ಕಲಬುರಗಿ: ರಾಜ್ಯ ಮತ್ತು ಕೇಂದ್ರ ಸರ್ಕಾರ ಹತ್ತಾರು ಯೋಜನೆಗಳನ್ನು ಬ್ಯಾಂಕ್ ಸಾಲದ ಮೂಲಕ ಜಾರಿಗೊಳಿಸುತ್ತಿದ್ದು, ಬ್ಯಾಂಕ್‍ಗಳಿಗೆ ಬರುವ ರೈತರು ಸೇರಿದಂತೆ ಗ್ರಾಹಕರಿಗೆ ಅನಗತ್ಯ ಓಡಾಡಿಸದೇ ಸಾಲಕ್ಕೆ ಅರ್ಹರಿದ್ದಲ್ಲಿ ಕೂಡಲೆ ಸಾಲ ಮಂಜೂರು ಮಾಡಬೇಕು ಎಂದು ಬ್ಯಾಂಕರ್ಸ್‍ಗಳಿಗೆ ಸಂಸದ ಡಾ.ಉಮೇಶ ಜಾಧವ ನಿರ್ದೇಶನ ನೀಡಿದರು.
ಮಂಗಳವಾರ ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಡಿ.ಸಿ.ಸಿ./ ಡಿ.ಎಲ್.ಆರ್.ಸಿ. ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಲ ಕೇಳಿ ಬರುವ ಗ್ರಾಹಕರಿಗೆ ಸರಿಯಾಗಿ ಮಾಹಿತಿ ನೀಡದೇ ಅನಗತ್ಯ ಕಿರಿಕಿರಿ ನೀಡಲಾಗುತ್ತದೆ ಎಂಬ ಸಾಮಾನ್ಯ ಆರೋಪ ಬ್ಯಾಂಕರ್‍ಗಳ ಮೇಲಿದ್ದು, ಇದರಿಂದ ಬ್ಯಾಂಕ್‍ಗಳು ಹೊರಬಂದು ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಮುಂದಾಗಬೇಕು ಎಂದು ಕರೆ ನೀಡಿದರು.
ರೈತಾಪಿ ವರ್ಗದವರು ಸಾಲ ಪಡೆದು ಮರುಪಾವತಿಸದೇ ಸಂದರ್ಭದಲ್ಲಿ ಇದರಿಂದ ಆಗುವ ಅನಾನುಕೂಲತೆಗಳ ಕುರಿತು ಅನ್ನದಾತರಿಗೆ ಜಾಗೃತಿ ಮೂಡಿಸಬೇಕು. ಮುದ್ರಾ ಸೇರಿದಂತೆ ಅನೇಕ ಸಾಲದ ಯೋಜನೆಗಳನ್ನು ಗರಿಷ್ಠ ಪ್ರಮಾಣದಲ್ಲಿ ಜನರಿಗೆ ನೀಡುವ ಮೂಲಕ ಪ್ರದೇಶದಲ್ಲಿ ಆರ್ಥಿಕ ಅಭಿವೃದ್ಧಿಗೆ ಬ್ಯಾಂಕ್‍ಗಳು ಸಹಕರಿಸಬೇಕೆಂದರು.
ಮುದ್ರಾ ಯೋಜನೆಯಡಿ 50 ರಿಂದ 10 ಲಕ್ಷ ರೂ. ಸಾಲ ನೀಡಬಹುದಾಗಿದ್ದು, ಜಿಲ್ಲೆಯ ಅರ್ಹ ಸಣ್ಣ-ಪುಟ್ಟ ಉದ್ಯಮಿಗಳಿಗೆ ಸಾಲ ನೀಡಬೇಕು. ಸ್ಟ್ಯಾಂಡಪ್ ಇಂಡಿಯಾ ಸ್ಕೀಂನಲ್ಲಿ ಎಸ್‍ಸಿ-ಎಸ್‍ಟಿ ಸಮುದಾಯದವರಿಗೆ ಮ್ಯಾನುಫ್ಯಾಕ್ಚರ್ ಹಾಗೂ ಸರ್ವಿಸ್‍ಗೆ 10 ಲಕ್ಷ ರೂ. ಗಳಿಂದ 1 ಕೋಟಿ ರೂ. ವರೆಗೆ ಲೋನ್ ನೀಡಲು ಅವಕಾಶವಿದೆ. ಇವೆಲ್ಲ ಯೋಜನೆಗಳ ಬಗ್ಗೆ ಹೆಚ್ಚಿನ ಪ್ರಚಾರ ನೀಡಿ ಕಟ್ಟುನಿಟಾಗಿ ಅನುಷ್ಠಾನ ಮಾಡಬೇಕು ಎಂದರು.
ಪಿ.ಎಂ.ಸ್ವನಿಧಿ ಸಾಲ ಬಿಡುಗಡೆಯಲ್ಲಿ ಕಲಬುರಗಿ ನಂ-1: ನಬಾರ್ಡ್ ಡೆಪ್ಯೂಟಿ ಮ್ಯಾನೇಜರ್ ರಮೇಶ ಭಟ್ ಮಾತನಾಡಿ, ಪಿ.ಎಂ.ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಂದÀ್ಕಲಬುರಗಿ ಜಿಲ್ಲೆಯಲ್ಲಿ ಸಲ್ಲಿಕೆಯಾದ 11,300 ಅರ್ಜಿಗಳ ಪೈಕಿ 8,766 ಅರ್ಜಿಗಳನ್ನು ವಿಲೇವಾರಿ ಮಾಡಿ ತಲಾ 10 ಸಾವಿರ ರೂ. ಗಳಂತೆ 4.26 ಕೋಟಿ ರೂ. ಸಾಲ ನೀಡಿದ್ದು, ಇದು ಈ ಯೋಜನೆಯಡಿ ರಾಜ್ಯದಲ್ಲಿಯೇ ಗರಿಷ್ಠ ಸಾಲ ವಿತರಣೆಯಾಗಿದೆ. ನೀಡಲಾದ 10 ಸಾವಿರ ರೂ. ಸಾಲ ಮರುಪಾವತಿಸಿ 3,526 ಜನ ಫಲಾನುಭವಿಗಳು ಮತ್ತೇ 20 ಸಾವಿರ ರೂ. ಸಾಲ ಪಡೆದಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ಕಲಬುರಗಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸದಾಶಿವ ರಾತ್ರಿಕರ್ ಮಾತನಾಡಿ ಪ್ರಸಕ್ತ 2022-23ನೇ ಸಾಲಿಗೆ ಕೃಷಿ, ಶಿಕ್ಷಣ, ಕೈಗಾರಿಕೆ ಹೀಗೆ ಆದ್ಯತೆ ವಲಯಕ್ಕೆ ಶೇ.40 ರಷ್ಟು ಸಾಲ ನೀಡುವಂತೆ ಗುರಿ ನೀಡಲಾಗಿದ್ದು, ಇದನ್ನು ಮೀರಿ ಶೇ.67ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಸಾಲ ವಿತರಣೆ ಅಂಕಿ-ಸಂಖ್ಯೆಯ ಕುರಿತು ಸಭೆಯ ಗಮನಕ್ಕೆ ತಂದರು.
ಇದೇ ಸಂದರ್ಭದಲ್ಲಿ ನಬಾರ್ಡ್ ಬ್ಯಾಂಕಿನ 2023-24ನೇ ಸಾಲಿನ 8,800 ಕೋಟಿ ರೂ. ಗಳ ಕ್ರಿಯಾ ಯೋಜನೆ ಪುಸ್ತಕ ಬಿಡುಗಡೆಗೊಳಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಡಿ. ಬದೋಲೆ, ಎಸ್.ಬಿ.ಐ. ಪ್ರಾದೇಶಿಕ ವಲಯದ ವ್ಯವಸ್ಥಾಪಕಿ ಸುಮಾ ಹೆಚ್., ಲೀಡ್ ಬ್ಯಾಂಕಿನ ವಿತ್ತಿಯ ಸಾಕ್ಷರತೆ ಸಲಹೆಗಾರ ಗೋಪಾಲ ಕುಲಕರ್ಣಿ, ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಜಗದೇವಪ್ಪ ಸೇರಿದಂತೆ ವಿವಿಧ ಬ್ಯಾಂಕುಗಳ ಹಿರಿಯ ಅಧಿಕಾರಿಗಳು ಇದ್ದರು.