ಶಹಾಬಾದ: ತಾಲೂಕಿನ ಹೊನಗುಂಟಾ ಗ್ರಾಮ ಪಂಚಾಯಿತಿಯಲ್ಲಿ ನಡೆಯುತ್ತಿರುವ ಜಲಜೀವನ ಮಿಷನ್ ಕಾಮಗಾರಿಯು ಸಂಪೂರ್ಣ ಅವೈಜ್ಞಾನಿಕ ಕಳಪೆ ಮಟ್ಟದಿಂದ ನಡೆಯುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲವೆಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕಾಧ್ಯಕ್ಷ ರಾಯಪ್ಪ ಹುರಮುಂಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಕಳಪೆ ಮಟ್ಟದ ಕಾಮಗಾರಿ ಮಾಡಿದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಬೆಂಗಳೂರಿನ ಸಂಬಂಧಪಟ್ಟ ಇಲಾಖೆಗೂ ದೂರು ಸಲ್ಲಿಸಿ, ಕೂಡಲೇ ಬಿಲ್ ತಡೆ ಹಿಡಿದು ಗುತ್ತಿಗೆದಾರನ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರೂ, ಯಾವುದೇ ಕ್ರಮ ಕೈಗೊಂಡಿಲ್ಲ.ಅಲ್ಲದೇ ಜಿಪಂ ಸಿಎಸ್ ಅವರಿಗೆ ದೂರು ನೀಡಲಾಗಿದೆ.ಆದರೂ ಗುತ್ತಿಗೆದಾರನಿಗೆ 40% ಹಣ ಗುತ್ತಿಗೆದಾರನಿಗೆ ಪಾವತಿಯಾಗಿದೆ.
ಹೊನಗುಂಟಾ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿದ್ದು, ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲಜೀವನ ಮಿಷನ್ ಯೋಜನೆಯ ಕಾಮಗಾರಿ ಆರಂಭಿಸುವ ಮೊದಲು ಕೇಂದ್ರ ಹಾಗೂ ರಾಜ್ಯ ಸರಕಾರದ ನಿಯಮ ಪಾಲಿಸಿಲ್ಲ. ಸರಕಾರದ ಆದೇಶದ ಪ್ರಕಾರ ಗ್ರಾಮ ಸಭೆ ಕರೆದು ಯೋಜನೆ ಬಗ್ಗೆ ಮಾಹಿತಿ ನೀಡಿ, ಗ್ರಾಮಸ್ಥರ ಅನುಮತಿ ಪಡೆಯಬೇಕು. ಆದರೆ ಇಲ್ಲಿ ಯಾವುದೇ ನಿಯಮ ಪಾಲನೆಯಾಗಿಲ್ಲ. ಅಧಿಕಾರಿಗಳು ಸರ್ಕಾರದ ಯಾವುದೇ ಮಾರ್ಗಸೂಚಿ ಅನುಸರಿಸದೇ ನೇರವಾಗಿ ಕಾಮಗಾರಿ ಆರಂಭ ಮಾಡಿದ್ದಾರೆ.ಅದು ಕೂಡ ಕಳಪೆ ಮಟ್ಟದಿಂದ ಕೂಡಿದೆ.
ಪ್ರತಿ ಮನೆಮನೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು. ಹಾಗೆ ಮಹಿಳೆಯರು ನೀರಿಗಾಗಿ ಪರದಾಡುವವುನ್ನು ತಪ್ಪಿಸುವ ಮತ್ತು ಆರೋಗ್ಯ ಕಾಪಾಡುವುದು ಯೋಜನೆಯ ಮೂಲ ಉದ್ದೇಶವಾಗಿದೆ.
ಆದರೆ ಕಳಪೆ ಮಟ್ಟದ ಪೈಪ್‍ಗಳು, ಅವೈಜ್ಞಾನಿಕ ಕಾಮಗಾರಿ,ಸಿಸಿ ರಸ್ತೆ ತೋಡಿ ಕೆಲವು ಕಡೆ ಮುಚ್ಚದೇ ಹಾಗೇ ಬಿಟ್ಟಿರುವುದು.ಒಡೆದಿರುವ ರಸ್ತೆ ದುರಸ್ತಿ ಮಾಡದರಿವುದು ಕಂಡು ಬಂದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದೇ ಬಿಲ್ ಪಾವತಿ ಮಾಡಿದ್ದು ನೋಡಿದರೇ ಅವರು ಕೂಡ ಭಾಗಿಯಾಗಿದ್ದಾರೆ ಎಂದು ತಿಳಿದು ಬರುತ್ತದೆ.
ಕೆಲವು ಕಡೆ ತೊಟ್ಟಿ ಹಾಕಿದ್ದಾರೆ.ಇನ್ನೂ ಕೆಲವು ಕಡೆ ತೊಟ್ಟಿ ಹಾಕಿಲ್ಲ.ಮನಸ್ಸಿಗೆ ಬಂದಂತೆ ಪೈಪ್ ಲೈನ್ ಹಾಕಿದ್ದಾನೆ. ಜಲಜೀವನ ಮಿಷನ್ ಯೋಜನೆಯಡಿ ಮಾಡಿದ ಕಾಮಗಾರಿಯನ್ನು ಎಸ್‍ಡಿಪಿ ಯೋಜನೆಯಡಿ ಪೈಪ್ ಲೈನ್ ಕಾಮಗಾರಿ ಮಾಡಲಾಗಿದೆ ತೋರಿಸಿ ತರಾತುರಿಯಲ್ಲಿ ಸುಮಾರು 5 ಲಕ್ಷ ರೂ. ಹಣ ಲೂಟಿ ಹೊಡೆದಿದ್ದಾರೆ.ಈ ಬಗ್ಗೆ ಸೂಕ್ತ ತನಿಖೆ ಮಾಡಿ ತಪ್ಪಿತಸ್ಥ ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.