40% ಕಮಿಷನ್ ನಲ್ಲಿ ಸರ್ಕಾರ ಮುಳುಗಿದೆ: ಡಿ.ಕೆ. ಶಿವಕುಮಾರ್

0
8

ಹೊಸದುರ್ಗದ: ಬಿಜೆಪಿಯ ದುರಾಡಳಿತದ ಬಗ್ಗೆ ನಾವು ಪಾಪದ ಪುರಾಣ ಬಿಡುಗಡೆ ಮಾಡಿದ್ದೇವೆ. ಈ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. 40% ಕಮಿಷನ್ ನಲ್ಲಿ ಸರ್ಕಾರ ಮುಳುಗಿದೆ ಎಂದು ಹೊಸದುರ್ಗದ ಪ್ರಜಾಧ್ವನಿ ಸಮಾವೇಶದಲ್ಲಿ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು 22 ಸಾವಿರ ಕೋಟಿಯಷ್ಟು ಅಕ್ರಮ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಅವರ ಮಾತು ಸುಳ್ಳಾಗಿದ್ದರೆ ಸರ್ಕಾರ ಯಾಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನು ಗುತ್ತಿಗೆದಾರರ ಸಂಘದ ಅದ್ಯಕ್ಷ ಕೆಂಪಣ್ಣ ಅವರು ಈ ಸರ್ಕಾರದಲ್ಲಿ 40% ಕಮಿಷನ್ ಇಲ್ಲದೆ ಯಾವುದೇ ಕೆಲಸ ಆಗುವುದಿಲ್ಲ ಎಂದು ಪ್ರಧಾನಿಗೆ ಪತ್ರ ಬರೆದರು.

Contact Your\'s Advertisement; 9902492681

ಈ ಕ್ಷೇತ್ರದ ಜನ ಕೃಷಿ ಆಧರಿಸಿ ಬದುಕುತ್ತಿದ್ದಾರೆ. ರೈತನಿಗೆ ಲಂಚ, ಪಿಂಚಣಿ, ನಿವೃತ್ತಿ ಯಾವುದೂ ಇಲ್ಲ. ಈ ರೈತರು ಮಳೆ, ಭೂಮಿ ಬೆಳೆ ಮೇಲೆ ಅವಲಂಬಿತವಾಗಿದ್ದಾರೆ. ಇವರ ರಕ್ಷಣೆ ಮಾಡಬೇಕಿದೆ. ಈ ಭಾಗದಲ್ಲಿ ತೆಂಗು ಹಾಗೂ ಕೊಬ್ಬರಿ ಬೆಳೆಯುತ್ತಿದ್ದಾರೆ. ಹಿಂದೆ 20 ಸಾವಿರ ಇದ್ದ ಕೊಬ್ಬರಿ ಬೆಲೆ, ಈಗ 10,500 ಆಗಿದೆ. ಕೊಬ್ಬರಿ ಬೆಲೆ ಇಳಿದಿರುವಾಗ ರಸಗೊಬ್ಬರದ ಬೆಲೆ ಏನಾದರೂ ಕಡಿಮೆ ಆಗಿದೆಯಾ? ರೈತರು ಕೊಡುವ ಕೂಲಿ ಕಡಿಮೆ ಆಗಿದೆಯಾ? ಇಲ್ಲ. ಕೃಷಿಗೆ ತಗಲುವ ವೆಚ್ಚ ಹೆಚ್ಚಾಗಿದೆಯೇ ಹೊರತು, ಬೆಳೆಗೆ ಸಿಗುವ ಬೆಲೆ ಮಾತ್ರ ಕಡಿಮೆಯಾಗುತ್ತಿದೆ.

ಮೋದಿ ಅವರು ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದರು. ಮಾಡಿದರಾ? ಇಲ್ಲ. ನಮ್ಮ ಕಾಲದಲ್ಲಿ ಸೋನಿಯಾ ಗಾಂಧಿ ಅವರು ಯುಪಿಎ ಅಧ್ಯಕ್ಷರಾಗಿ, ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಉದ್ಯೋಗ ಖಾತ್ರಿ ಯೋಜನೆಯಡಿ ಕನಿಷ್ಠ ವೇತನ ನಿಗದಿಗೊಳಿಸಿ ವರ್ಷದಲ್ಲಿ 100 ದಿನ ಕೆಲಸ ಸಿಗುವಂತೆ ಮಾಡಿದರು.

ಜೆ.ಹೆಚ್. ಪಟೇಲರು ಸಿಎಂ ಆಗಿದ್ದ ಸಮಯದಲ್ಲಿ ಪ್ರತಿ ಪಂಚಾಯ್ತಿಗೆ 1 ಲಕ್ಷ ಅನುದಾನ ನೀಡುತ್ತಿದ್ದರು. ಕೃಷ್ಣ ಅವರ ಕಾಲದಲ್ಲಿ 25-30 ಲಕ್ಷ ಬರುವಂತೆ ಮಾಡಿದರು. ಯುಪಿಎ ಸರ್ಕಾರ ಕೊಟ್ಟ ನರೇಗಾ ಕಾರ್ಯಕ್ರಮದ ಮೂಲಕ ಪ್ರತಿ ಪಂಚಾಯ್ತಿಗೆ 2-5 ಕೋಟಿಯಷ್ಟು ಕೆಲಸ ಸಿಗುತ್ತಿದೆ. ಹೀಗೆ ಕಾಂಗ್ರೆಸ್ ಪಕ್ಷ ರೈತರು ಹಾಗೂ ಕಾರ್ಮಿಕರ ಬದುಕು ಸುಧಾರಣೆಗೆ ನೆರವಾಗಿದೆ. ನನ್ನ ಕ್ಷೇತ್ರದಲ್ಲಿ ಈ ಯೋಜನೆ ಮೂಲಕ 40 ಸಾವಿರ ರೈತರಿಗೆ ದನದ ಕೊಟ್ಟಿಗೆ ನಿರ್ಮಾಣ ಮಾಡಿಕೊಟ್ಟಿದ್ದೇವೆ.

ಈ ಭಾಗದ ರೈತರು ರಾಗಿ ಬೆಳೆ ಬೆಳೆಯುತ್ತಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ರೈತರಿಂದ 50 ಕ್ವಿಟಾಂಲ್ ರಾಗಿಯನ್ನು ಬೆಂಬಲ ಬೆಲೆಗೆ ಖರೀದಿಸುತ್ತಿದ್ದೆವು, ಈ ಸರ್ಕಾರ ಈಗ ಕೇವಲ 20 ಕ್ವಿಂಟಾಲ್ ಮಾತ್ರ ರಾಗಿ ಖರೀದಿ ಮಾಡುತ್ತಿದೆ. ಬೆಂಬಲ ಬೆಲೆ ನೀಡುತ್ತೇವೆ ಎಂದ ಬಿಜೆಪಿ ಸರ್ಕಾರ ಯಾವುದೇ ನೆರವು ನೀಡುತ್ತಿಲ್ಲ. ಕೋವಿಡ್ ಸಮಯದಲ್ಲೂ ಅವರು ಸಹಾಯಕ್ಕೆ ಬರಲಿಲ್ಲ.

ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳ ಬಗ್ಗೆ ಸರಕಾರಕ್ಕೆ ದಿನನಿತ್ಯ ಪ್ರಶ್ನೆ ಕೇಳುತ್ತಿದ್ದು, ಇದುವರೆಗೂ ನೂರೈವತ್ತಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದೇವೆ. ಈವರೆಗೂ ಒಂದೇ ಒಂದು ಉತ್ತರ ನೀಡಿಲ್ಲ. ಅಧಿಕಾರಕ್ಕೆ ಬಂದರೆ ಸಹಕಾರಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ 1 ಲಕ್ಷವರೆಗೂ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿದರು, ಮಾಡಿದರಾ? ಇವರು ರಸಗೊಬ್ಬರೆ ಬೆಲೆ ಏರಿಕೆ ಮಾಡುತ್ತಿದ್ದಾರೆ. ಇದಕ್ಕೆ ಸಬ್ಸಿಡಿ ನೀಡಬಹುದಿತ್ತು. ಆ ಮೂಲಕ ಬೆಲೆ ಏರಿಕೆ ನಿಯಂತ್ರಿಸಬಹುದಿತ್ತು. ಆದರೆ ಸರ್ಕಾರ ಇದಾವುದನ್ನೂ ಮಾಡಿಲ್ಲ.

ಇನ್ನು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರಿಗೆ 40% ಕಮಿಷನ್ ನೀಡಲಾಗದೇ ಅವರದೇ ಪಕ್ಷದ ಕಾರ್ಯಕರ್ತ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೇವಲ ಆತ ಮಾತ್ರವಲ್ಲ ಅನೇಕರು ಆತ್ಮಹತ್ಯೆ ಮಾಡಿದ್ದಾರೆ. ಈ ಸರ್ಕಾರ ಸೋಲಿನ ಭೀತಿ ಎದುರಾಗಿ ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ನಮ್ಮ ಕಾಲದಲ್ಲಿ ಭ್ರಷ್ಟಾಚಾರ ನಡೆದಿದ್ದರೆ ವಿರೋಧ ಪಕ್ಷದಲ್ಲಿದ್ದ ಬಿಜೆಪಿ ನಾಯಕರು ಯಾಕೆ ಸುಮ್ಮನಿದ್ದರು? ಬಿಜೆಪಿ ಶಾಸಕ ಯತ್ನಾಳ್ ಅವರು,. ಬಿಜೆಪಿ ಎಂಎಲ್ಸಿ ವಿಶ್ವನಾಥ್ ಅವರು ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.

ಈ ಭ್ರಷ್ಟಾ ಸರ್ಕಾರ ತೆಗೆಯುವ ಕೆಲಸ ನೀವು ಮಾಡಬೇಕು. ಬೆಲೆಗಳು ಗಗನಕ್ಕೇರಿದ್ದು, ಆದಾಯ ಪಾತಾಳಕ್ಕೆ ಕುಸಿದಿದೆ. ಪ್ರಜೆಗಳ ನೋವು, ಕಷ್ಟಗಳಿಗೆ ಪರಿಹಾರ ನೀಡಲು ಪ್ರಜಾಧ್ವನಿ ಯಾತ್ರೆ ಆರಂಭಿಸುತ್ತಿದ್ದೇವೆ. ಬಿಜೆಪಿಯವರು ಕಪ್ಪು ಹಣ ತಂದು ನಿಮ್ಮ ಖಾತೆಗೆ 15 ಲಕ್ಷ ಹಾಕುತ್ತೇನೆ ಎಂದು ಹೇಳಿದ್ದರು, ಹಾಕಿದರಾ? ಈ ರೀತಿ ಅವರು ಕೊಟ್ಟ ಅನೇಕ ಮಾತಿನಂತೆ ನಡೆದುಕೊಂಡಿದ್ದಾರಾ?

ಕಾಂಗ್ರೆಸ್ ಪಕ್ಷ ಜನರ ಬದುಕಿಗೆ ಅನುಕೂಲವಾಗುವಂತೆ ಕಾರ್ಯಕ್ರಮ ಕೊಟ್ಟಿದ್ದೇವೆ. ಬಿಜೆಪಿ ಸರ್ಕಾರದಲ್ಲಿ ಯಾವುದಾದರೂ ಒಂದು ಕಾರ್ಯಕ್ರಮ ನೀಡಿದ್ದಾರಾ? ಇಲ್ಲ. ಈ ಸರ್ಕಾರದಲ್ಲಿ ಕೇವಲ ಲಂಚ, ಬಿ ರಿಪೋರ್ಟ್ ಗಳೇ ಸದ್ದು ಮಾಡುತ್ತಿವೆ. ಇವುಗಳಿಗೆ ಕೊನೆ ಹಾಡಲೇಬೇಕು.

ಕೋವಿಡ್ ಸಮಯದಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರ ಜನರಿಗೆ ಸಹಾಯ ಮಾಡಿತಾ?ಇಲ್ಲ. ಸಹಾಯದ ಬದಲು ವಲಸೆ ಕಾರ್ಮಿಕರಿಂದ ಮೂರುಪಟ್ಟು ಟಿಕೆಟ್ ದರ ವಸೂಲಿ ಮಾಡಲು ಮುಂದಾಯಿತು. ಆಗ ನಾವು 1 ಕೋಟಿ ಚೆಕ್ ಬರೆದು ಕೊಟ್ಟಾಗ ಉಚಿತ ಸಂಚಾರ ವ್ಯವಸ್ಥೆ ಕಲ್ಪಿಸಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರಿಗೆ, ಕೋವಿಡ್ ನಿಂದ ಸತ್ತವರಿಗೆ ಪರಿಹಾರ ನೀಡಿದರಾ? ಇಲ್ಲ. ಸರ್ಕಾರದಿಂದ ನೀಡಲಾಗುತ್ತಿದ್ದ ಆಹಾರ ಪ್ಯಾಕೆಟ್ ಗೆ ಅವರ ಫೋಟೋ ಹಾಕಿಕೊಂಡು ಹಂಚುತ್ತಿದ್ದರು. ಕೇಂದ್ರ ಸಚಿವ ಸುರೇಶ್ ಅಂಗಡಿ ಪಾರ್ಥೀವ ಶರೀರವನ್ನು ಜೆಸಿಬಿಯಲ್ಲಿ ಹೂತರು. ಆದರೆ ನನ್ನ ಸಹೋದರ, ನನ್ನ ಕ್ಷೇತ್ರದಲ್ಲಿ ಕೋವಿಡ್ ನಿಂದ ಸತ್ತವರ ಅಂತ್ಯ ಸಂಸ್ಕಾರವನ್ನು ತಾನೇ ಪಿಪಿಇ ಕಿಟ್ ಧರಿಸಿ ಮಾಡಿದರು.

ಅದರ ಜತೆಗೆ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಎರಡು ಗ್ಯಾರಂಟಿ ಯೋಜನೆ ಘೋಷಿಸಿದೆ. ಗೃಹಜ್ಯೋತಿ ಯೋಜನೆ ಮೂಲಕ 200 ಯುನಿಟ್ ವಿದ್ಯುತ್ ಉಚಿತ, ಆಮೂಲಕ ಇನ್ನು ಮುಂದೆ ನೀವು 200 ಯುನಿಟ್ ಒಳಗೆ ವಿದ್ಯುತ್ ಬಳಸಿದರೆ ಯಾರೂ ವಿದ್ಯುತ್ ಬಿಲ್ ಕಟ್ಟುವ ಅಗತ್ಯವಿಲ್ಲ. ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆ ಯಜಮಾನಿಗೆ 2000 ರೂ. ಪ್ರತಿ ತಿಂಗಳು ಕೊಡ್ತೇವೆ. ವರ್ಷಕ್ಕೆ ಒಟ್ಟು 42 ಸಾವಿರದಂತೆ 5 ವರ್ಷಕ್ಕೆ 2 ಲಕ್ಷ ಕೊಡ್ತೆವೆ. ಜತೆಗೆ 10 ಕೆಜಿ ಅಕ್ಕಿ. ನಾನು ಸಿದ್ದರಾಮಯ್ಯ ಸಹಿ ಹಾಕಿರೋ ಗ್ಯಾರಂಟಿ ಕಾರ್ಡ್ ನಿಮ್ಮ ಮನೆಗೆ ಬರ್ತದೆ. ಇನ್ನು ಪ್ರತಿ ಮನೆಗೆ ನೀಡಲಾಗುವ 5 ಕೆ.ಜಿ ಅಕ್ಕಿಯನ್ನು 10 ಕೆ.ಜಿಗೆ ಏರಿಕೆ ಮಾಡುತ್ತೇವೆ. ಮೇ ತಿಂಗಳಲ್ಲಿ ನಿಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ, ಜೂನ್ ತಿಂಗಳಿಂದ ಈ ಯೋಜನೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ನಾವು ಯೋಜನೆ ಜಾರಿ ಮಾಡದಿದ್ದರೆ ನಾನು ಹಾಗೂ ಸಿದ್ದರಾಮಯ್ಯ ಅವರು ಮತ್ತೆ ಮತ ಕೇಳಲು ನಿಮ್ಮ ಮುಂದೆ ಬರುವುದಿಲ್ಲ.

ಇಂತಹ ಯಾವುದಾದರೂ ಕಾರ್ಯಕ್ರಮವನ್ನು ಬಿಜೆಪಿ ಸರ್ಕಾರ ನೀಡಿದೆಯಾ? ಅಚ್ಛೇ ದಿನ ನೀಡುತ್ತೇವೆ ಎಂದಿದ್ದರು. ನೀಡಿದ್ದಾರಾ? ಇಲ್ಲಿನ ಸಂಸದ ನಾರಾಯಣ ಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಮೀಸಲಾತಿ ವಿಚಾರವಾಗಿ ಕೇವಲ ಆದೇಶ ನೀಡಿದ್ದಾರೆ. ಇದನ್ನು ಕಾನೂನು ಮಾಡಲು ಈ ಸರ್ಕಾರ ಮುಂದಾಗಿಲ್ಲ. ಸ್ವಾಮೀಜಿಗಳು ಹೇಳುವಂತೆ ಇವರು ಮೀಸಲಾತಿ ತುಪ್ಪವನ್ನು ತಲೆಗೆ ಸವರಿದ್ದಾರೆ. ನಾರಾಯಣಸ್ವಾಮಿಗೆ ಮಾನ ಮರ್ಯಾದೆ ಇದ್ದರೆ ಕೊಟ್ಟ ಮಾತಿನಂತೆ ಮೀಸಲಾತಿಯನ್ನು ಕಾನೂನು ಪ್ರಕಾರ ಜಾರಿಗೆ ಮಾಡಿ. ಇಲ್ಲದಿದ್ದರೆ ರಾಜೀನಾಮೆ ನೀಡಿ. ಈ ಸರ್ಕಾರ ಪ್ರತಿ ಮಾತಿನಲ್ಲಿ ಸುಳ್ಳು ಹೇಳುತ್ತಿದೆ.

ಬಿಜೆಪಿ ಸರ್ಕಾರಕ್ಕೆ ಮತದಾರರ ಮೇಲೆ ನಂಬಿಕೆ ಇದ್ದರೆ ತಾಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆ ಮಾಡಬೇಕಿತ್ತು. ಅವರಿಗೆ ಸೋಲಿನ ಭಯ ಬಂದಿದೆ. ಈ ಸರ್ಕಾರದ ಅವಧಿ ಕೇವಲ 50 ದಿನ. ಅವರನ್ನು ಗಂಟು ಮೂಟೆ ಕಟ್ಟಿಸಿ ಮನೆಗೆ ಕಳುಹಿಸಿ ಈ ವೇದಿಕೆ ಮೇಲಿರುವವರನ್ನು ವಿಧಾನಸೌಧಕ್ಕೆ ಕಳುಹಿಸಿ.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here