ಕಲಬುರಗಿ: ಮಾನವ ಹಕ್ಕುಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ. ಗಿರೀಶ ಡಿ. ಬದೋಲೆ ಹೇಳಿದರು.
ಶನಿವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲಬುರಗಿ ಜಿಲ್ಲಾಡಳಿತದಿಂದ ಆಯೋಜಿಸಿದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಜನಜಾಗೃತಿ ಹಾಗೂ ಕಾನೂನು ಅರಿವು ಕಾರ್ಯಕ್ರಮ ಉದ್ಫಾಟಿಸಿ ಅವರು ಮಾತನಾಡಿದರು.
ವಯಸ್ಸಿನಲ್ಲಿ ಚಿಕ್ಕವರು, ದೊಡ್ಡವರು ಎನ್ನದೆ ಪ್ರತಿಯೊಬ್ಬ ಪ್ರಜೆಗೆ ಗೌರವ ನೀಡಬೇಕು. ದೇಶದಲ್ಲಿ ಸಮಾನತೆ, ಸಮಾನ ಕಾನೂನು ಸಂರಕ್ಷಣೆ, ಶೋಷಣೆ ರಹಿತ ಆರೋಗ್ಯಪೂರ್ಣ ಪರಿಸರದಲ್ಲಿ ಗೌರವಯುತ ಜೀವನ ನಡೆಸುವ ಹಕ್ಕು ನೀಡಲಾಗಿದೆ. ಆಯ್ಕೆಯ ವೃತ್ತಿ ಮಾಡುವುದರ ಜೊತೆಗೆ ಕಲಿಕೆಯ ಹಕ್ಕು, ದೇಶದ ಯಾವುದೇ ಸ್ಥಳಕ್ಕೆ ಹೋಗಲು, ಅಲ್ಲಿ ವಾಸಿಸಲು, ಆತ್ಮಸಾಕ್ಷಿ, ಧಾರ್ಮಿಕ ಮತ್ತು ನಂಬಿಕೆಯ ಸ್ವಾತಂತ್ರ್ಯದ ಹಕ್ಕು ನಮ್ಮೆಲ್ಲರದಾಗಿದೆ. ಇದನ್ನೆಲ್ಲರು ಸಂರಕ್ಷಿಸಬೇಕು ಎಂದರು.
ಹೆಚ್ಚುವರಿ ಪೋಲಿಸ್ ಅಧೀಕ್ಷಕ ಎನ್. ಶ್ರೀನಿಧಿ ಮಾತನಾಡಿ, ಕಾನೂನು ಹಾಗೂ ನ್ಯಾಯಾಲಯದ ಮುಂದೆ ಪ್ರತಿಯೊಬ್ಬರು ಸಮಾನರು. ವ್ಯಕ್ತಿಯನ್ನು ಲಿಂಗ, ಜಾತಿ, ಭಾಷೆ ಬಣ್ಣ, ಧರ್ಮ, ನಂಬಿಕೆ, ರಾಜಕೀಯ ಆಸಕ್ತಿ, ಅಭಿಪ್ರಾಯ, ರಾಷ್ಟ್ರೀಯತೆ, ಸಾಮಾಜಿಕ ಸ್ಥಾನಮಾನ, ಹಣಕಾಸಿನ ಸ್ಥಿತಿ, ಹುಟ್ಟು ಹಾಗೂ ಇತರೇ ಕಾರಣಗಳಿಂದ ಭೇದಭಾವ ಮಾಡುವಂತಿಲ್ಲ. ಯಾವುದೇ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯದ ಭಾಷೆ ಅರ್ಥವಾಗದಿದ್ದರೆ, ಉಚಿತ ಭಾಷಾಂತರಕಾರರನ್ನು ಹೊಂದುವ ಹಕ್ಕು ಸಹ ಆರೋಪಿಗೆ ನೀಡಲಾಗಿದೆ ಎಂದ ಅವರು, ಪೊಲೀಸರು ಕರ್ತವ್ಯ ನಿರ್ವಹಣೆಯಲ್ಲಿ ಮಾನವ ಹಕ್ಕುಗಳು ಪಾಲನೆ ಕುರಿತು ಅಗತ್ಯ ಕಾನೂನು ಸಲಹೆಗಳನ್ನು ನೀಡಿದರು.
ಕಲಬುರಗಿ ಬಾರ ಅಸೋಸಿಶಿಯನ್ ಪ್ರಧಾನ ಕಾರ್ಯದರ್ಶಿ ಪಿ.ಎನ್.ಕಪನೂರ ಮಾತನಾಡಿ, ದೈನಂದಿನ ನಿತ್ಯ ಜೀವನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದನ್ನು ನೋಡುತ್ತಿವೆ. ಇದನ್ನ ನಾವೆಲ್ಲರು ಪ್ರತಿಭಟಿಸಬೇಕು. ನಾವು ಕೆಲಸ ಮಾಡುವ ಸ್ಥಳದಲ್ಲಿ ಹಕ್ಕಿನ ರಕ್ಷಣೆಗೆ ಮುಂದಾಗಬೇಕು ಎಂದರು.
ಕಲಬುರಗಿ ಮಹಾನಗರ ಪಾಲಿಕೆಯ ಉಪ ಆಯುಕ್ತ ಪ್ರಕಾಶ ರಜಪೂತ ಅವರು ಸಹ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಾನವ ಹಕ್ಕುಗಳು-ಜಾಗೃತಿ-ರಕ್ಷಣೆ-ನೆರವು ಮಾಹಿತಿವುಳ್ಳ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಜಿಲ್ಲಾಡಳಿತ ಕಚೇರಿಯ ಶಿಷ್ಠಾಚಾರ ತಹಶೀಲ್ದಾರ ಸೈಯದ್ ನಿಸಾರ ಅಹ್ಮದ್ ಅವರು ಮಾನವ ಹಕ್ಕುಗಳ ದಿನಾಚರಣೆಯ ಪ್ರತಿಜ್ಞಾ ವಿಧಿ ಬೋಧಿಸಿದರು. ಸಿದ್ದಾರ್ಥ ಕಾನೂನು ಕಾಲೇಜಿನ ವಿದ್ಯಾರ್ಥಿಗಳಾದ ಶರಣಯ್ಯ ಮತ್ತು ಕಾರ್ತಿಕ್ ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಉಲ್ಲಂಘನೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶರಣಬಸಪ್ಪ ಬೆಣ್ಣೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಶೇಖರ ಮಾಲಿ, ಆರ್.ಸಿ.ಹೆಚ್. ಅಧಿಕಾರಿ ಡಾ. ಪ್ರಭುಲಿಂಗ ಮಾನಕರ್, ವಿಜ್ಞಾನೇಶ್ವರ ಸರ್ಕಾರಿ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಶಿವಾನಂದ ಪಾಟೀಲ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಅನೇಕ ಸಂಘ-ಸಂಸ್ಥೆಗಳ ಮುಖಂಡರು, ಪ್ರತಿನಿಧಿಗಳು ಇದ್ದರು.
ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ನಿರ್ದೇಶಕ ಡಾ. ಶಿವಶರಣಪ್ಪ ಧನ್ನಿ ಸ್ವಾಗತಿಸಿ ವಂದಿಸಿದರು. ಲೆಕ್ಕ ಪರಿಶೋಧನಾ ಅಧಿಕಾರಿ ಮಂಜುಳಾ ಎಸ್. ಕಾರ್ಯಕ್ರಮ ನಿರೂಪಿಸಿದರು.