ಕಲಬುರಗಿ: ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಪರಿಶಿಷ್ಟ ಜಾತಿ-ಪಂಗಡ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಕ್ಕೆ ಅರ್ಹ ಫಲಾನುಭವಿಗಳನ್ನು ಇದೇ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ ತಮ್ಮ ಕಚೇರಿಯಲ್ಲಿ ಕರ್ನಾಟಕ ಅನುಸೂಚಿತ ಜಾತಿಗಳ ಉಪ ಯೋಜನೆ ಮತ್ತು ಅನುಸೂಚಿತ ಬುಡಕಟ್ಟುಗಳ ಉಪ ಯೋಜನೆ ಅಧಿನಿಯಮ-2013ರ ಸೆಕ್ಷನ್-13 ರಂತೆ ಕಲಬುರಗಿ ಜಿಲ್ಲೆಯ ಮೂರನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಮಾರ್ಚ್ ಒಳಗಾಗಿ ಪ್ರಸಕ್ತ ಸಾಲಿನ ಆರ್ಥಿಕ ಮತ್ತು ಭೌತಿಕ ಸಾಧನೆ ಶೇ.100ರಷ್ಟು ತಲುಪಬೇಕು ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಭವ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಲ್ಲಿ ಪ್ರಸಕ್ತ 2022-23ನೇ ಸಾಲಿಗೆ 1,502 ಫಲಾನುವಿಗಳನ್ನು ಆಯ್ಕೆ ಮಾಡಬೇಕಾಗಿದೆ. ಆದರೇ ಇದೂವರೆಗೆ ಯಾವುದೇ ನಿಗಮದಿಂದ ಆಯ್ಕೆ ಮಾಡದಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು ಕೂಡಲೆ ಶಾಸಕರಿಂದ ದಿನಾಂಕ ಪಡೆದು ಆಯ್ಕೆ ಪ್ರಕ್ರಿಯೆ ಮುಗಿಸಬೇಕು. ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿರಬೇಕು. ಸೌಲಭ್ಯ ಪಡೆದವರನ್ನು ಮತ್ತೆ ಸೌಲಭ್ಯ ನೀಡಬಾರದು. ಯಾವುದೇ ಹಗರಣಗಳಿಗೆ ಇಲ್ಲಿ ಅವಕಾಶ ನೀಡಕೂಡದು ಎಂದು ನಿಗಮದ ಅಧಿಕಾರಿಗಳಿಗೆ ಡಿ.ಸಿ. ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ವಸತಿ ಹಂಚಿಕೆ ಆಯ್ಕೆ ಪೂರ್ಣಗೊಳಿಸಿ: ವಿವಿಧ ವಸತಿ ಯೋಜನೆಗಳಲ್ಲಿ ಜಿಲ್ಲೆಯ ನಗರ ಪ್ರದೇಶದಲ್ಲಿ ಶೇ.94ರಷ್ಟು ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಆದರೇ ಗ್ರಾಮೀಣ ಭಾಗದಲ್ಲಿ ಫಲಾನುಭವಿಗಳನ್ನು ಇದೂವರೆಗೆ ಏಕೆ ಆಯ್ಕೆ ಮಾಡಿಲ್ಲ ಎಂದು ಸಭೆಯಲ್ಲಿದ್ದ ಜಿ.ಪಂ. ಸಿ.ಪಿ.ಓ ಕಿಶೋರಕುಮಾರ ದುಬೆ ಅವರನ್ನು ಡಿ.ಸಿ. ಪ್ರಶ್ನಿಸಿದರು. 2-3 ಬಾರಿ ಗ್ರಾಮ ಸಭೆ ನಡೆಸಲಾಗಿದೆ, ಪ್ರತಿ ಸಭೆಯಲ್ಲಿ ಗ್ರಾಮಸ್ಥರ ಆಕ್ಷೇಪಣೆ ಬರುತ್ತಿರುವುದರಿಂದ ಆಯ್ಕೆ ಪ್ರಕ್ರಿಯೆ ಅಂತ್ಯವಾಗಿಲ್ಲ ಎಂದು ಕಿಶೋರಕುಮಾರ ದುಬೆ ಉತ್ತರಿಸಿದರು. ಜಿ.ಪಂ. ಸಿ.ಇ.ಓ. ಅವರು ಸೂಕ್ತ ತೀರ್ಮಾಣ ಕೈಗೊಂಡು ಕೂಡಲೆ ವಸತಿ ರಹಿತರಿಗೆ ಮನೆ ಹಂಚಿಕೆ ಮಾಡಬೇಕು ಎಂದು ಯಶವಂತ ವಿ. ಗುರುಕರ್ ನಿರ್ದೇಶನ ನೀಡಿದರು.
ಸಭೆಯಲ್ಲಿ ಡಿ.ಸಿ.ಪಿ. ಅಡ್ಡೂರು ಶ್ರೀನಿವಾಸಲು, ಎ.ಸಿ.ಪಿ. ದೀಪನ್ ಎಂ.ಎನ್., ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.