಗಿಗಳ ವಚನಗಳಲ್ಲಿ ನಮ್ಮ ಜೀವನ ಕೌಶಲ್ಯದ ತಿರುಳಿದೆ. ಜೀವನವನ್ನು ಹೇಗೆ ಬದುಕಬೇಕು ಎಂಬ ದಿವ್ಯ ಔಷಧ ಇದೆ. ಮಂತ್ರ ಇದೆ. ಬಸವಾದಿ ಪ್ರಮಥರ ಜೀವನ ಹಾಗೂ ಸಾಹಿತ್ಯವನ್ನು ತಮ್ಮ ಚಿದ್ಗರ್ಭದಲ್ಲಿ ಇಡುಗಿರಿಸಿಕೊಂಡು ಅನುಭಾವಿಯಾಗಿ ಮಾರ್ಪೊಳೆದ ಪವಾಡ ಜೇವರ್ಗಿಯಲ್ಲಿ ಘಟಿಸಿದೆ ಎಂದು ಅನುಭಾವಿ ಗುರುಶಾಂತಪ್ಪ ಚಿಂಚೋಳಿ ಅವರು ಮಾರ್ಮಿಕವಾಗಿ ಬಣ್ಣಿಸಿದರು.
ನಗರದ ಬಸವಮಾರ್ಗ ಪ್ರತಿಷ್ಠಾನ ಸತ್ಯಂಪೇಟೆ ಹಾಗೂ ಜಾಗತಿಕ ಲಿಂಗಾಯತ ಮಹಾಸಭೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ, ಲಿಂಗಣ್ಣ ಸತ್ಯಂಪೇಟೆ ವೇದಿಕೆಯ ಬಸವ ಬೆಳಗು ಮನೆಯಂಗಳದಲ್ಲಿ ಜರುಗಿದ ತಿಂಗಳ ಬಸವ ಬೆಳಕು -104 ಸಭೆಯಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು ಷಣ್ಮುಖ ಶಿವಯೋಗಿಗಳು ಭಕ್ತ ಪರಂಪರೆಯ ಮಲಶೆಟ್ಟೆಪ್ಪ ದೊಡ್ಡಮ್ಮ ದಂಪತಿಯ ಹಿರೇಗೌಡರ ಮನೆತನದಿಂದ ಬಂದವರು. ಚರ ಜಂಗಮನಾಗಿ ನಾಡಿಗೆ ನೀಡಿದ ಕೊಡುಗೆ ಅತ್ಯಪೂರ್ವವಾದುದು. ಯಾರು ಅಂಗಗುಣಗಳನ್ನು ಅಳಿದು ಲಿಂಗಗುಣಗಳನ್ನು ಅಳವಡಿಸಿಕೊಳ್ಳುವವರೆ ಶರಣರು. ಮಹಾತ್ಮರಾಗುತ್ತಾರೆ. ನಮ್ಮ ನಿಮ್ಮಂತೆ ಶ್ರೀಸಾಮಾನ್ಯರಾಗಿದ್ದ ಷಣ್ಮುಖ ಶಿವಯೋಗಿಗಳು 17 ನೇ ಶತಮಾನದಲ್ಲಿ ಹನ್ನೆರಡನೆಯ ಶತಮಾನದ ಶರಣರಂತೆಯೆ ಜೀವನವನ್ನು ಸವೆಯೆ ಶಿವಯೋಗಿಗಳಾದರು. ಇಷ್ಟಲಿಂಗ ಪೂಜೆಯ ಮೂಲಕ ಶಿವಯೋಗ ಸಿದ್ಧಿಯನ್ನು ಪಡೆದುಕೊಂಡಿದ್ದ ಷಣ್ಮುಖ ಶಿವಯೋಗಿಗಳು ಜನ ಸಾಮಾನ್ಯರಿಗೆ ತಾವು ಕಂಡ ಬೆಳಗನ್ನು ಹಂಚಿದರು. ಶಿವಯೋಗಿಗಳ ವಚನ ಜನ ಸಾಮಾನ್ಯರೂ ಸಹಿತ ಓದಿ ಅರ್ಥ ಮಾಡಿಕೊಳ್ಳುವಷ್ಟು ಸುಲಭವಾಗಿವೆ.
ವಚನ ಸಾಹಿತ್ಯದ ಹಾಗೂ ಶರಣರ ಜೀವನ ಕಥನಗಳಿಂದ ಪ್ರಭಾವಿತರಾದ ಷಣ್ಮುಖ ಶಿವಯೋಗಿಗಳು ಜಡದ ಜೀವನವನ್ನು ಆಯ್ದುಕೊಳ್ಳದೆ ಜಗದ ಜಂಗಮನಾಗುವ ಹಂಬಲ ಹೊಂದುತ್ತಾರೆ. ಜಗದ ಜನಗಳ ಮನದ ಅಂಧಕಾರವನ್ನು ಹೊಗಲಾಡಿಸಿ ಅಲ್ಲಿ ಅರಿವಿನ ದೀವಿಗೆಯನ್ನು ಹಚ್ಚಲು ಮುಂದಾಗುತ್ತಾರೆ. ಪರಶಿವನ ರೂಪಾದ ಇಷ್ಟಲಿಂಗವನ್ನು ಪೂಜಿಸುತ್ತ ಶಿವೈಕ್ಯ ಪದವಿಯನ್ನು ಪಡೆಯುತ್ತಾರೆ. ತಮ್ಮ ಅನುಭಾವದ ನೆಲೆಯಲ್ಲಿ ಶಿವನೆ ಬಸವ, ಬಸವನೇ ಶಿವ ಎಂಬ ತಾದ್ಯಾತ್ಮವನ್ನು ಕಂಡುಕೊಳ್ಳುತ್ತಾರೆ. ಸಮಾಜದಲ್ಲಿನ ಮೌಢ್ಯ,ಕಂದಾಚಾರ, ಜಾತಿಯತೆಗಳನ್ನು ಖಂಡಿಸಿದ್ದರಿಂದ ಸಹಜವಾಗಿಯೆ ಷಣ್ಮುಖ ಶಿವಯೋಗಿಗಳಿಗೆ ವೈದಿಕ ಪರಂಪರೆಯ ಪಟ್ಟಭದ್ರರು ಕಾಡಿಸುತ್ತಾರೆ. ಪೀಡಿಸುತ್ತಾರೆ. ಆದರೂ ಆ ಕಷ್ಟಕೋಟಲೆಗಳಿಗೂ ಬೆದರದೆ ಬೆಚ್ಚದೆ ನಮ್ಮೆಲ್ಲರಿಗೂ ಮಾದರಿಯಾಗುವಂತಹ ಶರಣ ಜೀವನವನ್ನು ರೂಪಿಸಿಕೊಂಡು ನಮ್ಮೆಲ್ಲರ ಬಾಳಿಗೆ ಬೆಳಕಾದ ಮಹಾತ್ಮ ಎಂದವರು ವಚನಗಳ ಮೂಲಕ ಮನಂಬುಗುವಂತೆ ಸಭೆಗೆ ವಿಸ್ತರಿಸಿದರು.
ಸಭೆಯನ್ನು ಉದ್ಘಾಟನೆ ಮಾಡಿದ ಡಾ.ಸಾಯಬಣ್ಣ ಹವಾಲ್ದಾರ ಮಾತನಾಡಿ ಬಸವಣ್ಣನವರ ಭೂಮ ವ್ಯಕ್ತಿತ್ವ ಅರಿಯದ ನಾವುಗಳು ಅವರನ್ನು ಕುಬ್ಜಗೊಳಿಸಲು ಹೊರಡಿದ್ದೇವೆ. ಬಸವಣ್ಣನವರಲ್ಲಿ ಕೇವಲ ಆಧ್ಯಾತ್ಮೀಕ ವಿಷಯವಷ್ಟೆ ಅಲ್ಲ. ಅವರ ವಚನಗಳಲ್ಲಿ ಕ್ರಾಂತಿಯ ಕಿಡಿ ಇದೆ. ಅಂತಃಕರಣದ ಸೆಲೆ ಇದೆ. ಮಾನಸಿಕ ನೆಮ್ಮದಿಗೆ ಬೇಕಾದ ವಿಷಯ ವಸ್ತು ಇವೆ. ಬೌದ್ಧಿಕ ಚಿಂತನೆಗೆ ಬೇಕಾದ ಹೊಳಹುಗಳಿವೆ. ವಿದೇಶಿಯ ಚಿಂತಕರನ್ನು ಮೀರಿಸುವ ಅದಮ್ಯವಾದ ಶಕ್ತಿ ಬಸವಣ್ಣನವರು. ಅವರು ಕನ್ನಡಿಗರಿಗಷ್ಟೇ ಹೆಮ್ಮೆ ಅಲ್ಲ. ಇಡೀ ವಿಶ್ವಕ್ಕೆ ಮಾದರಿಯಾಗಬೇಕಾದವರು ಎಂದು ವಿವರಿಸಿದರು.
ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಹಣಮಂತ ಗುರಿಕಾರ ಬಸವಮಾರ್ಗ ಪ್ರತಿಷ್ಠಾನ ಜನ ಜೀವನಕ್ಕೆ ಒಳ್ಳೆಯದಾಗುವ ಜಾತಿರಹಿತವಾದ ಭಾವನೆಗಳನ್ನು ಸಮಾಜದಲ್ಲಿ ಮೂಡಿಸುತ್ತಿವೆ. ಜನ ಸಾಮಾನ್ಯರ ಅಣ್ಣನವರ ಅಂತಃಕರಣವನ್ನು ಅರಿತುಕೊಂಡು ಬಸವ ಬೆಳಕು ಎಲ್ಲರ ಎದೆಯೊಳಗೂ ತನ್ನ ಬೆಳಕು ಮೂಡಿಸುತ್ತಿದೆ ಎಂದವರು ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರತಿಷ್ಠಾನದ ವಿಶ್ವಾರಾಧ್ಯ ಸತ್ಯಂಪೇಟೆ ಲಿಂಗಾಯತ ಮಠಾಧೀಶರನ್ನು ಮೂದಲಿಸುವುದನ್ನು ಬಿಟ್ಟು ಮಠಾಧೀಶರಿಗೆ ಮೊದಲು ಮದುವೆ ಮಾಡಿಸಿ ಧಾರ್ಮಿಕ ಕಾರ್ಯಕ್ಕೆ ಅಣಿಯಾಗುವಂತೆ ಮನವೊಲಿಸಬೇಕು. ನಿದ್ರೆ ನೀರಡಿಕೆ ಹಸಿವು ಹೇಗೆ ಸಹಜವೋ ಪ್ರತಿಯೊಂದು ಪ್ರಾಣಿಗೂ ಮೈಥುನವೂ ಅಷ್ಟೇ ಸಹಜ. ಅದಕ್ಕೆ ಜಾಸ್ತಿ ಮಹತ್ವ ಕೊಡಬಾರದು. ಇಂದ್ರಿಂಗಳನ್ನು ಹಿಡಿದುಡುವುದರಿಂದ ಪಂಚೇಂದ್ರಿಯಂಗಳು ತಿಕ್ಕಿ ಮುಕ್ಕಿ ಕಾಡುತ್ತವೆ. ಬಸವಾದಿ ಶಿವ ಶರಣರು ಸನ್ಯಾಸವೆ ಶ್ರೇಷ್ಠ ಎಂದು ಯಾವ ವಚನದಲ್ಲಿಯೂ ಹೇಳಿಲ್ಲ. ಸನ್ಯಾಸವೆಂಬುದು ಐಚ್ಚಿಕವಾಗಬೇಕೆ ಹೊರತು, ಕಡ್ಡಾವಾಗಿ ಅಲ್ಲ ಎಂಬ ಅರಿವನ್ನು ಭಕ್ತರು ತಂದುಕೊಳ್ಳಬೇಕು. ದೇವಾನು ದೇವತೆಗಳು ಸಹ ಮದುವೆಯಾಗಿದ್ದರು ಎಂಬುದನ್ನು ಮರೆಯಬಾರದು. ಅವರಿಗೂ ಮಕ್ಕಳು ಮರಿ ಸಂಸಾರ ಇದ್ದದ್ದನ್ನು ನೋಡಿಯಾದರೂ ಲಿಂಗಾಯತರು ಬದಲಾಗಬೇಕು. ಇಲ್ಲದಿದ್ದರೆ ಮಠಾಧೀಶರು ವಾಸವಾಗಿರುವ ಮಠಗಳು ಬೇರೆ ಅನೈತಿಕ ಚಟುವಟಿಕೆಯ ತಾಣವಾಗಬಹುದು ಎಂದು ವಿಷಾದಿಸಿದರು.
ಆರಂಭದಲ್ಲಿ ಬಸವರಾಜ ಸಿನ್ನೂರ ಸ್ವಾಗತಿಸಿದರು. ಕು. ಸಾಕ್ಷಿ ಬಸವರಾಜ ಹುಣಸಗಿ ವಚನ ಪ್ರಾರ್ಥನೆ ಮಾಡಿದರು. ಶಿವಣ್ಣ ಇಜೇರಿ ನಿರೂಪಿಸಿದರು. ಸಭೆಯಲ್ಲಿ ಗುಂಡಪ್ಪ ತುಂಬಗಿ, ಡಾ. ಎಸ್.ಎಸ್.ನಾಯಕ, ಡಾ.ಭೀಮರಾಯ ಲಿಂಗೇರಿ, ಸಲಾದಪುರ ಶರಣಪ್ಪ, ಬಸವರಾಜ ಅರುಣಿ, ಅಡಿವೆಪ್ಪ ಜಾಕಾ, ಮಲ್ಲಿನಾಥ ಪಾಟೀಲ, ಬಸವರಾಜ ಹೇರುಂಡಿ, ಮಹಾಂತೇಶ ಮುಡಬೂಳ, ಶಿವಯೋಗಪ್ಪ ಹವಾಲ್ದಾರ, ಗುಂಡಣ್ಣ ಕಲಬುರ್ಗಿ, ಭೀಮಣ್ಣಗೌಡ, ಶಹಾಪುರ, ಸುರಪುರ, ಯಾದಗಿರ, ಜೇವರ್ಗಿ ಹಾಗೂ ಕಲಬುರ್ಗಿಯ ಬಸವ ಚಿಂತನೆಗಳ ನೂರಾರು ಜನ ಆಸಕ್ತರು ಸಭೆಯಲ್ಲಿ ಭಾಗವಹಿಸಿದ್ದರು. ಕೊನೆಯಲ್ಲಿ ಅಮೋಘ ಸತ್ಯಂಪೇಟೆ ವಂದನೆಗಳನ್ನು ಸಲ್ಲಿಸಿದರು.