ಸುರಪುರ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕ್ಷೇತ್ರದಲ್ಲಿ ಅಪಾರ ಪ್ರಮಾಣದಲ್ಲಿ ನಷ್ಟುವುಂಟಾಗಿದ್ದು,ಮಳೆ ಹಾನಿ ಕುರಿತು ಸಮೀಕ್ಷೆಯಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎನ್ನುವ ದೂರುಗಳು ಕೇಳಿ ಬರುತ್ತಿವೆ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಅಧಿಕಾರಿಗಳ ತಾರತಮ್ಯದ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮವಹಿಸಲು ಒತ್ತಾಯಿಸುತ್ತಾ, ಮತಕ್ಷೇತ್ರದಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹತ್ತಿ, ತೊಗರಿ ಸೇರಿ ಇನ್ನಿತರ ಬೆಳೆಗಳಿಗೆ ರೋಗವು ಬಂದು ರೈತರಿಗೆ ಅಪಾರ ನಷ್ಟವಾಗಿವೆ ಮತ್ತು ಕ್ಷೇತ್ರದಾದ್ಯಂತ ಅನೇಕ ಮನೆಗಳು ಬಿದ್ದು ಜನರು ಕಷ್ಟದಲ್ಲಿ ಜೀವನ ಸಾಗಿಸುವಂತಾಗಿದೆ.
ನಷ್ಟವಾದವರನ್ನು ಗುರುತಿಸಬೇಕಾದ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸಿ ಬೆಳೆ ಹಾನಿಯಾದವರಿಗೆ ಪರಿಹಾರ ನೀಡದೆ ಏನೂ ನಷ್ಟವಾಗದೇ ಇದ್ದವರಿಗೆ ಪರಿಹಾರ ಒದಗಿಸುತ್ತಿದ್ದಾರೆ. ಅಲ್ಲದೆ ಕ್ಷೇತ್ರದಾದ್ಯಂತ ಅನೇಕ ಮನೆಗಳು ಮಳೆಯಿಂದ ಬಿದ್ದಿರುವುದರಿಂದ ಖುದ್ದಾಗಿ ಪರಿಶೀಲಿಸದೆ ನಿಜವಾದ ಸಂತ್ರಸ್ಥರಿಗೆ ಪರಿಹಾರ ಒದಗಿಸುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವುದಾಗಿ ಸಾರ್ವಜನಿಕರಿಂದ ದೂರುಗಳು ಬಂದಿರುತ್ತವೆ.
ಕಾರಣ ಮಳೆಯಿಂದ ಉಂಟಾದ ಬೆಳೆ ಮತ್ತು ಮನೆಗಳ ಹಾನಿಯನ್ನು ಅಧಿಕಾರಿಗಳು ಖುದ್ದಾಗಿ ಪರಿಶೀಲಿಸಿ ತಾರತಮ್ಯ ನೀತಿ ಅನುಸರಿಸದೆ ಕಷ್ಟದಲ್ಲಿರುವ ಜನರಿಗೆ ನ್ಯಾಯುತವಾಗಿ ಪರಿಹಾರವನ್ನು ಅತೀ ಶೀಘ್ರವಾಗಿ ಒದಗಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.