ಶಹಾಬಾದ: ಶಿಸ್ತು, ಸಂಯಮದಿಂದ ಜೀವನ ಮಾಡಬೇಕು, ಉದ್ವೇಗ ಹಾಗೂ ಒತ್ತಡಕ್ಕೆ ಮಾರು ಹೋಗದೇ ಮಾನಸಿಕ ಹಾಗೂ ದೈಹಿಕ ಆರೋಗ್ಯ ರಕ್ಷಣೆಯತ್ತ ಗಮನ ಹರಿಸಬೇಕು ಎಂದು ನ್ಯಾಯಾಧೀಶರಾದ ಮಲ್ಲೇಶಿ ಪರಶುರಾಮ ಮೋಹಿತೆ ಹೇಳಿದರು.
ಅವರು ಗುರುವಾರ ನಗರದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ ಸಹಯೋಗದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಪ್ರಯುಕ್ತ ಕಾನೂನು ಅರಿವು – ನೆರವು ಉದ್ಘಾಟಿಸಿ ಮಾತನಾಡಿದರು.
ಮನುಷ್ಯನ ದೇಹಕ್ಕೆ ಹೇಗೆ ಜ್ವರ ನೆಗಡಿ ಇನ್ನಿತರೆ ಬಾಧೆಗಳು ಕಾಡಿಸುತ್ತವೆ. ಅದೇ ರೀತಿ ಮನುಷ್ಯನ ಮೆದುಳು ಕೂಡ ಅನಾರೋಗ್ಯಕ್ಕೆ ತುತ್ತಾಗುತ್ತದೆ. ಇದನ್ನು ನಿರ್ಲಕ್ಷ್ಯಿಸಿದರೆ ಮುಂದೆ ತೊಂದರೆ ಅನುಭವಿಸಬೇಕಾಗುತ್ತದೆ, ಎಚ್ಚರವಹಿಸಿ ಚಿಕಿತ್ಸೆ ಪಡೆದು ಗುಣಪಡಿಸಿಕೊಳ್ಳಬೇಕು ಎಂದು ಹೇಳಿದರು.
ಮಾನಸಿಕ ರೋಗ ತಜ್ಞರಾದ ಡಾ.ಇರ್ಫಾನ ಮಾಗಾವಿ ಮಾತನಾಡಿ, ಈ ಹಿಂದೆ ಮಾನಸಿಕ ಆರೋಗ್ಯಕ್ಕೆ ಹೆಚ್ಚು ಗಮನ ಹರಿಸುತ್ತಿರಲ್ಲಿಲ್ಲ, ಮೂಢನಂಬಿಕೆಯಿಂದ ಪೂಜೆ, ಹೋಮಗಳ ಮೊರೆ ಹೋಗುತ್ತಿದ್ದರು, ಯಾವುದೇ ವ್ಯಕ್ತಿ ಶೇ. ನೂರರಷ್ಟು ಮಾನಸಿಕ ಆರೋಗ್ಯ ಹೊಂದಿರುವುದಿಲ್ಲ, ಆದ್ದರಿಂದ ತಪಾಸಣೆ ಅಗತ್ಯ ಎಂದರು. ನಶೆ, ಹೆದರಿಕೆ, ಒತ್ತಡದ ಬದುಕು ಪ್ರತಿಯೊಬ್ಬರಿಗೂ ಮಾನಸಿಕ ಅಸ್ವಸ್ಥತೆಗೆ ಕಾರಣವಾಗುತ್ತಿದೆ. ಶಿಸ್ತು, ಸಂಯಮದಲ್ಲಿ ಜೀವನ ಸಾಗಿಸುವುದರ ಮೂಲಕ ಇನ್ನೊಬ್ಬರಿಗೆ ಮಾದರಿಯಾಗಬೇಕು ಎಂದು ವಿಶೇಷವಾಗಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಮಹ್ಮದ ರಹೀಮ ಮಾತನಾಡಿ, ಮಾನಸಿಕ ಆರೋಗ್ಯದ ಬಗ್ಗೆ ಸಾರ್ವ ಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡ ಬೇಕಾಗಿದೆ. ಮಾನಸಿಕ ಅಸ್ವಸ್ಥರು ಮೇಲು ನೋಟಕ್ಕೆ ಚೆನ್ನಾಗಿ ಕಂಡರೂ ಮಾನಸಿಕವಾಗಿ ಬಳಲಿರುತ್ತಾರೆ. ಅಂತಹವರಿಗೆ ಸ್ಥೈರ್ಯ ನೀಡುವ ಮೂಲಕ ಚಿಕಿತ್ಸೆ ನೀಡಿ ಗುಣ ಪಡಿಸಬೇಕು. ಪ್ರತಿ ದಿನ ನಮ್ಮ ಜೀವನವನ್ನು ಚಟುವಟಿಕೆಯಿಂದ ಇಡಬೇಕು. ವ್ಯಾಯಾಮ, ಶಿಸ್ತು, ಧ್ಯಾನದ ಮೂಲಕ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಶೀದ ಮರ್ಚಂಟ್, ವಕೀಲರ ಸಂಘದ ಅಧ್ಯಕ್ಷ ಶಶಿಕಾಂತ ಶಿಂಧೆ, ವಕೀಲರ ಸಂಘದ ಡಿ. ಸಿ. ಕುಲಕುಂದಿ, ಅಂಬ್ರೇಶ ಇಟಗಿಕರ್ ವೇದಿಕೆ ಮೇಲೆ ಇದ್ದರು.
ಡಾ. ವೀರನಾಥ ಕನಕ, ವಕೀಲರ ಸಂಘದ ರಘುವೀರ ಸಿಂಗ ಠಾಕೂರ, ನಾಗೇಶ ಧನ್ನೇಕರ, ರಮೇಶ ರಾಠೋಡ, ತಿಮ್ಮಯ್ಯ ಮಾನೆ, ಶ್ರೀಮತಿ ಮಲಕೂಡ, ಆಶಾ ಕಾರ್ಯಕರ್ತೆಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.