ಕಲಬುರಗಿ: ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಲಬುರಗಿ ವಾರ್ತಾ ಭವನದಲ್ಲಿ ಶುಕ್ರವಾರ “ಕೋಟಿ ಕಂಠ ಗಾಯನ” ಅಭಿಯಾನದ ಅಂಗವಾಗಿ ಸಿಬ್ಬಂದಿಗಳು ನಾಡಿನ ಹಿರಿಮೆ ಗರಿಮೆ ಹೆಚ್ಚಿಸುವ ಕನ್ನಡ ಗೀತೆಗಳನ್ನು ಹಾಡಿದರು.
ರಾಷ್ಟ್ರಕವಿ ಕುವೆಂಪು ರಚನೆಯ ನಾಡಗೀತೆಯಾದ “ಜಯ ಭಾರತ ಜನನಿಯ ತನುಜಾತೆ” ಮತ್ತು “ಬಾರಿಸು ಕನ್ನಡ ಡಿಂಡಿಮವ”, ಹುಯಿಲಗೋಳ ನಾರಾಯಣರಾಯರ ರಚನೆಯ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು”, ಡಾ.ಡಿ.ಎಸ್.ಕರ್ಕಿ ಅವರ “ಹಚ್ಚೇವು ಕನ್ನಡದ ದೀಪ”, ಚನ್ನವೀರ ಕಣವಿ ಅವರ “ವಿಶ್ವವಿನೂತನ ವಿದ್ಯಾಚೇತನ” ಹಾಗೂ ಹಂಸಲೇಖ ಅವರ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಗೀತೆಗಳಿಗೆ ಸಿಬ್ಬಂದಿಗಳು ಸಮೂಹ ಗೀತ ಗಾಯನ ಮಾಡಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ದೇವೆಂದ್ರಪ್ಪ ಕಪನೂರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಿಬ್ಬಂದಿಗಳಾದ ರಾಜರತ್ನ ಡಿ.ಕೆ., ರವಿ ಮಿರಸ್ಕರ್, ಉಮಾಶಂಕರ ಚಿನಮಳ್ಳಿ, ಸೈಯದ್ ಇಸ್ಮಾಯಿಲ್ ಪಾಶಾ, ಲಕ್ಷ್ಮೀಬಾಯಿ, ನರಸಿಂಹ, ಅಪ್ರೆಂಟಿಸ್ ಅಭ್ಯರ್ಥಿಗಳಾದ ನಿರ್ಮಲಾ, ಉಮಾಶ್ರೀ, ಕಲಾವಿದರಾದ ಬಾಬುರಾವ ಕೋಬಾಳ, ದತ್ತರಾಜ ಕಲಶೆಟ್ಟಿ, ಬಸಯ್ಯ ಗುತ್ತೇದಾರ, ಶಿವಶರಣ ಬಡದಾಳ, ಗಂಗೂಬಾಯಿ, ಎಂ.ಸಿ.ಎ. ಕಚೇರಿ ಸಿಬ್ಬಂದಿಗಳಾದ ರಾಜಶೇಖರ ಪಾಟೀಲ, ಶೀಲಾ ರಾಠೋಡ, ರಾಜಕುಮಾರ ಹೊಸಮನಿ, ರಾಮಮೂರ್ತಿ ಉಪ್ಪಾಳ, ಭೀಮಸೇನ್ ರಾವ ಕುಲಕರ್ಣಿ ಅವರುಗಳು ಸಮೂಹ ಗೀತ ಗಾಯನದಲ್ಲಿ ಭಾಗವಹಿಸಿದ್ದರು.