ಹಳಕರ್ಟಿಯಲ್ಲಿ ಶ್ರೀವೀರಭದ್ರೇಶ್ವರ ಜಾತ್ರೆಯ ಸಿದ್ಧತೆ | ನ.8 ರಿಂದ ಧಾರ್ಮಿಕ ಆಚರಣೆ: 13 ರಂದು ಭವ್ಯ ರಥೋತ್ಸವ

0
210

ವಾಡಿ: ಸುಕ್ಷೇತ್ರ ಹಳಕರ್ಟಿ ಗ್ರಾಮದ ಶಕ್ತಿ ದೇವರಾದ ಶ್ರೀವೀರಭದ್ರೇಶ್ವರ ಜಾತ್ರಾಮಹೋತ್ಸವ ಅದ್ಧೂರಿಯಾಗಿ ಆಚರಿಸಲು ವೀರಭದ್ರೇಶ್ವರ ದೇವಸ್ಥಾನ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳು ತೀರ್ಮಾನಿಸಿದ್ದು, ಸತತವಾಗಿ ಒಂದು ವಾರಗಳ ಕಾಲ ನಡೆಯಲಿರುವ ವಿವಿಧ ಧಾರ್ಮಿಕ ಆಚರಣೆಗಳಿಗೆ ನ.8 ರಿಂದ ಚಾಲನೆ ದೊರೆಯಲಿದೆ ಎಂದು ಜಾತ್ರಾ ಸಮಿತಿ ಪ್ರತಿಕ್ರೀಯಿಸಿದೆ.

ರವಿವಾರ ಗ್ರಾಮದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಜಾತ್ರೆಯ ಪ್ರಚಾರದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಹಳಕರ್ಟಿ ಕಟ್ಟಮನಿ ಹಿರೇಮಠದ ಪೀಠಾಧಿಪತಿ ಶ್ರೀಮುನೀಂದ್ರ ಸ್ವಾಮೀಜಿ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಂಭ್ರಮದ ಜಾತ್ರೆಗೆ ಗ್ರಾಮದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ನಾಡಿನ ವಿವಿಧೆಡೆ ಲಕ್ಷಾಂತರ ಭಕ್ತರನ್ನು ಹೊಂದಿರುವ ಹಳಕರ್ಟಿ ಶ್ರೀವೀರಭದ್ರೇಶ್ವರ ದೇವಸ್ಥಾನದ ಅಲಂಕಾರ ಕಾರ್ಯ ಅಂತಿಮ ಘಟ್ಟ ತಲುಪಿದೆ. ಧಾರ್ಮಿಕ ಹಿನ್ನೆಲೆ ಸಾಂಪ್ರದಾಯಿಕ ಆಚರಣೆಗಳ ಜತೆಗೆ ಸಾಂಸ್ಕøತಿಕ ಕಾರ್ಯಕ್ರಮಗಳ ಆಯೋಜನೆಯಾಗಿದ್ದು, ಭಕ್ತರಿಗಾಗಿ ಎರಡು ದಿನಗಳ ಪ್ರಸಾದ ಸೇರಿದಂತೆ ವಿವಿಧ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.

Contact Your\'s Advertisement; 9902492681

ಜಾತ್ರೆಯ ಸಾಂಪ್ರದಾಯಿಕ ಆಚರಣೆಗಳು: ನ.8 ರಂದು ರಾತ್ರಿ 10:00 ಗಂಟೆಗೆ ಗ್ರಾಮದ ಚಿಕ್ಕವೀರಪ್ಪನವರ ಮನೆಯಿಂದ ಮೈಲಾರಲಿಂಗ ದೇವಸ್ಥಾನ ವರೆಗೆ ಅಂಬಲಿ ಬಂಡಿ ಮೆರವಣಿಗೆ. ನ.9 ರಂದು ಸಂಜೆ 4:00 ಗಂಟೆಗೆ ಜೋಡು ಪಲ್ಲಕ್ಕಿ ಉತ್ಸವ ಮತ್ತು ಚೌಡಮ್ಮನ ಗಂಗಸ್ಥಳ. ನ.10 ರಂದು ರಾತ್ರಿ 11:00 ಗಂಟೆಗೆ ಶಟ್ಟಿಯವರ ಮನೆಯ ವರೆಗೆ ಪಲ್ಲಕ್ಕಿ ಸೇವೆ. ನ.11 ರಂದು ರಾತ್ರಿ 1:00 ಗಂಟೆಗೆ ಮೈಲಾರಲಿಂಗ ದೇವಸ್ಥಾನದಲ್ಲಿ ಕಳ್ಳ ಸರಪಳಿ ಹರಿಯುವ ಕಾರ್ಯಕ್ರಮ. ನ.12 ರಂದು ಸಂಜೆ 4:00ಕ್ಕೆ ಮೈಲಾರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ದೈವದ ಸರಪಳಿ ಹರಿಯುವುದು ಮತ್ತು ವಗ್ಗಯ್ಯಗಳಿಗೆ ಸನ್ಮಾನ. ಅಂದು ರಾತ್ರಿ 11:00 ಗಂಟೆಗೆ ಪುರವಂತರು ಮತ್ತು ಭಕ್ತರಿಂದ ಅಗ್ನಿ ಪ್ರವೇಶ. ನ.13 ರಂದು ಸಂಜೆ 4:00 ಗಂಟೆಗೆ ಚೌಡೇಶ್ವರಿ ದೇವಿ ಆಡುವಿಕೆ ಮತ್ತು ಶ್ರೀಮಠದಲ್ಲಿ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯುವುದು. ಅಂದು ಸಂಜೆ 6:00 ಗಂಟೆಗೆ ಶಶಿಧರ ದೇಶಮುಖ ಮನೆಯಿಂದ ಕುಂಭ ಆಗಮನದ ನಂತರ ಶ್ರೀವೀರಭದ್ರೇಶ್ವರರ ಭವ್ಯ ರಥೋತ್ಸವ ನಡೆಯಲಿದೆ ಎಂದು ಪೂಜ್ಯ ಶ್ರೀಮುನೀಂದ್ರ ಸ್ವಾಮೀಜಿ ವಿವರಿಸಿದರು.

ಜಾತ್ರೆಗೆ ಬರುವ ಸಾವಿರಾರು ಭಕ್ತರಿಗಾಗಿ ಮಲೆಬೆನ್ನೂರು ಬೆನಕನಕೊಂಡಿ ಪರಿವಾರ ಹಾಗೂ ಫರಹತಾಬಾದ ಭಕ್ತರಾದ ವಿಜಯಕುಮಾರ ಶಂಕ್ರಣ್ಣ ಸಜ್ಜನ್ ಅವರಿಂದ ನ.12 ಮತ್ತು 13 ರಂದು ಎರಡು ದಿನಗಳ ಕಾಲ ಪ್ರಸಾದ ಸೇವೆ ನಡೆಯಲಿದ್ದು, ನ.12 ರಿಂದ 14 ವರೆಗೆ ಪ್ರತಿದಿನ ಸಂಜೆ 10:30ಕ್ಕೆ “ತಾಳಿ ಹರಿಯಲಿಲ್ಲ-ಶೀಲ ಉಳಿಯಲಿಲ್ಲ” ಎಂಬ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ.
ಶ್ರೀವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಚಂದ್ರಕಾಂತ ಮೇಲಿಮನಿ, ಮುಖಂಡರಾದ ಬಸವರಾಜ ಲೋಕನಳ್ಳಿ, ಪ್ರಕಾಶ ಚಂದನಕೇರಿ, ದತ್ತಾತ್ರೇಯ ಬುಕ್ಕಾ, ರವಿ ಸಾಹು ಸಂಗಶೆಟ್ಟಿ, ಮಲ್ಲಿಕಾರ್ಜುನ ಪೂಜಾರಿ, ಈರಣ್ಣ ಜೀವಣಗಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here