ಕಲಬುರಗಿ: ನಿರಂತರ ೯ ವರ್ಷಗಳಿಂದ ಕೇಂದ್ರ ಸರಕಾರ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಬಜೆಟನಲ್ಲಿ ನಿರ್ಲಕ್ಷತನ ಮತ್ತು ಮಲತಾಯಿ ಧೋರಣೆ ಅನುಸರಿಸುವಂತೆ ೨೦೨೩ರ ಬಜೆಟನಲ್ಲಿಯೂ ಸಹ ರಾಜಾರೋಷವಾಗಿ ಮಲತಾಯಿ ಧೋರಣೆ ಅನುಸರಿಸುವುದು ಖಂಡನಿಯ ವಿಷಯವಾಗಿದೆ. ರಾಜ್ಯ ಸರಕಾರವಾದರೂ ಬರುವ ಬಜೆಟನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ತಾಯಿ ಧೋರಣೆ ಅನುಸರಿಸಲು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಒತ್ತಾಯಿಸಿದ್ದಾರೆ.
ಕಳೆದ ಅನೇಕ ದಶಕಗಳಿಂದ ನೆನೆಗುದಿಗೆ ಬಿದ್ದ ರೈಲ್ವೆ ವಿಭಾಗೀಯ ಕಚೇರಿ ಕಲಬುರಗಿಯಲ್ಲಿ ಅಸ್ತಿತ್ವಕ್ಕೆ ತರುವುದನ್ನು ಸಂಪೂರ್ಣ ಕೈಬಿಟ್ತು ನಿರ್ಲಕ್ಷತನ ಮಾಡಿರುವುದು ನ್ಯಾಯವೆ? ಬೀದರ- ಕಲಬುರಗಿಗೆ ಮಂಜೂರಾದ ನೀಮ್ಝ ನೆನೆಗುದಿಗೆ ಹಾಕಿರುವುದು ಈ ಹಿಂದೆ ರಾಯಚೂರಿಗೆ ಮಂಜೂರಾದ ಐ.ಐ.ಟಿ. ಧಾರವಾಡ ಜಿಲ್ಲೆಗೆ ಸ್ಥಳಾಂತರ ಮಾಡಿಕೊಂಡಿರುವುದು ನ್ಯಾಯವೆ? ಏಮ್ಸ ಸಂಸ್ಥೆ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಿಗಬೇಕೆಂದು ಮಾಜಿ ಮುಖ್ಯಮಂತ್ರಿ, ಯಡಿಯೂರಪ್ಪನವರು ಕೇಂದ್ರ ಸರಕಾರದ ಮುಂದೆ ಮಂಡನೆ ಮಾಡಿದರು.
ಆದರೆ ಏಮ್ಸ್ ಸಂಸ್ಥೆ ಸಹ ಹುಬ್ಬಳ್ಳಿ-ಧಾರವಾಡಕ್ಕೆ ಸ್ಥಳಾಂತರ ಮಾಡಿಕೊಳ್ಳುತ್ತಿರುವುದು ನ್ಯಾಯವೆ? ಅಷ್ಟೇ ಅಲ್ಲದ ಕೇಂದ್ರ ಸರಕಾರ ಕಲ್ಯಾಣ ಕರ್ನಾಟಕದ ಬೀದರ, ಕಲಬುರಗಿ, ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳಿಗೆ ಘೋಷಣೆ ಮಾಡಿದ ಬಹುತೇಕ ಯೋಜನೆಗಳು ನೆನೆಗುದಿಗೆ ಹಾಕಿ, ನಿರ್ಲಕ್ಷತನ ಮತ್ತು ಮಲತಾಯಿ ಧೋರಣೆ ಮಾಡುತ್ತಿರುವುದು ಖೇದಕರವಾದ ಸಂಗತಿಯಾಗಿದೆ.
ಈ ಹಿನ್ನಡೆ ನಮ್ಮ ಸಂಸದರಿಗೆ, ಅಪಮಾನದ ವಿಷಯವೆಂಬುದು ಬೇರೆ ಹೇಳಬೇಕಾಗಿಲ್ಲ. ಅಷ್ಟೇ ಅಲ್ಲದೇ ರಾಜ್ಯ ಸರಕಾರವೂ ಸಹ ಕಲ್ಯಾಣ ಕರ್ನಾಟಕಕ್ಕೆ ಸಂಬಂಧಿಸಿದ ಕೇಂದ್ರದ ಯೋಜನೆಗಳ ಅನುಷ್ಠಾನಕ್ಕೆ ತಮಗೆ ಸಂಬಂಧವಿಲ್ಲದಂತೆ, ವರ್ತಿಸುವುದು ನ್ಯಾಯವೆ? ಈ ಪ್ರಶ್ನೆ ಕಲ್ಯಾಣದ ಜನಮಾನಸದಲ್ಲಿ ಸಂಶಯ ಹುಟ್ಟಿಸುವುದಷ್ಟೇ ಅಲ್ಲದೇ, ರಾಜ್ಯ ಸರಕಾರದ ಧೋರಣೆಯ ಬಗ್ಗೆ ತಿರಸ್ಕಾರ ಮನೋಭಾವನೆ ಉಂಟಾಗಿದೆ.
ಬರುವ ರಾಜ್ಯ ಸರಕಾರದ ಬಜೆಟನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು, ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ಯೋಜನೆಗಳು ಮತ್ತು ಹೆಚ್ಚಿನ ಅನುದಾನ ಘೋಷಣೆ ಮಾಡುತ್ತಾರೆಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಕೆ.ಕೆ.ಆರ್.ಡಿ.ಬಿ.ಗೆ ಕನಿಷ್ಠ ೫ ಸಾವಿರ ಕೋಟಿಯಿಂದ ೭ ಸಾವಿರ ಕೋಟಿ, ೩೭೧(ಜೆ) ಕಲಂ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ, ೩೭೧(ಜೆ) ಕಲಂ ಅಡಿ ನೇಮಕಾತಿ ಮತ್ತು ಮುಂಬಡ್ತಿಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಾನದಂಡ ಅನುಸರಿಸುವ ಬೇಡಿಕೆ, ಕೃಷ್ಣಾ ೩ನೇ ಹಂತದ ಕಾಮಗಾರಿಗಳು, ಗೋದಾವರಿ ಕಣಿವೆ ಪ್ರದೇಶದ ಬಾಕಿ ನೀರು ಬಳಸಿಕೊಳ್ಳಲು ಕ್ರಮ ವಹಿಸುವುದು, ಈಗಾಗಲೇ ಘೋಷಣೆ ಮಾಡಿರುವ ಜವಳಿ ಪಾರ್ಕ, ಟೆಕ್ಸಟೈಲ್ ಪಾರ್ಕ ಕಲ್ಯಾಣದಲ್ಲಿ ಸ್ಥಾಪಿಸಬೇಕು. ದಶಕಗಳಿಂದ ನೆನೆಗುದಿಗೆ ಬಿದ್ದ ಕಾರಂಜಾ ಸಂತ್ರಸ್ಥರಿಗೆ ಪರಿಹಾರ ಧನ ಈಡೇರಿಸಲು ಕ್ರಮ ಕೈಗೊಳ್ಳಬೇಕು. ಕಲ್ಯಾಣದ ಸಮತೋಲನ ಅಭಿವೃದ್ಧಿಗೆ ಕೆ.ಕೆ.ಆರ್.ಡಿ.ಬಿ.ಯಿಂದ ವೈಜ್ಞಾನಿಕ ಕ್ರೀಯಾ ಯೋಜನೆ ಕೈಗೊಂಡು ಇದಕ್ಕೆ ರುಟಿನ್ ಬಜೆಟ್ ಮತ್ತು ವಿಶೇಷ ಅನುದಾನದ ಮುಖಾಂತರ ಕಾಲಮಿತಿಯಲ್ಲಿ ಕಲ್ಯಾಣದ ಸಮತೋಲನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಅದರಂತೆ ಕೇಂದ್ರ ಸರಕರದ ಯೋಜನೆಗಳು ಕಾಲಮಿತಿಯಲ್ಲಿ ಜಾರಿಗೆ ಆಗುವಂತೆ ಬಜೆಟ್ ನಲ್ಲಿ ಕೇಂದ್ರಕ್ಕೆ ಒತ್ತಡ ತರಬೇಕು.
ಧರಮಸಿಂಗ ಮತ್ತು ಜಗದೀಶ ಶೆಟ್ಟರ ನಂತರ ಉತ್ತರ ಕರ್ನಾಟಕದವರು ಮುಖ್ಯಮಂತ್ರಿ ಯಾಗಿರುವ ಬಸವರಾಜ ಬೊಮ್ಮಾಯಿರವರು ಪ್ರಸ್ತುತ ಬಜೆಟನಲ್ಲಿ ಕಲ್ಯಾಣಕ್ಕೆ ನ್ಯಾಯ ಕೊಡಿಸದಿದ್ದರೆ, ಕಲ್ಯಾಣದ ಜನರು ಅಖಂಡ ಕರ್ನಾಟಕದಲ್ಲಿ ಇರಬೇಕೆ, ಬೇಡವೇ ಎಂಬ ಸಂಶಯದಲ್ಲಿ ಮತ್ತು ಚಿಂತನೆಯಲ್ಲಿ ತೊಡಗುವಂತಹ ವಾತಾವರಣ ನಿರ್ಮಾಣವಾಗುತ್ತದೆ. ಪ್ರಯುಕ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿರವರು ಪ್ರಸ್ತುತ ಈ ಬಜೆಟನಲ್ಲಿ ಕಲ್ಯಾಣಕ್ಕೆ ನ್ಯಾಯ ಒದಗಿಸಬೇಕೆಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಒತ್ತಾಯಿಸಿದ್ದಾರೆ.