ಬೆಂಗಳೂರು: ಭರತ ಖಂಡವು ಇಡೀ ವಿಶ್ವದಲ್ಲೇ ತನ್ನ ಸಂಸ್ಕøತಿ ಮತ್ತು ಸಂಸ್ಕಾರಗಳಿಂದ ವಿಶಿಷ್ಟ ಸ್ಥಾನವನ್ನು ಗಳಿಸಿದ ಕಾರಣ ಇಲ್ಲಿ ಸಾಧು ಸಂತರು ಸತ್ಪುರುಷರು ಮತ್ತು ಋಷಿಮುನಿಗಳು ತಮ್ಮ ಅಖಂಡವಾದ ತಪಃಗಳಿಂದ ಈ ಭರತಖಂಡವನ್ನು ಆಧ್ಯಾತ್ಮಿಕವಾಗಿ ಶ್ರೀಮಂತಿಗೊಳಿಸಿದ್ದಾರೆ. ಅಂತಹ ಪಂಕ್ತಿಯಲ್ಲಿ ಶ್ರೀ ಕ್ಷೇತ್ರ ಮರಳೆಗವಿಮಠವು ಒಂದಾಗಿದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ತ್ರಿವಿಧ ದಾಸೋಹಮೂರ್ತಿಗಳು, ಪರಮ ತಪೆÇೀನಿಷ್ಠರು ಪರಮಪೂಜ್ಯ ಲಿಂಗೈಕ್ಯ ಶ್ರೀ ಸ್ವಚರಮೂರ್ತಿ: ಕಾಲಾಗ್ನಿ ರುದ್ರಮುನಿಮಹಾಸ್ವಾಮಿಗಳವರ 11ನೇ ವರ್ಷದ ಸಂಸರಣೋತ್ಸವ, ಶ್ರೀ ಶಿವಯೋಗಿ ಮುನೀಶ್ವರಸ್ವಾಮಿ ವಿದ್ಯಾಪೀಠದ ಸುವರ್ಣ ಮಹೋತ್ಸವದ ಸವಿನೆಪಿಗಾಗಿ ಶಾಲಾ- ಕಾಲೇಜುಗಳ ಕಟ್ಟಡ ನಿರ್ಮಾಣಕ್ಕಾಗಿ ಶಿಲಾನ್ಯಾಸ ಮತ್ತು ವಿದ್ಯಾಪೀಠದ 10ನೇ ವರ್ಷದ ಶಾಲಾ ಕಾಲೇಜುಗಳ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಶಿವರುದ್ರ ಮಹಾಸ್ವಾಮಿಗಳವರ ಮಹಾಸ್ವಾಮಿಗಳು ತಮ್ಮ ಬಾಲ್ಯವಸ್ಥೆಯಲ್ಲಿ ಸನ್ಯಾಸಾಶ್ರಮ ಸ್ವೀಕರಿಸಿ ತಮ್ಮ ಗುರುಗಳಾದ ಶ್ರೀ ಕಾಲಾಗ್ನಿರುದ್ರಮುನಿ ನೆಚ್ಚಿನ ಶಿಷ್ಯರಾಗಿ ‘ಬಸವಾದಿ ಶಿವಶರಣರ ಸಂದೇಶಗಳನ್ನು ತಮ್ಮ ಜೀವನದ ಉಸಿರಾಗಿಸಿಕೊಂಡು ತಮ್ಮ ಬದುಕನ್ನು ಶ್ರೀಗಂಧದ ಕೊರಡಿನಂತೆ ತೇಯ್ದು ಸಂಸ್ಕಾರದ ಸುಗಂಧವನ್ನು ಸಮಾಜಕ್ಕೆ ನೀಡಿದ್ದಾರೆ. ನೊಂದವರು ದೀನದಲಿತರ ಮತ್ತು ದುರ್ಬಲವರ್ಗದವರ ಬದುಕಿಗೆ ಸ್ಪಂದಿಸಿದ್ದಾರೆ. ಮೇಲು-ಕೀಳು ಬಡವ ಬಲ್ಲಿದ ಭಾವನೆಗಳನ್ನು ತೊಡೆದು ಸಕಲರನ್ನು ಅಪ್ಪಿಕೊಳ್ಳುವ ವಿಶಾಲ ಭಾವನೆಯನ್ನು ಹೊಂದಿದ ಪೂಜ್ಯರು ಶ್ರೀ ಮಠವನ್ನು ಮುನ್ನಡೆಸುತ್ತಿದ್ದಾರೆ ಎಂದರು.
ಕನಕಪುರ ತಾಲ್ಲೂಕು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವುದನ್ನು ಮನಗೊಂಡ ಮರಳೆಗವಿ ಮಠವು ನಿರ್ಗತಿಕ ಮಕ್ಕಳಿಗೆ ಉಚಿತವಾಗಿ ಊಟ-ವಸತಿಯೊಂದಿಗೆ ಶಿಕ್ಷಣ ನೀಡುತ್ತಿದೆ. ವಿದ್ಯಾಪೀಠದಿಂದ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ಈ ಸಮಾಜಕ್ಕೆ ತಮ್ಮ ಸೇವೆಯನ್ನು ನೀಡುತ್ತಿರುವುದು ಶ್ಲಾಘನೀಯ ಎಂದ ಅವರು, ಈ ಸ್ಥಳಕ್ಕೆ ಭೇಟಿ ನೀಡಿರುವುದು ಬಹಳ ಸಂತಸ ತಂದಿದೆ ಎಂದರು.
ನಮ್ಮ ಸಾಂಸ್ಕೃತಿಕ ಸಂಪ್ರದಾಯವು ಬಹಳ ಪುರಾತನವಾಗಿದೆ ಮತ್ತು “ಸರ್ವೇ ಭವಂತು ಸುಖಿನೋ, ಸರ್ವೇ ಸಂತು ನಿರಾಮಯ” ಎಂಬ ಮನೋಭಾವದಿಂದ ಪ್ರೇರಿತವಾಗಿದೆ ಪ್ರಾಚೀನ ಕಾಲದಿಂದಲೂ “ವಸುಧೈವ ಕುಟುಂಬಕಂ” ತತ್ವಶಾಸ್ತ್ರ ಮತ್ತು ಧ್ಯಾನವನ್ನು ಕೇಂದ್ರೀಕರಿಸಿದೆ. ಸೇವೆ, ಶಾಂತಿ ಮತ್ತು ಸಮರ್ಪಣೆ ಪ್ರಮುಖ ಆಧಾರಸ್ತಂಭವಾಗಿರುವುದು ಭಾರತದ ಶ್ರೇಷ್ಠ ಸಂಸ್ಕೃತಿ. ಈ ಕಾರಣದಿಂದಾಗಿ ನಮ್ಮ ಸಂಸ್ಕೃತಿಯು ಜಗತ್ತಿನಲ್ಲಿ ತನ್ನ ಛಾಪನ್ನು ಬಲವಾಗಿ ಮೂಡಿಸಿದೆ ಎಂದರು.
ಮುಂದಿನ 25 ವರ್ಷಗಳ ಪ್ರಯಾಣವು ನವ ಭಾರತ ನಿರ್ಮಾಣಕ್ಕೆ ಸುವರ್ಣಯುಗವಾಗಿದೆ. ಈ ಅಮೃತಕಲ್‍ನಲ್ಲಿ ನಮ್ಮ ಸಂಕಲ್ಪಗಳ ಸಾಧನೆಯು ನಮ್ಮನ್ನು ಸ್ವಾತಂತ್ರ್ಯದ 100 ವರ್ಷಗಳವರೆಗೆ ಕೊಂಡೊಯ್ಯುತ್ತದೆ. ಏಕ್ ಭಾರತ್, ಶ್ರೇಷ್ಠ ಭಾರತ ಮತ್ತು ಆತ್ಮನಿರ್ಭರ್ ಭಾರತ್ ಮಾಡುವಲ್ಲಿ ಪ್ರತಿಯೊಬ್ಬ ನಾಗರಿಕರು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಠದ ಪ್ರತಿಭಾನ್ವಿತ ಮಕ್ಕಳಿಗೆ ಗೌರವಾನ್ವಿತ ರಾಜ್ಯಪಾಲರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಡಾ.ಮುಮ್ಮುಡಿ ಶಿವರುದ್ರ ಸ್ವಾಮಿಜಿ, ಸಚಿವ ವಿ ಸೋಮಣ್ಣ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.