ಕಲಬುರಗಿ: ಪ್ರಸಕ್ತ 2022-23 ಮುಂಗಾರು ಹಂಗಾಮಿನಲ್ಲಿ ಅತಿವೃಷ್ಠಿಯಿಂದ ಹಾಳಾದ ಬೆಳೆಗಳಿಗೆ ಭೂಮಿ ತಂತ್ರಾಂಶದಲ್ಲಿ ದಾಖಲಾಗಿರುವವರ ಪೈಕಿ ಆರನೇ ಹಂತದ ರೂಪದಲ್ಲಿ ಜಿಲ್ಲೆಯ 7,996 ರೈತರಿಗೆ 7.80 ಕೋಟಿ ರೂ. ಬೆಳೆ ಪರಿಹಾರ ಬಿಡುಗಡೆಗೆ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಶನಿವಾರ ಅನುಮೋದನೆ ನೀಡಿದ್ದಾರೆ.
ಕಳೆದ ಜುಲೈ-ಆಗಸ್ಟ್ ಮಾಹೆಯಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ 1.70 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ಹಾನಿಯನ್ನು ಜಂಟಿ ಸಮೀಕ್ಷೆ ಮೂಲಕ ಅಂದಾಜಿಸಿ, ಬೆಳೆ ಪರಿಹಾರಕ್ಕೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗ ಅನುಮೋದನೆ ನೀಡಿದ ಪರಿಹಾರ ಎರಡು ದಿನದಲ್ಲಿ ರೈತರ ಖಾತೆಗೆ ಹಣ ಜಮೆ ಆಗಲಿದೆ.
ಇದೀಗ ಅನುಮೋದನೆ ನೀಡಿರುವುದು ಸೇರಿದಂತೆ ಒಟ್ಟಾರೆ ಆರು ಹಂತದಲ್ಲಿ 2,48,624 ರೈತರಿಗೆ 224.80 ಕೋಟಿ ರೂ. ಪರಿಹಾರ ನೀಡಿದಂತಾಗಿದೆ ಎಂದು ಡಿ.ಸಿ. ಯಶವಂತ ವಿ. ಗುರುಕರ್ ತಿಳಿಸಿದ್ದಾರೆ.