ಕಲಬುರಗಿ: ಶ್ರದ್ಧಾಳನ್ನು ಕ್ರೂರವಾಗಿ ಕೊಲೆ ಮಾಡಿದ್ದಲ್ಲದೆ. ಕೊಲೆಯ ಪತ್ತೆ ಹತ್ತಬಾರದೆಂದು ಶ್ರದ್ಧಾಳ ದೇಹವನ್ನು ತುಂಡರಿಸಿ ಅರಣ್ಯದೆಲ್ಲೆಡೆ ಚೆಲ್ಲಾಡಿದ್ದೇನೆ ಎಂದು ಆರೋಪಿ ಒಪ್ಪಿಕೊಂಡಿದ್ದಾಗಿ ವರದಿಯಾಗಿದ್ದು, ಆರೋಪಿಯನ್ನು ಪತ್ತೆಹಚ್ಚಿ ಉಗ್ರ ಸ್ವರೂಪದ ಶಿಕ್ಷೆಗೆ ಗುರಿಪಡಿಸಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಸಮಿತಿಯ ಅಧ್ಯಕ್ಷೆ ಮೀನಾಕ್ಷಿ ಬಾಳಿ ಆಗ್ರಹಿಸಿದ್ದಾರೆ.
ಅಫತಾಪ್ ಅಮೀನ್ ಪೂನಾವಾಲಾ ಮತ್ತು ಶ್ರದ್ಧಾ ವಾಲಕರ್ ಇಬ್ಬರೂ ಲಿವಿಂಗ್ ಟುಗೆದರ್ ಶಿಪ್ ದಂತೆ ಕೆಲವು ದಿನ ಕಾಲ ಕಳೆದು ಅವರಿಬ್ಬರೂ ಮುಂಬೈನಿಂದ ದಿಲ್ಲಿಗೆ ವಾಸ್ತವ್ಯ ಹೂಡಲು ಇಚ್ಛಿಸುತ್ತಿರುವಷ್ಟರಲ್ಲಿ ಇಬ್ಬರ ನಡುವೆ ವೈಮನಸ್ಸು ಬಂದಿದೆ. ಇದನ್ನೆ ನೆಪವಾಗಿಸಿಕೊಂಡ ಆಫತಾಬ್ ಶ್ರದ್ಧಾಳನ್ನು ಕ್ರೂರವಾಗಿ ಕೊಲೆ ಮಾಡಿದ್ದಲ್ಲದೆ. ಕೊಲೆಯ ಪತ್ತೆ ಹತ್ತಬಾರದೆಂದು ಶ್ರದ್ಧಾಳ ದೇಹವನ್ನು ತುಂಡರಿಸಿ ಅರಣ್ಯದೆಲ್ಲೆಡೆ ಚೆಲ್ಲಾಡಿದ್ದೇನೆ ಎಂದು ಆರೋಪಿ ಒಪ್ಪಿಕೊಂಡಿದ್ದಾಗಿ ವರದಿಯಾಗಿದೆ. ಈ ಘಟನೆಯು ದೇಶದ ಮಹಿಳೆಯರನ್ನು ದಿಗ್ಭ್ರಮೆಗೆ ಈಡು ಮಾಡಿದೆ. ಹಿಂದೆಂದೂ ಕಂಡು ಕೇಳರಿಯದ ಕ್ರೌರ್ಯ ಇದ್ದಾಗಿದೆ.
ಪೀಡಿತೆ ಮತ್ತು ದೋಷಿಗಳು ಯಾವುದೇ ಧರ್ಮಕ್ಕೆ ಸೇರಿದವರಾಗಿರಲಿ. ಅಪರಾಧಕ್ಕೆ ಜಾತಿ,ಧರ್ಮದ ಬಣ್ಣ ಹಚ್ಚಬಾರದು. ಅಪರಾಧಿ ಖುದ್ದಾಗಿ ತಪ್ಪೊಪ್ಪಿಕೊಂಡಿದ್ದರಿಂದ ನ್ಯಾಯ ನೀಡುವಲ್ಲಿ ವಿಳಂಬ ಮಾಡದೆ ತ್ವರಿತಗತಿಯಲ್ಲಿ ಕಾನೂನು ಪ್ರಕ್ರಿಯೆ ಮುಗಿಸಬೇಕು.
ಇಂಥ ಘಟನೆಗಳು ನಡೆದಾಗೆಲ್ಲಾ ಕೋಮುವಾದಿಗಳು ಜಾತಿ,ಧರ್ಮದ ಬಣ್ಣ ಹಚ್ಚಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತವೆ. ಹೀಗೆ ಕೋಮುವಾದಿ ಕೀಳು ರಾಜಕಾರಣ ಮಾಡುವ ಮುಂಚೆ ಇವರು ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಳ್ಳಬೇಕು. ಹತ್ರಾಸ್ ನಲ್ಲಿ ದಲಿತ ಮಹಿಳೆ ಮೇಲೆ ಅತ್ಯಾಚಾರ ನಡೆದಾಗ ಇವರು ಮಾಡಿದ ಪಕ್ಷಪಾತವನ್ನು ದೇಶ ಗಮನಿಸಿದೆ. ಅಂಕಿತಾ ಬಂಢಾರಿ ಮೇಲೆ ಅತ್ಯಾಚಾರ ನಡೆದಾಗಲು ಇವರು ಮಾಡಿದ ದುಷ್ಟ ಹುನ್ನಾರವನ್ನು ನಾವು ನೋಡಿದ್ದೇವೆ. ಆದ್ದರಿಂದ ಅಪರಾಧಿಗೆ ಯಾವುದೇ ಜಾತಿ, ಧರ್ಮ ದ ಮೊಹರು ಹಾಕಬೇಕಿಲ್ಲ. ನಿರ್ದಾಕ್ಷಿಣ್ಯವಾಗಿ ಶಿಕ್ಷೆ ವಿಧಿಸಬೇಕು ಎಂದು ಸಂಘಟನೆಯ ರಾಜ್ಯ ಉಪಾಧ್ಯಕ್ಷ ಕೆ ನೀಲಾ, ಚಂದಮ್ಮ ಗೋಳಾ, ಪದ್ಮಿನಿ ಕಿರಣಗಿ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.