ಕಲಬುರಗಿ: ಬೀದರ ಜಿಲ್ಲೆಯ ಮಹಾರಾಷ್ಟ್ರದ ಗಡಿಯ ಗ್ರಾಮ ಹೊನ್ನಳ್ಳಿಯಲ್ಲಿ ಗಾಂಜಾ ಮಾರಾಟಗಾರರಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಗಂಭೀರ ಗಾಯಗಳಿಂದ ನರಳುತ್ತಿರುವ ಕಮಲಾಪುರ ಸಿಪಿಐ ಶ್ರೀಮಂತ ಇಲ್ಲಾಳ ಅವರಿಗೆ ಉನ್ನತ ಮಟ್ಟದ ಚಿಕಿತ್ಸೆ ಕೊಡಿಸಬೇಕೆಂದು ಸಿಪಿಐಎಂ ಪಕ್ಷದ ಜಿಲ್ಲಾ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಪಟ್ಟಭದ್ರ ಶಕ್ತಿಗಳ ಬೆಂಬಲವಿಲ್ಲದೆ ಗಾಂಜಾ ಮತ್ತಿತರ ಮಾದಕ ವಸ್ತುಗಳ ದಂಧೆ ನಡೆಯುವುದಿಲ್ಲ. ರಾಜಾರೋಷವಾಗಿ ಗಾಂಜಾ ಬೆಳೆಯುವುದು ಮತ್ತು ನಿರ್ಭಯದಿಂದ ಹರಾಜು ಹಾಕಿ ವ್ಯಾಪಾರ ಮಾಡುವುದು ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದು ತೋರುತ್ತದೆ. ಹೀಗೆಂದಾಗ ಚುನಾಯಿತ ಪ್ರತಿನಿಧಿಗಳ ಅಧಿಕಾರಸ್ಥರ ಆಸರೆ ಇಲ್ಲದೆ ಇಂತಹ ಸಮಾಜಘಾತುಕ ಚಟುವಟಿಕೆ ನಡೆಯುವುದಿಲ್ಲ. ಸಮಾಜವನ್ನು ಅಪರಾಧಿಕರಣದತ್ತ ತಳ್ಳುವ ಈ ನಶೆಬಾಜಿತನಕ್ಕೆ ಕಡಿವಾಣ ಹಾಕಲೆಂದು ಕೆಲವು ಪೊಲೀಸ್ ಅಧಿಕಾರಿಗಳು ಮುಂದಾದರೆ ಅವರುಗಳ ಮೇಲೆಯೇ ಗುಂಪುಗಟ್ಟಿ ಹಲ್ಲೆ ಮಾಡುವ ಅರ್ಥವೇನೆಂದರೆ ಅಷ್ಟರ ಮಟ್ಟಿಗೆ ಸಮಾಜಘಾತುಕ ಶಕ್ತಿಗಳು ಕೊಬ್ಬಿವೆ ಮತ್ತು ಅವರಿಗೆ ಈವರೆಗೆ ಅಧಿಕಾರಸ್ಥ ನೆಲೆಯಿಂದ ರಕ್ಷಣೆ ಬೆಂಬಲ ದೊರೆಯುತಿದೆ ಆರೋಪಿಸಿದ್ದಾರೆ.
23 ರಂದು ಅತ್ತ ಮಹಾರಾಷ್ಟ್ರದ ಪೋಲಿಸರಿಗೂ ಬರಲು ಹೇಳಿ ಸಿಪಿಐ ಶ್ರೀಮಂತ ಇಲ್ಲಾಳ ನೇತೃತ್ವದಲ್ಲಿ ಪೋಲಿಸ್ ತಂಡವು ಗಾಂಜಾ ಬೆಳೆದು ದಂಧೆ ಮಾಡುವ ಸ್ಥಳಕೆ ತೆರಳಿದೆ. ಮಹಾರಾಷ್ಟ್ರದ ಪೋಲಿಸರು ಸಮಯಕ್ಕೆ ಸರಿಯಾಗಿ ಬಾರದೆ ನಾಲ್ಕೈದು ತಾಸು ತಡ ಮಾಡಿ ಬಂದಿದ್ದಾರೆ. ಇದು ತೀವ್ರ ಅನುಮಾನಕ್ಕೆಡೆ ಮಾಡುವ ಸಂಗತಿಯಾಗಿದೆ. ಆದ್ದರಿಂದ ಹಲ್ಲೆಯ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು. ಪೋಲಿಸ್ ಅಧಿಕಾರಿಗಳ ಮೇಲೆಯೇ ಈ ಪ್ರಮಾಣದ ಮಾರಣಾಂತಿಕ ಹಲ್ಲೆ ನಡೆದರೆ ಸಾಮಾನ್ಯ ಜನರ ಗತಿ ಏನು? ನಶೆದಂಧೆಖೋರರಿಗೆ ಸಮಾಜ ಹೆದರುವಂತೆ ಮಾಡುವ ಸಂಚು ಯಶಸ್ವಿಯಾಗಲು ಬಿಟ್ಟರೆ ಭವಿಷ್ಯದಲ್ಲಿ ಅಪಾಯಕಾರಿ ದಿನಗಳು ಎದುರಾಗುತ್ತವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಬಹಿರಂಗವಾಗಿಯೇ ಗಾಂಜಾ ಬೆಳೆದು ದಂಧೆ ಮಾಡುವುದಕ್ಕೆ ಆ ಪ್ರದೇಶದ ಶಾಸಕ ಮತ್ತು ಸಂಸದರ ಕೃಪಕಟಾಕ್ಷ ಇಲ್ಲವೆಂದು ಹೇಗೆ ಹೇಳುವುದು? ಇಲ್ಲವೆಂದಾದರೆ ಇಂತಹ ಘಾತುಕ ಚಟುವಟಿಕೆಗಳು ಬಹಿರಂಗವಾಗಿಯೇ ನಡೆಯಲು ಹೇಗೆ ಸಾಧ್ಯ? ಪಟ್ಟಭದ್ರರ ದುಷ್ಟಾಟದಲ್ಲಿ ಕರ್ತವ್ಯ ಪ್ರಜ್ಞೆಯುಳ್ಳ ಅಧಿಕಾರಿಗಳು ಬಲಿಯಾಗಬೇಕೆ? ಇದು ಶಾಂತಿ ಸುವ್ಯವಸ್ಥೆ ಕಾಪಾಡಲಿಕ್ಕಿರುವ ಪೋಲಿಸ್ ಇಲಾಖೆಯನ್ನು ದುರ್ಬಲಗೊಳಿಸುವ ಸಂಚು ಇದಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಬಲಿ ಮಾಡುವುದೆಂದರೆ ಏನರ್ಥ? ಆರಕ್ಷಕರಿಗೇ ರಕ್ಷಣೆ ಇಲ್ಲವೆಂದಾದರೆ ಸಾಮಾನ್ಯ ಜನರಿಗೆ ರಕ್ಷಿಸುವವರಾರು? ಅಪರಾಧಿ ಲೋಕದೊಳಗಿನ ಎಲ್ಲ ಶಕ್ತಿಗಳನ್ನು ಮಟ್ಟ ಹಾಕಲು ಇಲಾಖೆಯು ಸಜ್ಜಾಗಬೇಕು. ಸಮಾಜವನ್ನು ಅಪರಾಧಿ ದಿಶೆಯತ್ತ ತಳ್ಳಲು ಪ್ರಜ್ಞಾವಂತರು ಅವಕಾಶ ಕೊಡಬಾರದು. ಕಾನೂನು ಪರಿಪಾಲನೆಯ ಸುಭದ್ರವಾದ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಈ ಸಂಚಿನಲ್ಲಿ ಯಾರೇ ಇದ್ದರೂ ಅಂಥವರನ್ನು ಪತ್ತೆಹಚ್ಚಿ ಬಂಧಿಸಿ ಶಿಕ್ಷೆಗೆ ಗುರಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ನಗರದಲ್ಲಿಯೂ ಡ್ರಗ್ ಮಾಫಿಯಾ ಎಗ್ಗಿಲ್ಲದೆ ಹರಡುತ್ತಿದೆ. ಯುವ ಸಮೂಹವನ್ನು ಗುರಿಯಾಗಿಸಿ ನಡೆಯುತ್ತಿರುವ ಮಾದಕ ವ್ಯಾಪಾರದ ಹಿಂದೆ ಎಂತಹದೇ ದೊಡ್ಡ ವ್ಯಕ್ತಿಗಳಿದ್ದರೂ ಪೋಲಿಸ್ ಇಲಾಖೆಯು ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.