ಕಲಬುರಗಿ : ರಂಗಾಯಣದ ಜನಪ್ರಿಯ ನಾಟಕ ಬಿಚ್ಚಿದ ಜೋಳಿಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರದರ್ಶನ ಮಾಡಲು ಹೊರಟಿದೆ. ಜನಪ್ರಿಯ ವೈದ್ಯ ಸಾಹಿತಿ, ಸಂಶೋಧಕರಾಗಿದ್ದ ಡಾ.ಸ.ಜ.ನಾಗಲೋಟಿಮಠ ಅವರ ಆತ್ಮಕಥೆ ಬಿಚ್ಚಿದ ಜೋಳಿಗೆಯು ಈಗಾಗಲೇ ಎಂಟು ಪ್ರದರ್ಶನ ಕಂಡಿದ್ದು, ಮೊದಲ ಹಂತದಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸಂಚರಿಸಲಿದೆ ಎಂದು ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಹೇಳಿಸಿದರು.
ಹಿರಿಯ ಪತ್ರಕರ್ತ ಗಣೇಶ ಅಮೀನಗಡ ಆತ್ಮಕಥೆಯನ್ನು ರಂಗರೂಪ ಮಾಡಿದ್ದು, ರಾಷ್ಟ್ರೀಯ ನಾಟಕ ಶಾಲೆಯ ಪದವೀಧರ ಜಗದೀಶ ಜಾಣೆ ನಿರ್ದೇಶಿಸಿ, ಸಂಗೀತ ಸಂಯೋಜನೆ ಮಾಡಿದ್ದಾರೆ.
ನ.4 ರಂದು ಚಿತ್ರದುರ್ಗ ಜಿಲ್ಲೆಯ ಸಾಣೆಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರದರ್ಶನ ಮಾಡಲಿದ್ದು, 5 ರಂದು, ಹೊಸಪೇಟೆಯಲ್ಲಿ, 6 ರಂದು ಬಾಗಲಕೋಟೆಯಲ್ಲಿ, 7 ರಂದು ಅಮೀನಗಡದಲ್ಲಿ, 8 ರಂದು ಗಜೇಂದ್ರಗಡದಲ್ಲಿ, 9 ಮತ್ತು 10 ರಂದು ಹುನಗುಂದದಲ್ಲಿ, 11 ರಂದು ಇಲಕಲ್ಲದಲ್ಲಿ, 12 ಮತ್ತು 13 ರಂದು ವಿಜಯಪುರದಲ್ಲಿ, 14 ರಂದು ಹುಬ್ಬಳ್ಳಿಯಲ್ಲಿ ಹಾಗೂ15 ಮತ್ತು 16 ರಂದು ಧಾರವಾಡದ ವಿದ್ಯಾವರ್ಧಕ ಸಂಘದ ನಾಟಕೋತ್ಸವದಲ್ಲಿ ಕಲಬುರಗಿ ರಂಗಾಯಣದ ನಾಟಕಗಳು ಪ್ರದರ್ಶನ ಕಾಣಲಿವೆ ಎಂದು ಗುರುವಾರ ಸುದ್ವಿದಿಗೋಷ್ಠಿಯಲ್ಲಿ ತಿಳಿಸಿದರು.
ಕಲಬುರಗಿ ರಂಗಾಯಣ ಸ್ಥಾಪನೆಯಾದಾಗಿನಿಂದ ಇದೇ ಮೊದಲ ಬಾರಿಗೆ ರೆಪರ್ಟರಿ ತಂಡವು ನಿರಂತರ ಹತ್ತು ಸ್ಥಳಗಳಲ್ಲಿ ಪ್ರದರ್ಶನ ಮಾಡುತ್ತಿದೆ. ಬಿಚ್ಚಿದ ಜೋಳಿಗೆ ನಾಟಕದ ಜತೆ ರಂಗಾಯಣದ ಮತ್ತೊಂದು ಸೂಪರ್ ಹಿಟ್ ನಾಟಕ. ಮಹಾದೇವ ಹಡಪದ ನಿರ್ದೇಶನದ ಸಿರಿ ಪುರಂದರ ನಾಟಕದ ಪ್ರದರ್ಶನ ಕೂಡ, ಹುನಗುಂದ ಮತ್ತು ಧಾರವಾಡದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿ ಗೋಷ್ಠಿಯಲ್ಲಿ ರಂಗಾಯಣ ಹಿರಿಯ ಸಿಬ್ಬಂದಿ ಮಲ್ಲಿನಾಥ, ಕಲಾವಿದರಾದ ಶಂಕರಭಟ್ ಚಂದಾಪೂರ ಇದ್ದರು.
4 ರಂದು ನಿನಗೆ ನೀನೇ ಗೆಳತಿ ನಾಟಕ: ರಂಗಾಯಣದ ಸಭಾಂಗಣದಲ್ಲಿ ನ.4 ರಂದು ಮಂಗಳೂರಿನ ಆಕರಂ ತಂಡದ ಕಲಾವಿದರು ಅಭಿನಯಿಸುವ ನಿನಗೆ ನೀನೇ ಗೆಳತಿ ನಾಟಕದ ಪ್ರದರ್ಶನ ಆಯೋಜಿಸಲಾಗಿದೆ. ಹಿರಿಯ ಕವಿ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ರಚಿಸಿದ ಈ ನಾಟಕವನ್ನು ರಾಯಚೂರು ಆಕಾಶವಾಣಿ ನಿರ್ದೇಶಕ ಡಾ.ಟಿ.ಎಂ.ಶರಭೇಂದ್ರಯ್ಯ ನಿರ್ದೇಶಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ಮಹಿಳೆಯರು ಅಭಿನಯಿಸುವ ಈ ನಾಟಕ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಬೇಕು ಎಂದು ಪ್ರಭಾಕರ ಜೋಶಿ ವಿನಂತಿಸಿದರು.