ಕಲಬುರಗಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ವಿಕಲಚೇತನ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕೆಂಬ ಉದ್ದೇಶದಿಂದ ಚುನಾವಣಾ ಆಯೋಗವು ವಿಕಲಚೇತನ ಮತದಾರರನ್ನು ಮನೆಯಿಂದ ಮತಗಟ್ಟೆಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡುತ್ತಿದ್ದು, ಇದರ ಉಪಯೋಗ ವಿಕಲಚೇತನ ಮತದಾರರು ಪಡೆಯಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪಿ. ರಾಜಾ ತಿಳಿಸಿದರು.
ಅವರು ಮಂಗಳವಾರ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಫ್ಯಾಶನ್ ಸ್ವಯಂ ಸೇವಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ವಿಕಲಚೇತನ ಮತದಾರರಲ್ಲಿ ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ ಜಾಗೃತಿ ವಾಹನವನ್ನು ಕಲಬುರಗಿ ಕೇಂದ್ರ ಬಸ್ ನಿಲ್ದಾಣದ ಎದುರುಗಡೆ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿರುವ ಎಲ್ಲ ವಿಕಲಚೇತನ ಮತದಾರರನ್ನು ಮತಗಟ್ಟೆಗೆ ಕರೆದುಕೊಂಡು ಹೋಗಲು ಚುನಾವಣಾ ಆಯೋಗದ ವತಿಯಿಂದ ವಾಹನದ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗಳಲ್ಲಿ ಗಾಲಿ ಕುರ್ಚಿ ವ್ಯವಸ್ಥೆ ಸಹಿತ ಇದ್ದು, ವಿಕಲಚೇತನ ಮತದಾರರು ಸರ್ಕಾರಿ ವಾಹನದಲ್ಲಿ ಮತಗಟ್ಟೆಗೆ ಆಗಮಿಸಿದಾಗ ಪ್ರಥಮಾಧ್ಯತೆ ಮೇರೆಗೆ ಸ್ವಯಂ ಸೇವಕರಿಂದ ಮತದಾನ ಮಾಡಿಸಲಾಗುವುದು. ಜಿಲ್ಲೆಯ ಎಲ್ಲ ವಿಕಲಚೇತನ ಮತದಾರರು ಕಡ್ಡಾಯ ಮತದಾನ ಮಾಡುವ ಬಗ್ಗೆ ನಿಗಾವಹಿಸಲಾಗುತ್ತಿದ್ದು, ಎಲ್ಲ ವಿಕಲಚೇತನ ಮತದಾರರು ಚುನಾವಣಾ ಆಯೋಗ ನೀಡಿರುವ ಸವಲತ್ತನ್ನು ಸದುಪಯೊಗಪಡಿಸಿಕೊಂಡು ಕಡ್ಡಾಯ ಮತದಾನ ಮಾಡಬೇಕು. ಪ್ರತಿಯೊಂದು ಮತವು ಮಹತ್ವಪೂರ್ಣವಾಗಿದ್ದು, ನಮ್ಮ ಒಂದು ಮತದಿಂದ ಯಾವ ದೊಡ್ಡ ಬದಲಾವಣೆ ಆಗಲಿದೆ ಎಂಬ ಮನೋಭಾವವನ್ನು ವಿಕಲಚೇತನ ಮತದಾರರು ತೊರೆದು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಬೇಕೆಂದರು.
ಮಹಾನಗರ ಪಾಲಿಕೆ ಆಯುಕ್ತೆ ಬಿ. ಫೌಜಿಯಾ ತರನ್ನುಮ್ ಮಾತನಾಡಿ, ಎಲ್ಲ ಮತಗಟ್ಟೆಗಳಲ್ಲಿ ವಿಕಲಚೇತನ ಹಾಗೂ ಹಿರಿಯ ನಾಗರಿಕರಿಗಾಗಿ ರ‍್ಯಾಂಪ್ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರು, ನೆರಳಿನಂತಹ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಏಪ್ರಿಲ್ ೨೩ರಂದು ನಡೆಯುವ ಮತದಾನ ದಿನದಂದು ಬಿಸಿಲು ಹೆಚ್ಚಿಗೆ ಇದ್ದರೂ ಸಹಿತ ಮಹಿಳೆಯರೆಲ್ಲರೂ ಕಡ್ಡಾಯವಾಗಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಬೇಕು. ಮಹಿಳೆಯರಿಗೆ ಇರುವ ಮತದಾನ ಹಕ್ಕನ್ನು ಚಲಾಯಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಫ್ಯಾಶನ್ ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥ ಜಾಕೀರ, ವಿಕಲಚೇತನರು ಪಾಲ್ಗೊಂಡಿದ್ದರು.