ಕಲಬುರಗಿ: ನಾಡು ಕಂಡ ಶ್ರೇಷ್ಟ ಸಾಹಿತಿಗಳಲ್ಲಿ ಒಬ್ಬರಾದ ಕುಮಾರವ್ಯಾಸನು ರಚಿಸಿದ ‘ಕರ್ಣಾಟ ಭಾರತ ಕಥಾಮಂಜರಿ’ ಎಂದು ಪ್ರಸಿದ್ಧಿ ಪಡೆದ ‘ಕುಮಾರವ್ಯಾಸ ಭಾರತ’ ಮೇರು ಕೃತಿಯಾಗಿದೆ. ಇದರಲ್ಲಿ ಸಮಾಜ ಸೇವೆ, ಯೋಜನೆಯ ಪರಿಣಾಮಕಾರಿ ಅನುಷ್ಠಾನ, ನಾಯಕ, ಆಡಳಿತಗಾರನಿಗೆ ಇರಬೇಕಾದ ದೂರದೃಷ್ಟಿ ಸೇರಿದಂತೆ ಅನೇಕ ಮೌಲ್ಯಗಳನ್ನು ಹೊಂದಿದ್ದು, ಆಡಳಿತಗಾರರಿಗೆ ಮಾರ್ಗದರ್ಶಕನಾಗಿದ್ದು, ಅಧ್ಯಯನ ಅಗತ್ಯವಾಗಿದೆ ಎಂದು ಕರ್ನಾಟಕ ಗಮಕ ಕಲಾ ಪರಿಷತ್‍ನ ಜಿಲ್ಲಾ ಪ್ರತಿನಿಧಿ, ಸಾಹಿತಿ ಡಾ.ಸವಿತಾ ಸಿರಗೋಜಿ ಅಭಿಪ್ರಾಯಪಟ್ಟರು.
ನಗರದ ಗೋದುತಾಯಿ ನಗರದಲ್ಲಿ ಪರಿಷತ್ ಮತ್ತು ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಂಯುಕ್ತ ಆಶ್ರಯದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ‘ಕುಮಾರವ್ಯಾಸ್‍ನ 603ನೇ ಜಯಂತಿ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಸಂಬಂಧಗಳು ಕ್ಷೀಣಿಸುತ್ತಿರುವ ಇಂದಿನ ಕಾಲದಲ್ಲಿ ಕುಮಾರವ್ಯಾಸ್‍ನ ಕುರಿತು ಓದು ನಮ್ಮಲ್ಲಿ ಹೊಸ ಯಫಚನೆಗಳು ಮೂಡಿಸಲು ಪ್ರೇರಕವಾಗುತ್ತದೆ. ಸಾಮಾಜಿಕ ಕಳಕಳಿಯಿಂದ ಸಾಹಿತ್ಯ ರಚನೆ ಮಾಡಿದ್ದಾನೆ ಗಮಕಕ್ಕೆ ಕುಮಾರವ್ಯಾಸನೇ ಆರಾಧ್ಯ ದೈವವಾಗಿದ್ದಾನೆ. ಚತುರ್ಭಾಷಾ ಪಂಡಿತನಾಗಿದ್ದ ಆತ, ತನ್ನದೇ ಆದ ಮೌಲಿಕ ಸಾಹಿತ್ಯವನ್ನು ರಚಿಸಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾನೆ. ‘ಕುಮಾರವ್ಯಾಸ ಹಾಡಿದನೆಂದರೆ, ಕಲಿಯುಗ, ದ್ವಾಪಾರವಾಗುವುದು’ ಎಂಬ ಕುವೆಂಪು ಅವರ ಮಾತು ಕುಮಾರವ್ಯಾಸನ ವ್ಯಕ್ತಿತ್ವ ಗೋಚರವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ವೀರಣ್ಣ ಸಿರಗೋಜಿ, ಶಿವಯೋಗಪ್ಪ ಬಿರಾದಾರ, ಡಾ.ದತ್ತಾತ್ರಯ ಜೋಶಿ, ರಮಾಬಾಯಿ ಜೋಶಿ, ವಿಜಯಲಕ್ಷ್ಮೀ ಸಿರಗೋಜಿ, ಸುಮಂಗಲಾ ಸಿಂಪಿ, ಶ್ವೇತಾ ಸಿಂಪಿ, ಉಮೇಶ ಸಿರಗೋಜಿ, ನಿಖಿತಾ ಸಿರಗೋಜಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.