ಸುರಪುರ:ನಗರದ ಡಾ:ಬಿ.ಆರ್ ಅಂಬೇಡ್ಕರ್ ನಗರಕ್ಕೆ ಹೊಂದಿಕೊಂಡಿರುವ ಬುದ್ಧ ವಿಹಾರದಲ್ಲಿ ಅನೈತಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿದ್ದು ಇದನ್ನು ತಡೆಯುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಆಗ್ರಹಿಸಿದರು.
ನಗರದ ಪೊಲೀಸ್ ಠಾಣೆಯ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿ ಉಪ ನಿರೀಕ್ಷಕರಿಗೆ ಮನವಿ ಸಲ್ಲಿಸಿ ಮಾತನಾಡಿ,ಬುದ್ಧ ವಿಹಾರ ಮತ್ತು ಅಂಬೇಡ್ಕರ್ ಸಮುದಾಯ ಭವನದಲ್ಲಿ ಕುಡಿತ ಇಸ್ಪೀಟ ಆಟದಂತ ಅನೈತಿಕ ಚಟುವಟಿಕೆಗಳನ್ನು ಕಿಡಿಗೇಡಿಗಳು ನಡೆಸುತ್ತಿದ್ದು ಇದರಿಂದ ಬುದ್ಧ ವಿಹಾರದಲ್ಲಿನ ವಾತಾವರಣವೆ ಕಲುಷಿತವಾಗುತ್ತಿದೆ.
ಈ ಸ್ಥಳದಲ್ಲಿ ಅನೇಕರು ವಾಯುವಿಹಾರಕ್ಕೆ ಬರುತ್ತಾರೆ,ಮದ್ಯ ಸೇವಿಸಿ ಬಾಟಲಿಗಳು ಎಲ್ಲೆಂದರಲ್ಲಿ ಎಸೆಯುವುದರಿಂದ ಜನರಿಗೆ ತೀವ್ರ ತೊಂದರೆಯಾಗುತ್ತಿದೆ.ಇದರ ಕುರಿತು ಈ ಹಿಂದೆ ಸುರಪುರ ಬಂದ್ ಮಾಡಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿತ್ತು,ಈಗ ಮತ್ತೆ ಒತ್ತಾಯಿಸುತ್ತಿದ್ದು ಕೂಡಲೇ ಬುದ್ಧ ವಿಹಾರಕ್ಕೆ ನಿತ್ಯವು ಪೊಲೀಸರನ್ನು ನಿಯೋಜಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಾನಪ್ಪ ಕಟ್ಟಿಮನಿ,ಆರ್.ಎಸ್ ಮಾಲಗತ್ತಿ,ಜೆಟ್ಟೆಪ್ಪ ನಾಗರಾಳ,ಬುದ್ಧಿವಂತ ನಾಗರಾಳ,ಖಾಜಾಹುಸೇನ ಗುಡಗುಂಟಿ,ಮಹೇಶ ಯಾದಗಿರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.