ಸತತ ಪರಿಶ್ರಮದಿಂದ ಅಭ್ಯಾಸ ಮಾಡಿದರೆ ಗುರಿ ಮುಟ್ಟಲು ಸಾಧ್ಯ

0
34

ಶಹಾಬಾದ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕಲಿಕಾ ಮನೋಭಾವವನ್ನಿಟ್ಟುಕೊಂಡು ಹೆಚ್ಚು ಹೆಚ್ಚು ವಿಷಯಗಳನ್ನು ಸತತ ಪರಿಶ್ರಮದಿಂದ ಅಭ್ಯಾಸ ಮಾಡಿದರೆ ಮಾತ್ರ ನಿರ್ದಿಷ್ಟ ಗುರಿ ಮುಟ್ಟಲು ಸಾಧ್ಯ ಎಂದು ನಗರದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಹ್ಮದ್‍ಅಬ್ದುಲ್ ರಹೀಮ್ ಹೇಳಿದರು.

ಅವರು ಮಂಗಳವಾರ ನಗರದ ಎಸ್.ಎಸ್.ಮರಗೋಳ ಕಾಲೇಜಿನಲ್ಲಿ ಬಿ.ಎ, ಬಿಎಸ್ಸಿ, ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಂಯಮದಿಂದ ಕಲಿತು ಹೆತ್ತವರಿಗೆ ಹೆಸರನ್ನು ತರಬೇಕು. ವಿದ್ಯೆ ಎನ್ನುವುದು ಯಾರು ಕದಿಯಲಾಗದ ಸಂಪತ್ತು. ಅದನ್ನು ಎಷ್ಟು ಗಳಿಸಿದರೂ ತೆರೆಗೆ ಕಟ್ಟಬೇಕಿಲ್ಲ. ಎಷ್ಟೇ ಖರ್ಚು ಮಾಡಿದರೂ ಖಾಲಿಯಾಗುವುದಿಲ್ಲ. ಬದುಕಿನ ಕೊನೆ ಉಸಿರಿರುವವರೆಗೂ ವಿದ್ಯೆಯನ್ನು ಸಂಪಾದಿಸುತ್ತಲೇ ಇರಬೇಕು.ಕಲಿತ ವಿದ್ಯೆಯನ್ನು ಸಮಾಜದ ಹಿತಕ್ಕೆ ಬಳಸಬೇಕು. ಆಗ ಮಾತ್ರ ಬದುಕಿನ ಸಾರ್ಥಕತೆ ದೊರೆಯುತ್ತದೆ.

ವಿದ್ಯಾರ್ಥಿಗಳಿಗೆ ಮನೋನಿಗ್ರಹ ಅಗತ್ಯ. ಶ್ರದ್ಧೆ ಮತ್ತು ಏಕಾಗ್ರತೆಯಿಂದ ಜ್ಞಾನಾರ್ಜನೆ ಮಾಡಬೇಕು ಎಂದರು.ಅಲ್ಲದೇ ಉನ್ನತ ಹುದ್ದೆ ಹೊಂದಿದ ಅಧಿಕಾರಿಗಳನ್ನು ನೋಡಿ, ನಾವು ಅವರಂತೆ ಆಗಬಲ್ಲೆವು ಎಂಬ ಆತ್ಮಬಲವನ್ನು ಬೆಳೆಸಿಕೊಂಡು, ಆ ಗುರಿಗಾಗಿ ಪ್ರಯತ್ನ ಪಡಬೇಕು. ವಿದ್ಯಾರ್ಥಿಗಳು ಸಮಯಕ್ಕೆ ಮಹತ್ವ ನೀಡಿ, ಮೊಬೈಲ್‍ಗೆ ದಾಸರಾಗದೇ ಜಾಗೃತಿಯಿಂದ ಅಭ್ಯಾಸ ಮಾಡುವುದರ ಜೊತೆಗೆ ಸರಿಯಾದ ನಿರ್ಧಾರ, ಗುರಿಯೊಂದಿಗೆ ಮುನ್ನಡೆಯಬೇಕೆಂದು ಕಿವಿಮಾತು ಹೇಳಿದರು.
ಎಸ್.ಎಸ್.ಮರಗೋಳ ಕಾಲೇಜಿನ ಪ್ರಾಂಶುಪಾಲ ಕೆ.ಬಿ.ಬಿಲ್ಲವ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ನಿರಂತರ ಪರಿಶ್ರಮದಿಂದ ಗುರಿಯಡೆಗೆ ಸಾಗಿದಾಗ ಮಾತ್ರ ಉತ್ತಮ ನಾಗರಿಕರಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದರು.

ಡಾ.ಶಂಕರ, ಡಾ.ದಶರಥ ಜಿಂಗಾಡೆ,ಪ್ರಾಧ್ಯಾಪಕರಾದ ಡಾ.ಬಸವರಾಜ ಹಿರೇಮಠ,ಗಂಗಾಧರ ಸ್ಥಾವರಮಠ, ಎಮ್.ಕೆ.ಬೋತಗಿ, ಡಾ.ಸಿ.ಬಿ ಗಂಧಿಗುಡಿ, ಡಾ.ವೆಂಕಟೇಶ ಪೂಜಾರಿ ವೇದಿಕೆಯ ಮೇಲಿದ್ದರು. ಪ್ರಮೋದ ನಾಟೀಕಾರ ನೃತ್ಯವನ್ನು ನಡೆಸಿಕೊಟ್ಟರು.ಪ್ರೀಯದರ್ಶಿನಿ ನಿರೂಪಿಸಿದರು,ವೈಷ್ಣವಿ ಸ್ವಾಗತಿಸಿದರು, ಗಗನ ವಂದಿಸಿದರು.ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here