ಕಲಬುರಗಿ: ಜಿಲ್ಲೆಯಲ್ಲಿ ಕಬ್ಬು ಬೆಳೆಯುವ ರೈತರು ಅದನ್ನು ಮಾರಾಟ ಮಾಡುವ ಸಕ್ಕರೆ ಕಾರ್ಖಾನೆಗಳೊಂದಿಗೆÉ ಒಪ್ಪಂದದಂತೆ ಮಾರಾಟ, ಕಬ್ಬಿನ ಹಣ ಪಾವತಿ ಕುರಿತ ದ್ವಿಪಕ್ಷೀಯ ಒಪ್ಪಂದಕ್ಕೆ ಶುಕ್ರವಾರ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲಬುರಗಿ-ಯಾದಗಿರಿ ಡಿ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರು ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಶಾಸಕ ಬಸವರಾಜ ಮತ್ತಿಮೂಡ ಹಾಗೂ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರ ಉಪಸ್ಥಿತಿಯಲ್ಲಿ ಜಿಲ್ಲೆಯ ಎನ್.ಎಸ್.ಎಲ್.ಶುಗರ್ ಕಾರ್ಖಾನೆಯ ಡಿ.ಜಿ.ಎಂ. ಎಂ.ಜಿ.ಅಂಬಿ ಮತ್ತು ರೈತ ಅಪ್ಪಸಾಬ್ ಚಂದ್ರಶ್ಯಾ, ಹವಳಗಾದ ರೇಣುಕಾ ಶುಗರ್ಸ್‍ನ ಡಿ.ಜಿ.ಎಂ. ಬಿ.ಬಿ.ಸೋಮಾ ಮತ್ತು ರೈತ ರಮೇಶ ಹೂಗಾರ ಹಾಗೂ ಚಿಣಮಗೇರಾದ ಕೆ.ಪಿ.ಆರ್.ಶುಗರ್ ಕಂಪನಿಯ ಡಿ.ಜಿ.ಎಂ. ರಾಜಶೇಖರ ಮತ್ತು ರೈತ ಶಾಂತಕುಮಾರ ಅವರುಗಳು ಪರಸ್ಪರ ಸಹಿ ಹಾಕಿ ಒಪ್ಪಂದ ಕರಾರು ಪತ್ರ ವಿನಿಮಯ ಮಾಡಿಕೊಂಡರು.
ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರು, ಈಗಾಗಲೆ ಜಿಲ್ಲೆಯಲ್ಲಿ ಸ್ಪಂದನ ಕಲಬುರಗಿ ಕಾರ್ಯಕ್ರಮದ ಮೂಲಕ ಹೆಸರು ವಾಸಿಯಾಗಿರುವ ದಕ್ಷ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಇಂದು ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕಾರ್ಖಾನೆ ಮತ್ತು ರೈತರ ನಡುವೆ ಕಬ್ಬು ಕಟಾವು, ದರ, ಪಾವತಿ ಹೀಗೆ ಎಲ್ಲದರ ಕುರಿತು ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳುವ ವಿಧಾನ ತಂದಿದ್ದು. ಇದು ರಾಜ್ಯಕ್ಕೆ ಮಾದರಿಯಾಗಿದೆ. ಇದನ್ನು ರಾಜ್ಯದಾದ್ಯಂತ ವಿಸ್ತರಣೆಗೆ ಮುಖ್ಯಮಂತ್ರಿಗಳು ಮತ್ತು ಸಕ್ಕರೆ ಸಚಿವರೊಂದಿಗೆ ಒತ್ತಾಯಿಸುವೆ ಎಂದರು.
ಪ್ರಸ್ತುತ ಪ್ರತಿ ಟನ್ ಕಬ್ಬಿಗೆ 3,100 ರೂ. ಇದ್ದು, ಎರಡ್ಮೂರು ದಿನದಲ್ಲಿ ಮುಖ್ಯಮಂತ್ರಿಗಳು ಕಬ್ಬು ಬೆಳೆಗಾರರೊಂದಿಗೆ ಸಭೆ ನಡೆಸಲಿದ್ದು, ಅಲ್ಲಿ ಹೊಸ ಎಫ್.ಆರ್.ಪಿ. ದರ ನಿಗದಿಪಡಿಸಲಾಗುತ್ತಿದೆ. ರೈತರು ಮಂದಹಾಸ ಮೂಡುವಂತೆ ದರ ನಿಗದಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಕಬ್ಬು ತುಂಬಿಕೊಂಡ ಲಾರಿಗೆ ಟೋಲ್ ಗೇಟ್‍ನಲ್ಲಿ ಶುಲ್ಕ ವಿನಾಯ್ತಿ ನೀಡಬೇಕೆಂಬ ರೈತರ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.
ಕಲಬುರಗಿ ಜಿಲ್ಲೆಯಲ್ಲಿ ಮುಂದಿನ 2-3 ವರ್ಷದಲ್ಲಿ 20ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳು ತಲೆ ಎತ್ತಲಿದ್ದು, ಆಗ ಇಲ್ಲಿನ ಬೆಳೆಗಾರರಿಗೆ ಸ್ಪರ್ಧಾತ್ಮಕ ದರ ದೊರೆಯಲಿದೆ. ರೈತರಿಗೆ ಒಳ್ಳೆಯ ಕಾಲ ಬರಲಿದೆ ಎಂದರು.
ಕ್ರಾಂತಿಕಾರಿ ಹೆಜ್ಜೆ, ಒಪ್ಪಂದಕ್ಕೆ ಸಹಿ ಹಾಕಿ: ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಮಾತನಾಡಿ, ಕಬ್ಬು ಬೆಳೆಯುವ ರೈತರು ಕಂಪನಿಯವರು ಕಬ್ಬು ಕಟಾವು ಮಾಡಿಲ್ಲ, ಸರಕು ದರ ಹೆಚ್ಚಿಸಿದ್ದಾರೆ, ಪರಿಹಾರ ಕೊಟ್ಟಿಲ್ಲ ಎನ್ನುವ ಸಾಮಾನ್ಯ ದೂರುಗಳಿಗೆ ಪರಿಹಾರ ಕಂಡುಕೊಳ್ಳಲು ದ್ವಿಪಕ್ಷೀಯ ಒಪ್ಪಂದ ಪದ್ಧತಿ ಜಾರಿಗೆ ತಂದಿದ್ದು, ಇದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನಂತೆ ರೈತರು ಯಾವುದೇ ಕಾರ್ಖಾನೆಗೆ ಕಬ್ಬು ಮಾರಾಟ ಮಾಡಬಹುದು. ಒಪ್ಪಂದಕ್ಕೆ ರೈತರು ಸಹಿ ಹಾಕಬೇಕು ಎಂದು ಮನವಿ ಮಾಡಿದ ಅವರು, ಒಪ್ಪಂದದಂತೆ ರೈತ ಮತ್ತು ಕಂಪನಿಗಳು ನಡೆಯಬೇಕು ಎಂದು ಯಶವಂತ ವಿ. ಗುರುಕರ್ ಹೇಳಿದರು.
ಪ್ರಸ್ತುತ ಕಬ್ಬನ್ನು ಮಶೀನ್‍ಗಳಿಂದ ಕಟಾವು ಮಾಡಿದಲ್ಲಿ ಸಾರಿಗೆ ಮತ್ತು ಕಟಾವು ವೆಚ್ಚದ ಜೊತೆಗೆ ಹೆಚ್ಚುವರಿಯಾಗಿ ಶೇ.5ರಷ್ಟು ಮೊತ್ತವನ್ನು ಕಾರ್ಖಾನೆಯವರು ರೈತರಿಂದ ಪಡೆಯುತ್ತಿದ್ದಾರೆ. ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದಲ್ಲಿ ರೈತರು ಶೇ.5ರಷ್ಟು ಹೆಚ್ಚುವರಿ ಹಣ ನೀಡಬೇಕಿಲ್ಲ ಎಂದರು.
ಕಬ್ಬು ಕಟಾವಿನಿಂದ ಹಿಡಿದು ರೈತರಿಗೆ ಹಣ ಪಾವತಿ ವರೆಗೆ ಪಾರದರ್ಶಕತೆ ತರಲು “ಕಬ್ಬು ಮಿತ್ರ” ಎಂಬ ಮೊಬೈಲ್ ತಂತ್ರಾಂಶ ಸಿದ್ದಪಡಿಸಿದ್ದು, ಅಕ್ಟೋಬರ್ 23 ರಂದು ಮುಖ್ಯಮಂತ್ರಿಗಳು ಇದಕ್ಕೆ ಕಲಬುರಗಿಯಲ್ಲೇ ಚಾಲನೆ ನೀಡಲಿದ್ದಾರೆ. ಗೂಗಲ್ ಪ್ಲೇಸ್ಟೋರ್‍ನಿಮದ ಇದನ್ನು ಡೌನ್‍ಲೋಡ್ ಮಾಡಿಕೊಂಡು ರೈತರು ತಮ್ಮ ಹೆಸರು, ಮೊಬೈಲ್ ಸಂಖ್ಯೆ ನೀಡಿ ನೋಂದಣಿ ಮಾಡಿಕೊಂಡು ಕಬ್ಬು ಬೆಳೆ ವಿವರ ಮತ್ತು ಬಿತ್ತನೆ ದಿನಾಂಕ ನೀಡಿದಲ್ಲಿ ಕಟಾವಿನ ದಿನಾಂಕ ತಂತ್ರಾಂಶ ನಿಗದಿಪಡಿಸಲಿದೆ. ಇದು ರೈತ ಸ್ನೇಹಿ ತಂತ್ರಾಂಶ ಇದಾಗಿದೆ ಎಂದು ಮಾಹಿತಿ ನೀಡಿದರು.
ಶಾಸಕ ಬಸವರಾಜ ಮತ್ತಿಮೂಡ ಮಾತನಾಡಿ, ಕಬ್ಬು ಬೆಳೆಯುವ ರೈತರ ಹಿತಕಾಯಲು ನಮ್ಮ ಸರ್ಕಾರ ಬದ್ಧವಾಗಿದೆ. ತಮ್ಮ ಕ್ಷೇತ್ರದಲ್ಲಿ 18 ಕೋಟಿ ರೂ. ಬೆಳೆ ಪರಿಹಾರ ನೀಡುವ ಕೆಲಸ ಮಾಡಿರುವೆ ಎಂದರು.
‘ಕಬ್ಬು ಮಿತ್ರ” ಲೋಗೋ ಬಿಡುಗಡೆ: ಇದೇ ಸಂದರ್ಭದಲ್ಲಿ ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ ಮತ್ತು ಬಸವರಾಜ ಮತ್ತಿಮೂಡ ಅವರು “ಕಬ್ಬು ಮಿತ್ರ” ತಂತ್ರಾಂಶದ ಲೋಗೊ ಬಿಡುಗಡೆ ಮಾಡಿದರು. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಗುಣಕಿ ಅವರು ತಂತ್ರಾಂದ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಉಗರ್-ಶುಗರ್ಸ್ ಕಂಪನಿಯ ಹೆಚ್.ಎನ್.ಡಿ. ಡಿ.ಜಿ.ಎಂ. ಮಾಣಿಕರಾವ ಗಡದೆ, ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಜಗದೀಶ ಪಾಟೀಲ, ಉಪಾಧ್ಯಕ್ಷ ಶಾಂತವೀರಪ್ಪ ಕಲಬುರಗಿ, ರಾಜ್ಯ ಉಪಾಧ್ಯಕ್ಷ ಬಸವರಾಜ ಪಾಟೀಲ ಸೇರಿದಂತೆ ರೈತ ಮುಖಂಡರು ಇದ್ದರು.