ಸುರಪುರ: ಜನಪದ ಕಲೆ, ಪರಂಪರೆ, ಸಾಹಿತ್ಯ, ಸಂಸ್ಕೃತಿಗೆ ತನ್ನದೆ ಆದ ವಿಶಿಷ್ಟಪೂರ್ಣವಾದ ಇತಿಹಾಸವಿದೆ ಎಂದು ಸಾಹಿತಿ ಕನಕಪ್ಪ ವಾಗಣಗೇರಿ ಹೇಳಿದರು. ಜನಪದ ಕಲಾಲೋಕ ರಂಗಪೇಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ದೇವತ್ಕಲ್ ಗ್ರಾಮದಲ್ಲಿ ಆಯೋಜಿಸಿದ್ದ ಜನಪದ ಉತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದ ಅವರು, ಜನಪದ ಪರಂಪರೆಗೆ ಬಹುದೊಡ್ಡ ಇತಿಹಾಸವಿದ್ದು, ಕಿವಿಯಿಂದ ಕಿವಿಗೆ, ಬಾಯಿಂದ ಬಾಯಿಗೆ, ಪರಂಪರೆಯಿಂದ ಪರಂಪರೆವರೆಗೆ ಈ ಸಂಸ್ಕೃತಿ ಬೆಳೆದು ಬಂದಿದ್ದು, ಇದರ ಬೆಳವಣಿಗೆಯ ಹಿಂದೆ ಅನೇಕ ಜನ ಅನಕ್ಷರ ಪರಂಪರೆಯ ಕಲಾವಿಧರ ಶ್ರಮವಿದೆ ಎಂದು ಹೇಳಿದರು.
ಕಾರ್ಯಕ್ರಮದ ಸಾನಿದ್ಯವನ್ನು ಗ್ರಾಮದ ಸಾಯಬಣ್ಣ ಮುತ್ಯ ವಹಿಸಿದ್ದರು, ಪ್ರಮುಖರಾದ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿಧ ಶಿವಪ್ಪ ಹೆಬ್ಬಾಳ ಹಾಗೂ ಮುಖಂಡರಾದ ಜಾಲದೇವ, ಚಿದಾನಂದ, ನಿಂಗಣ್ಣ, ಚಂದಪ್ಪ ಸೇರಿದಂತೆ ಅನೇಕರಿದ್ದರು.
ಇದೇ ಸಂದರ್ಭದಲ್ಲಿ ಕಲಾವಿಧರಿಂದ ಜನಪದ ಗಾಯನ, ಗೀಗಿಪದ, ತತ್ವಪದ, ಮೋಹರಂ ಪದ, ಭಜನಾ ಪದ, ಸಂಪ್ರದಾಯದ ಹಾಡುಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಕಲಾವಿಧರು ನಡೆಸಿಕೊಟ್ಟರು, ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ರತ್ತಾಳ, ಕಾರ್ಯದರ್ಶಿ ಬಲಭೀಮ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತಿಯಲ್ಲಿದ್ದರು. ಹಣಮಂತ್ರಾಯ ದೇವತ್ಕಲ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.