ಭೀಮಾ ನದಿಗೆ 2.25 ಲಕ್ಷ ಕ್ಯೂಸೆಕ್ಸ್ ನೀರು: ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಡಿಸಿ ಗ್ರಾಮಸ್ಥರಲ್ಲಿ ಮನವಿ

0
795

ಕಲಬುರಗಿ: ಮಹಾರಾಷ್ಟ್ರ ರಾಜ್ಯದ ವೀರಾ (ನಿರಾ) ನದಿಯಿಂದ ಪ್ರತಿದಿನ ೦.೭೫ ಲಕ್ಷ ಕ್ಯೂಸೆಕ್ಸ ಹಾಗೂ ಉಜನಿ ಜಲಾಶಯದಿಂದ ೧.೫೦ ಲಕ್ಷ ಕ್ಯೂಸೆಕ್ಸ ನೀರು ಹೀಗೆ ಒಟ್ಟು 2.25 ಲಕ್ಷ ಕ್ಯೂಸೆಕ್ಸ ನೀರು ಭೀಮಾ ನದಿಗೆ ಹರಿಬಿಡಲಾಗುತ್ತಿರುವುದರಿಂದ ಭೀಮಾ ನದಿ ತೀರದಲ್ಲಿ ಪ್ರವಾಹದ ಸಾಧ್ಯತೆ ಇರುತ್ತದೆ. ನದಿ ತೀರದ ಜನರು ಕೂಡಲೇ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಮಹಾರಾಷ್ಟ್ರ ರಾಜ್ಯದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಸುಮಾರು ೨೪೯ ಮಿ.ಮೀ. ಸುರಿದ ಬಗ್ಗೆ ವರದಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ೨.೨೫ ಲಕ್ಷ ಕ್ಯೂಸೆಕ್ಸ್ ನೀರು ಭೀಮಾ ನದಿಗೆ ಹರಿಬಿಡಲಾಗಿದ್ದು, ಗುರುವಾರದ ಹೊತ್ತಿಗೆ ಅಪಜಲಪುರ ತಾಲೂಕಿನ ಸೊನ್ನ ಬ್ಯಾರೇಜಿಗೆ ನೀರು ತಲುಪಲಿದೆ. ತದನಂತರ ಸೊನ್ನ ಬ್ಯಾರೇಜಿನಿಂದ ಕಲಬುರಗಿ ತಾಲೂಕಿನ ಸರಡಗಿ ಬ್ಯಾರೇಜ್, ಜೇವರ್ಗಿ ತಾಲೂಕಿನ ಕಟ್ಟಿಸಂಗಾವಿ ಬ್ಯಾರೇಜ್, ಚಿತ್ತಾಪುರ ತಾಲೂಕಿನ ಸನ್ನತಿ ಬ್ಯಾರೇಜ್ ಮೂಲಕ ನೀರು ಹರಿಯಲಿದ್ದು, ನದಿ ಪಾತ್ರದಿಂದ ೨೦೦ ರಿಂದ ೨೫೦ ಅಂತರದಲ್ಲಿ ವಾಸಿಸುತ್ತಿರುವ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ಹೋಗಿ ತಂಗಲು ಈ ಮೂಲಕ ತಿಳಿಸಲಾಗಿದೆ.

Contact Your\'s Advertisement; 9902492681

ನದಿ ತೀರದ ಜನರಿಗೆ ಪ್ರವಾಹದ ಹಿನ್ನೆಲೆಯಲ್ಲಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಅಫಜಲಪುರ, ಜೇವರ್ಗಿ, ಕಲಬುರಗಿ ಮತ್ತು ಚಿತ್ತಾಪುರ ತಾಲೂಕುಗಳ ಆಯಾ ಗ್ರಾಮಗಳ ಸಂಬಂಧಪಟ್ಟ ಗ್ರಾಮ ಲೆಕ್ಕಿಗರು, ಪಿಡಿಓ ಹಾಗೂ ಹೋಬಳಿ ಮಟ್ಟದ, ತಾಲೂಕು ಮಟ್ಟದ ನೋಡಲ್ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಸಾರ್ವಜನಿಕರಿಗೆ ಅಗತ್ಯ ಮುನ್ನೇಚ್ಚರಿಕೆ ಮಾಹಿತಿಯನ್ನು ನೀಡಬೇಕು. ಕೇಂದ್ರ ಸ್ಥಾನದಲ್ಲಿರದ ಅಧಿಕಾರಿ, ನೌಕರರ ವಿರುದ್ಧ ನೈಸರ್ಗಿಕ ವಿಕೋಪ ಕಾನೂನಿನ್ವಯ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಗಂಜಿ ಕೇಂದ್ರ ಸ್ಥಾಪನೆಗೂ ಕ್ರಮ: ಪ್ರವಾಹಕ್ಕೀಡಾಗಲಿರುವ ಭೀಮಾ ನದಿ ಪಾತ್ರದ ಗ್ರಾಮಸ್ಥರು ನದಿ ತೀರದ ಪ್ರದೇಶಕ್ಕೆ ಹೋಗದಂತೆ ಮತ್ತು ಜಾನುವಾರುಗಳನ್ನು ನದಿ ಸಮೀಪಕ್ಕೆ ಬಿಡದಂತೆ ಗ್ರಾಮಸ್ಥರಿಗೆ ಈಗಾಗಲೇ ಟಾಂಟಾಂ ಮತ್ತು ಡಂಗುರಗಳ ಮೂಲಕ ಮುನ್ನೆಚ್ಚರಿಕೆ ನೀಡಲಾಗಿದೆ. ಅವಶ್ಯವಿದ್ದಲ್ಲಿ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಗಂಜಿ ಕೇಂದ್ರ ತೆರೆಯಲು ಸಹ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರರಿಗೆ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ರಕ್ಷಣಾ ಪಡೆ ಸನ್ನಧರಾಗಿರಲು ಸೂಚನೆ: ಭೀಮಾ ತೀರದಲ್ಲಿ ಯಾವುದೇ ಸಂದರ್ಭದಲ್ಲಿ ಪ್ರವಾಹ ಸಾಧ್ಯತೆ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆ, ಅಗ್ನಿ ಶಾಮಕ ದಳ, ಜೇಸ್ಕಾಂ ಇಲಾಖೆಯವರು ಸಂರಕ್ಷಣೆ ಮತ್ತು ಪರಿಹಾರ (Rescue and Relief) ಕುರಿತಂತೆ ತಮ್ಮ ತಮ್ಮ ಇಲಾಖಾ ಮಟ್ಟದಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ನದಿ ಪಾತ್ರದ ೨೫೦ ಮೀಟರ್ ಅಂತರದಲ್ಲಿ ವಾಸಿಸುತ್ತಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ರಕ್ಷಣಾ ಪಡೆ ಸನ್ನಧರಾಗಿರುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here