ಕಲಬುರಗಿ; ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಕಮಲಾಪುರ ತಾಲೂಕಿನ ಪಟ್ಟಣ ವಲಯದ ಕೆರೆಭೋಸಗಾ ಗ್ರಾಮದ ಮಾಳಿಂಗರಾಯ ಜ್ಞಾನ ವಿಕಾಸ ಕೇಂದ್ರದಲ್ಲಿ ಗುರುವಾರ ಹೋಲಿಗೆ ತರಬೇತಿ ಉದ್ಘಾಟನೆ ಕಾರ್ಯಕ್ರಮ ಜರುಗಿತು.
ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರತಿ ತಿಂಗಳು ಜ್ಞಾನ ವಿಕಾಸ ಕೇಂದ್ರದಿಂದ ಸಿಗುವ ಸೌಲಭ್ಯಗಳ ಬಗ್ಗೆ ವಿವರಣೆ ನೀಡಿದರು. ಮಕ್ಕಳ ಶಿಕ್ಷಣ, ವೈಯಕ್ತಿಕ ಆರೋಗ್ಯ, ಶುಚಿತ್ವ, ಸುತ್ತಮುತ್ತಲಿನ ಪರಿಸರ ಸಂರಕ್ಷಣೆ, ಕುಟುಂಬ ನಿರ್ವಹಣೆ, ಆರ್ಥಿಕ ಸ್ವಾವಲಂಬನೆ ಮತ್ತು ಸ್ವಯಂ ಉದ್ಯೋಗದ ಬಗ್ಗೆ ತಿಳಿಹೇಳಿದರು. ಮೂರು ತಿಂಗಳ ಹೋಲಿಗೆ ತರಬೇತಿ ಪಡೆದುಕೊಂಡು ಸ್ವಯಂ ಉದ್ಯೋಗಿಗಳಾಗಬೇಕು. ಮುಂದಿನ ದಿನಗಳಲ್ಲಿ ಅಗತ್ಯ ಆರ್ಥಿಕ ನೆರವು ನೀಡಲು ಸಂಸ್ಥೆ ಬದ್ಧವಾಗಿದೆ ಎಂದು ತಿಳಿಸಿದರು.
ಪತ್ರಕರ್ತ ಭೀಮಾಶಂಕರ ಫಿರೊಜಾಬಾದ ಮಾತನಾಡಿ, ಧರ್ಮಸ್ಥಳ ಯೋಜನೆಯು ಕಟ್ಟಕಡೆಯ ಸಾಮಾನ್ಯ ವ್ಯಕ್ತಿಯನ್ನು ಗುರುತಿಸಿ, ಶಿಕ್ಷಣ, ಆರೋಗ್ಯ, ಸ್ವಯಂ ಕೌಶಲ್ಯ ಮತ್ತು ಆರ್ಥಿಕ ಅಭಿವೃದ್ಧಿ ಬಗ್ಗೆ ತಿಳಿಸುತ್ತಿರುವ ಕಾರ್ಯ ಶ್ಲಾಘನೀಯ. ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ ಹೋಲಿಗೆ ತರಬೇತಿ, ಅಗರಬತ್ತಿ ತಯಾರಿಕೆ, ಆಹಾರ ಸಂಸ್ಕರಣೆ ಹೀಗೆ ಅನೇಕ ತರಬೇತಿ ನೀಡಿ ಆರ್ಥಿಕವಾಗಿ ಮೇಲೆತ್ತುವ ಕೆಲಸ ಮಾಡುತ್ತಿದೆ ಎಂದು ಬಣ್ಣಿಸಿದರು.
ಕಮಲಾಪುರ ತಾಲೂಕಿನ ಯೋಜನಾಧಿಕಾರಿ ಕಲ್ಲನಗೌಡ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಕು. ಕವಿತಾ ಕೌಜಲಗಿ, ಹೋಲಿಗೆ ತರಬೇತಿಯ ಶಿಕ್ಷಕಿ ಪ್ರೀತಿ, ಸೇವಾಪ್ರತಿನಿಧಿ ಶಿಲ್ಪಾ ಸೇರಿದಂತೆ ಮಹಿಳೆಯರು, ಶಿಬಿರಾರ್ಥಿಗಳು ಭಾಗವಹಿಸಿದ್ದರು.